
ವಿಶ್ವದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಭಾರತದಲ್ಲೂ ತನ್ನ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ವರ್ಷಗಳ ಹಿಂದೆಯೇ ಘೋಷಿಸಿತ್ತು. ಇದಾಗ್ಯೂ ಭಾರತದ ರಸ್ತೆಗಳಲ್ಲಿ ಟೆಸ್ಲಾ ಕಾರುಗಳು ಕಂಡು ಬಂದಿರಲಿಲ್ಲ. ಆದರೆ ಇದೀಗ ಟೆಸ್ಲಾ ಕಂಪೆನಿಯ ಕಾರೊಂದು ಭಾರತದಲ್ಲಿ ಕಾಣಿಸಿಕೊಂಡಿದೆ. ಅದು ಕೂಡ ಪರೀಕ್ಷಾರ್ಥ ಕಾರು ಎಂಬುದು ವಿಶೇಷ.

ಅಂದರೆ ಟೆಸ್ಲಾ ತನ್ನ ಕಾರುಗಳನ್ನು ಭಾರತೀಯ ರಸ್ತೆಗಳಲ್ಲಿ ಡ್ರೈವಿಂಗ್ ಮೋಡ್ಗಳನ್ನು ಪರೀಕ್ಷಿಸಲು ಮುಂದಾಗಿದೆ. ಅದಕ್ಕೆ ಸಾಕ್ಷಿಯೇ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಭಾರತದ ಪ್ರಮುಖ ರಸ್ತೆಗಳಲ್ಲಿ ಓಡಾಡಿರುವುದು. ನೀಲಿ ಬಣ್ಣದ ಎರಡು ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಟೆಸ್ಟ್ ಡ್ರೈವ್ ಮಾಡಲಾಗಿದ್ದು, ಇದರ ಬೆನ್ನಲ್ಲೇ ಹೊಸ ಕಾರಿನ ಒಂದಷ್ಟು ಮಾಹಿತಿಗಳು ಹೊರಬಿದ್ದಿದೆ. ಹೀಗಾಗಿ ಹೊಸ ಕಾರು ಶೀಘ್ರದಲ್ಲೇ ದೇಶದಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಟೆಸ್ಟ್ ಡ್ರೈವ್ ಮಾಡಲಾದ ಟೆಸ್ಲಾ ಕಾರುಗಳ ವಿನ್ಯಾಸವು ಮಾಡೆಲ್ 3 ಕಾಂಪ್ಯಾಕ್ಟ್ ಸೆಡಾನ್ ಬಾಡಿ ಸ್ಟೈಲ್ ಹೊಂದಿದ್ದು, ಇನ್ನು ಮಾಡೆಲ್ ವೈ ಕಾಂಪ್ಯಾಕ್ಟ್ ಕೂಪ್ ಶೈಲಿಯ ಎಸ್ ಯುವಿ ಲುಕ್ ಹೊಂದಿದೆ. ವಿನ್ಯಾಸದ ದೃಷ್ಟಿಯಿಂದ ಎರಡೂ ಕಾರುಗಳ ನಡುವೆ ಹಲವು ಸಾಮ್ಯತೆಗಳಿವೆ.

ಕಂಪೆನಿಯಲ್ಲಿ ಈ ಕಾರುಗಳಲ್ಲಿ ಒಂದೇ ಕೋನೀಯ ಎಲ್ಇಡಿ ಹೆಡ್‌ಲೈಟ್‌ಗಳನ್ನು ನೀಡಿವೆ. ಹಾಗೆಯೇ, ಒಂದೇ ರೀತಿಯ ಅಲ್ಹೋವ್ ವೀಲ್ ಹಾಗೂ ಸೈಡ್ ವಿನ್ಯಾಸ ಕೂಡ ಒಂದೇ ಮಾದರಿಯಲ್ಲಿದೆ. ಆದಾಗ್ಯೂ, ಕಾರುಗಳ ಮುಂಭಾಗದ ಬಂಪರ್ ಮಾದರಿಯಲ್ಲಿ ವ್ಯತ್ಯಾಸವನ್ನು ಕಂಡು ಬರುತ್ತವೆ. ಮಾಡೆಲ್ 3 ನಲ್ಲಿ ಸ್ಲೀಪರ್ ವಿನ್ಯಾಸಕ್ಕೆ ಹೋಲಿಸಿದರೆ ಚಪ್ಪಟೆಯಾದ ಮತ್ತು ಸ್ಪೋರ್ಟಿಂಗ್ ಲುಕ್ ನೀಡಲಾಗಿದೆ.

ಇನ್ನು ಕಾರಿನ ಒಳ ವಿನ್ಯಾಸವನ್ನು ನೋಡುವುದಾದರೆ, ಹಲವು ಫೀಚರ್ಗಳನ್ನು ಒಳಗೊಂಡಿರುವ ಹಾಗೂ ಇಡೀ ಕಾರನ್ನು ನಿಯಂತ್ರಿಸುವ 15 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಇದರಲ್ಲಿ ನೀಡಲಾಗಿದೆ. ಹಾಗೆಯೇ ಸರಳ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಕಾಣಬಹುದು. ಇದಲ್ಲದೆ ಮತ್ತಿತ್ತರ ಒಳಾಂಗಣ ವಿನ್ಯಾಸವು ಐಷರಾಮಿ ಕಾರಿಗೆ ತಕ್ಕಂತಿದೆ ಎಂದು ಹೇಳಬಹುದು.

ಟೆಸ್ಲಾ ಮಾಡೆಲ್ ವೈ ಕೇವಲ 4.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 96 ಕಿಮೀ ವೇಗ ಪಡೆಯುತ್ತದೆ. ಹಾಗೆಯೇ ಈ ಎಲೆಕ್ಟ್ರಿಕ್ ಕಾರ್ 217 ಕಿಲೋಮೀಟರ್ ಗರಿಷ್ಠ ವೇಗ ಹೊಂದಿದೆ. ಇನ್ನು ಅತ್ಯಾಧುನಿಕ ಬ್ಯಾಟರಿ ಪ್ಯಾಕ್ ಹೊಂದಿರುವ ಎಲೆಕ್ಟ್ರಿಕ್ ಎಸ್‌ಯುವಿ ಒಂದೇ ಚಾರ್ಜ್‌ನಲ್ಲಿ 525 ಕಿಮೀ ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಒಟ್ಟಿನಲ್ಲಿ ಟೆಸ್ಲಾ ಕಾರುಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಕಾರು ಪ್ರಿಯರಿಗೆ ಇದೀಗ ಟೆಸ್ಟ್ ಡ್ರೈವ್ ಮೂಲಕ ಶೀಘ್ರದಲ್ಲೇ ಭಾರತದಲ್ಲಿ ಮಾರಾಟ ಆರಂಭಿಸುವ ಸೂಚನೆ ನೀಡಿದೆ.