ಹಂಪಿಯಲ್ಲಿ ಯೋಗ ದಿನ ಸ್ಮರಣೀಯಗೊಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಸಿದ್ಧತೆ, ಎನೆಲ್ಲಾ ಇದೆ ಕಾರ್ಯಕ್ರಮದಲ್ಲಿ?

| Updated By: ಸಾಧು ಶ್ರೀನಾಥ್​

Updated on: Jun 18, 2022 | 1:00 PM

Yoga in Hampi: ಹಂಪಿಯಲ್ಲಿ ನಡೆಯುವ ಯೋಗ ದಿನಾಚರಣೆ ನಿಮಿತ್ತ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸಕಲ ವ್ಯವಸ್ಥೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ. ಉಪಾಹಾರ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಯೋಗಾಸನಕ್ಕಾಗಿ ಗ್ರೀನ್‌ ಮ್ಯಾಟ್‌, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ವೇದಿಕೆ, ಧ್ವನಿವರ್ಧಕಗಳನ್ನು ಅಳವಡಿಸಲಾಗುತ್ತಿದೆ.

ಹಂಪಿಯಲ್ಲಿ ಯೋಗ ದಿನ ಸ್ಮರಣೀಯಗೊಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಸಿದ್ಧತೆ, ಎನೆಲ್ಲಾ ಇದೆ ಕಾರ್ಯಕ್ರಮದಲ್ಲಿ?
ವಿಶ್ವ ಪಾರಂಪರಿಕ ಹಂಪಿಯಲ್ಲಿ ಯೋಗ ದಿನ ಸ್ಮರಣೀಯಗೊಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಸಿದ್ಧತೆ
Follow us on

ಸುಸ್ಥಿರ ಆರೋಗ್ಯ ಮತ್ತು ಬದುಕಿನ ಉದ್ದೇಶದಿಂದ ನಡೆಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ವಿಶ್ವವೇ ಸಿದ್ಧತೆ ನಡೆಸುತ್ತಿರುವಂತೆ, ಈ ಬಾರಿ ವಿಶೇಷವಾಗಿ ವಿಶ್ವ ಪಾರಂಪರಿಕ ತಾಣದಲ್ಲೂ ಯೋಗ ದಿನಾಚರಣೆ ನಡೆಯಲಿದೆ. ವಿಶ್ವ ಪ್ರಸಿದ್ಧ ಪಾರಂಪರಿಕ ತಾಣ, ವಿಜಯನಗರ ಸಾಮ್ರಾಜ್ಯದ ರಾಜಧಾನಿ, ಕಲೆ, ಸಾಂಸ್ಕೃತಿಕ ಶ್ರೀಮಂತಿಕೆಯ ಕೇಂದ್ರ ಹಂಪಿಯಲ್ಲೂ (Hampi) ಜೂನ್ 21ರಂದು ಯೋಗ ದಿನಾಚರಣೆ ನಡೆಯಲಿದೆ ( International Yoga Day 2022).

ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತವಾಗಿಯೂ 75 ಸ್ಥಳಗಳಲ್ಲಿ ಯೋಗ ದಿನಾಚರಣೆ ವಿಶೇಷವಾಗಿ ನಡೆಯಲಿದ್ದು ಅದರಲ್ಲಿ ಕರ್ನಾಟಕದ ಹಂಪಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಯೋಗ ದಿನಾಚರಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಾರಂಪರಿಕ ನಗರ, ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಅದೇ ರೀತಿ ಹಂಪಿಯಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು ಭಾಗಿಯಾಗಲಿದ್ದಾರೆ. ಇವರೊಂದಿಗೆ ನಟ ಅಜಯ್ ರಾವ್, ಪ್ರದ್ಮಶ್ರೀ ಮಂಜಮ್ಮ ಜೋಗತಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಹಂಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಕೇಂದ್ರದ ಯೋಗಿಗಳು, ಆರ್ಟ್ ಆಫ್ ಲಿವಿಂಗ್ ನ ಯೋಗಪಟುಗಳು, ಬ್ರಹ್ಮಕುಮಾರಿ ಸಂಸ್ಥೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು , ಸಾರ್ವಜನಿಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನರು ಈ ವಿಶೇಷ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಜೂನ್ 21ರಂದು ಬೆಳಗ್ಗೆ 6 ಗಂಟೆಗೆ ಯೋಗ ದಿನಾಚರಣೆ ಕಾರ್ಯಕ್ರಮಗಳು ಆರಂಭವಾಗಲಿದ್ದು, 6.40ರವರೆಗೆ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಚಿವರಾದ ಪ್ರಲ್ಹಾದ್‌ ಜೋಶಿ, ಆನಂದ್ ಸಿಂಗ್‌, ಶಶಿಕಲಾ ಜೊಲ್ಲೆ ಮಾತನಾಡಲಿದ್ದಾರೆ.

ಯೋಗ ದಿನಾಚರಣೆಯನ್ನ ವಿಶೇಷವಾಗಿ ನಡೆಸುವ ನಿಮಿತ್ತ, ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸಕಲ ವ್ಯವಸ್ಥೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ. ಜನರ ಪಾಲ್ಗೊಳ್ಳುವಿಕೆಯನ್ನ ಹೆಚ್ಚಿಸಲು ಖಾಸಗಿ ಬಸ್‌ಗಳನ್ನು ಹೊರತು ಪಡಿಸಿ 60ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆಯನ್ನು ವಿವಿಧ ಕಡೆಗಳಿಂದ ಮಾಡಲಾಗುತ್ತಿದೆ.

ಇದರೊಂದಿಗೆ ಆಗಮಿಸುವವರಿಗೆ ಉಪಾಹಾರ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಯೋಗಾಸನಕ್ಕಾಗಿ ಗ್ರೀನ್‌ ಮ್ಯಾಟ್‌, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ವೇದಿಕೆ, ಧ್ವನಿವರ್ಧಕಗಳನ್ನು ಅಳವಡಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಟಿಶರ್ಟ್‌, ಕ್ಯಾಪ್‌ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿಯ ಯೋಗ ದಿನಾಚರಣೆ ಹಂಪಿ ಪಾರಂಪರಿಕ ತಾಣದಲ್ಲಿ ವಿಶೇಷವಾಗಿ ನಡೆಯಲಿದ್ದು ಅದನ್ನು ಸ್ಮರಣೀಯವಾಗಿಸಲು ಎಲ್ಲ ರೀತಿಯಿಂದ ಸಿದ್ಧತೆಗಳನ್ನು ಮಾಡಲಾಗುತ್ತಿದೆ.