ಗದಗ: ಗದಗ-ಬೆಟಗೇರಿ ಅವಳಿ ನಗರಗಳು ಮುದ್ರಣ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿವೆ. ಹೆಜ್ಜೆ ಹೆಜ್ಜೆಗೂ ಮುದ್ರಣಾಲಯಗಳು ಗೋಚರಿಸುತ್ತವೆ. ಆದರೆ, ಈ ಬಾರಿ ಮಹಾಮಾರಿ ಕೊರೊನಾದಿಂದ ಮುದ್ರಣಾಲಯಗಳ ಸ್ಥಿತಿ ಹಿಂದೆಂದಿಗಿಂತಲೂ ಅಯೋಮಯವಾಗಿತ್ತು. ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿದ ಮುದ್ರಣಾಲಯಗಳು ಸಪ್ಪಗಾಗಿದ್ದವು.
ಕೊರೊನಾದಿಂದ ತಣ್ಣಗಾಗಿದ್ದ ಮುದ್ರಣಾಲಯಗಳಿಗೆ ಗ್ರಾಮ ಪಂಚಾಯತಿ ಎಲೆಕ್ಷನ್ ಜೀವಕಳೆ ತಂದುಕೊಟ್ಟಿದೆ. ಲೋಕಲ್ ದಂಗಲ್ ಆರಂಭವಾದ ನಂತರ ಮುದ್ರಣಾಲಯಗಳು ಆರ್ಥಿಕವಾಗಿ ಚೇತರಿಕೆ ಕಂಡಿವೆ. ಮುದ್ರಣ ಕಾಶಿ ಗದಗ ಜಿಲ್ಲೆಯ ಮುದ್ರಣಾಲಯಗಳು ಮತ್ತೆ ಪುಟಿದೆದ್ದಿವೆ. ಲೋಕಲ್ ಫೈಟ್ನಿಂದಾಗಿ ಒಟ್ಟು ಒಂದು ಕೋಟಿ ವಹಿವಾಟು ನಡೆದಿದೆ ಎಂದು ಮುದ್ರಣಾಲಯದ ಮಾಲೀಕರು ಖುಷಿಯಿಂದ ಹೇಳಿಕೊಂಡಿದ್ದಾರೆ.
ಗದಗದಲ್ಲಿ ಮುದ್ರಣಗೊಳ್ಳುವ ಪಠ್ಯಪುಸ್ತಕ, ಗ್ರಂಥ, ಕ್ಯಾಲೆಂಡರ್ ಮುಂತಾದವುಗಳು ದೇಶ, ವಿದೇಶದಲ್ಲಿ ಸರಬರಾಜಾಗುತ್ತವೆ. ವರ್ಷದ 12 ತಿಂಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುದ್ರಣಾಲಯಗಳು ಈ ಬಾರಿ ಲಾಕ್ಡೌನ್ನಿಂದ ಸಂಪೂರ್ಣ ಸ್ತಬ್ಧವಾಗಿದ್ದವು. ಲಾಕ್ಡೌನ್ ತೆರವುಗೊಂಡ ನಂತರ ಕೂಡಾ ಹೆಚ್ಚಿನ ಬೇಡಿಕೆ ಬಂದಿರಲಿಲ್ಲ.
ಶಾಲೆ, ಕಾಲೇಜು ಆರಂಭವಾಗದೇ ಇರುವುದು ಸಹ ಹೊಡೆತಕ್ಕೆ ಕಾರಣ
ಶಾಲೆ-ಕಾಲೇಜುಗಳು ಇನ್ನೂ ಆರಂಭವಾಗದೇ ಇರುವುದು ಮುದ್ರಣಾಲಯಗಳಿಗೆ ದೊಡ್ಡ ಹೊಡೆತ ನೀಡಿದ್ದವು. ಅಂತೂ ಈಗ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ಆರಂಭವಾಗಿರೋದರಿಂದ ಮುದ್ರಣಾಲಯಗಳು ಚೇತರಿಕೆ ಕಂಡಿವೆ. ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮುದ್ರಣಕ್ಕೂ ಅನುಕೂಲವಾಗಿದೆ ಎಂದು ಮುದ್ರಣಾಲಯಗಳ ಮಾಲೀಕರು ಅಭಿಪ್ರಾಯಪಡುತ್ತಿದ್ದಾರೆ.
ಲೋಕಲ್ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು ಪ್ರಚಾರಕ್ಕೆ ಕರಪತ್ರಗಳನ್ನು ಪ್ರಿಂಟ್ ಹಾಕಿಸಲು ಬರ್ತಾ ಇದ್ದಾರೆ. ಇದರಿಂದಾಗಿ ಆರ್ಥಿಕ ಚೇತರಿಕೆ ಕಾಣುತ್ತಿದ್ದೇವೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಸುಮಾರು 150 ಕ್ಕೂ ಹೆಚ್ಚು ಮುದ್ರಣಾಲಯಗಳಿದ್ದು, ಒಂದು ಕೋಟಿ ವಹಿವಾಟು ನಡೆದಿದೆ ಅಂತಾರೆ ಮುದ್ರಣಾಲಯದ ಅಧ್ಯಕ್ಷ ವಿನತಕುಮಾರ್ ಜಗತಾಪ್ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯಿಂದ ಮುದ್ರಣಾಲಯಕ್ಕೆ ಜೀವ ಬಂದಿದೆ. ಗದಗ ಜಿಲ್ಲೆಯ ಏಳು ತಾಲ್ಲೂಕು ಸೇರಿದಂತೆ ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಸಹ ಗದಗ ಜಿಲ್ಲೆಗೆ ಬಂದು ಕರಪತ್ರಗಳನ್ನು ಪ್ರಿಂಟ್ ಹಾಕಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇಲ್ಲದೆ ಕುಳಿತಿದ್ದ ಮುದ್ರಣಾಲಯಗಳು ಈಗ ರಾತ್ರಿ ಹಗಲು ಎನ್ನದೆ ಕೆಲಸ ನಿರ್ವಹಣೆ ಮಾಡುತ್ತಿವೆ. ಈಗೀಗ ಮದುವೆ, ಮುಂಜಿ ಕಾರ್ಯಗಳಿಗೆ ಆಮಂತ್ರಣ ಮಾಡಿಸಲು ಜನರು ಬರುತ್ತಿದ್ದಾರೆ. ಆದರೂ ಚುನಾವಣೆ ಬಂದಿರೋದರಿಂದ ಆರ್ಥಿಕವಾಗಿ ನಮಗೆ ಬಹಳ ಲಾಭ ಆಗಿದೆ ಎಂದು ವೆಂಕಟೇಶ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕರೊನಾ ಹಾವಳಿಯಿಂದ ದಿವಾಳಿಯಾಗಿದ್ದ, ಮುದ್ರಣಾಲಯಗಳು ಅಂತೂ ಇಂತೂ ಆರ್ಥಿಕವಾಗಿ ಚೇತರಿಕೆ ಕಂಡಿವೆ. ಒಟ್ಟಿನಲ್ಲಿ ಲೋಕಲ್ ಅಖಾಡದಿಂದ ಈ ಉದ್ಯಮ ಚೇತರಿಕೆ ಕಂಡಿದೆ. ಸದ್ದಡಗಿದ್ದ ಮುದ್ರಣಾಲಯಗಳಲ್ಲಿ ಮತ್ತೆ ಸದ್ದು ಮೂಡುವ ಮೂಲಕ ಮರುಜೀವ ಬಂದಂತಾಗಿದೆ.
Published On - 7:23 am, Sat, 26 December 20