ದೇಶದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಅಬ್ಬರದಲ್ಲಿ ಸಾಕಷ್ಟು ಆಶ್ವಾಸನೆಗಳನ್ನು ನೀಡುತ್ತವೆ. ಈ ಆಶ್ವಾಸನೆಗಳಲ್ಲೊಂದು “ಉಚಿತ ಸೌಲಭ್ಯ”. ದೇಶದ ವಿವಿಧ ರಾಜ್ಯಗಳಲ್ಲಿ ಸಾಕಷ್ಟು ಯೋಜನೆಗಳು ಜನರಿಗೆ ಉಚಿತವಾಗಿ ದೊರೆಯುತ್ತಿವೆ. ಇದರಿಂದ ಸರ್ಕಾರದ ಮೇಲೆ ಸಾಕಷ್ಟು ಹೊರೆಯಾಗುತ್ತಿದ್ದರೂ, ಅದರ ಪರಿವೇ ಇಲ್ಲದೆ ಆಶ್ವಾಸನೆಗಳನ್ನು ನೀಡುತ್ತಿವೆ. ಹೀಗೆಯೇ ಕರ್ನಾಟಕದಲ್ಲೂ ಕೂಡ ರಾಜ್ಯ ಕಾಂಗ್ರೆಸ್ ನಾಯಕರು ಉಚಿತವಾಗಿ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ.
ಉಚಿತ ನೀಡುವ ವಿಚಾರಕ್ಕೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಚುನಾವಣೆ ಸಮಯದಲ್ಲಿ ದೇಶದಲ್ಲಿ ಉಚಿತ ರೇವಡಿ ಹಂಚುವ ಸಂಸ್ಕೃತಿ ಹುಟ್ಟಿಕೊಂಡಿದ್ದು ಇದು ದೇಶದ ಅಭಿವೃದ್ಧಿಗೆ ಅಪಾಯಕಾರಿ ಈ ಸಂಸ್ಕೃತಿ ಬಿಡಬೇಕು ಎಂದು ಹೇಳಿದ್ದರು.
ನಂತರ ಈ ವಿಚಾರವಾಗಿ ವಕೀಲ ಮತ್ತು ಮಾಜಿ ಬಿಜೆಪಿ ದೆಹಲಿ ವಕ್ತಾರ ಅಶ್ವಿನಿ ಉಪಾಧ್ಯಾಯ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಭರವಸೆಗಳನ್ನು ನೀಡಲು ಅನುಮತಿ ನೀಡದಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನಿರ್ದೇಶಿಸಬೇಕೆಂದು ಸುಪ್ರಿಂ ಕೋರ್ಟ್ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆಯನ್ನು ನಡೆಸಿದ್ದ ಸುಪ್ರಿಂ ಕೋರ್ಟ್, ತೆರಿಗೆದಾರರ ಹಣ ಬಳಸಿಕೊಂಡು ರಾಜಕೀಯ ಪಕ್ಷಗಳು ಉಚಿತ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುವುದು ಆಯಾ ರಾಜ್ಯವನ್ನು ದಿವಾಳಿತನದತ್ತ ತಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 26 2022 ರಂದು ಅಭಿಪ್ರಯಾಪಟ್ಟಿತ್ತು.
ಉಚಿತವಾಗಿ ನೀಡುತ್ತೇವೆ ಎಂಬ ರಾಜಕೀಯ ಪಕ್ಷಗಳಿಗೆ ಭಾರತೀಯ ಚುನಾವಣಾ ಆಯೋಗ ಕೂಡ ಚಾಟಿ ಬೀಸಿದೆ. ರಾಜಕೀಯ ಪಕ್ಷಗಳು ಮತದಾರರಿಗೆ ಚುನಾವಣೆಗೂ ಮೊದಲು ನೀಡಿದ ಭರವಸೆಗಳ ವೆಚ್ಚದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಹಾಗೂ ಈ ವೆಚ್ಚದ ಪರಿಕಲ್ಪನೆಯನ್ನು ಜನರಿಗೂ ತಿಳಿಸುವಂತೆ ಹೇಳಿದೆ. ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಚುನಾವಣಾ ಆಯೋಗದ ಖಡಕ ಸಂದೇಶದ ನಂತರವೂ ಕೂಡ ರಾಜ್ಯದ ನಾಯಕರು ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತೇವೆ ಎಂದು ಉಚಿತ ಭರವಸೆ ನೀಡಿದ್ದಾರೆ.
ಇದೀಗ ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ರಾಜ್ಯ ಕರ್ನಾಟಕ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಮೂಲಕ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು (ಜ.11) ಬೆಳಗಾವಿಯಿಂದ ಪ್ರಾರಂಭವಾದ ಬಸ್ ಯಾತ್ರೆ (ಪ್ರಜಾಧ್ವನಿ ಯಾತ್ರೆ) ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾವು ಅಧಿಕಾರಕ್ಕೆ ಬಂದರೆ 1.5 ಕೋಟಿ ಕುಟುಂಬಗಳಿಗೆ 200 ಯುನಿಟ್ ಉಚಿತವಾಗಿ ವಿದ್ಯುತ್ ನೀಡುತ್ತೇನೆ ಎಂದು ಘಂಟಾಘೋಷವಾಗಿ ಘೋಷಿಸಿದರು. ಇದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುವೆ ಸಾಧ್ಯತೆ ಇದೆ.
ಸದ್ಯ ರಾಜ್ಯದ ಬಜೆಟ್ 3 ಲಕ್ಷ ಕೋಟಿ ಇದ್ದು, ಹೀಗಿರುವಾಗ ಈ ಉಚಿತ ಆಶ್ವಾಸನೆ ರಾಜ್ಯದ ಬಜೆಟ್ ಮೇಲೆ ಪರಿಣಾಮ ಬೀಳಲಿದೆ. ಹೌದು ಪ್ರಸ್ತುತ ನಮ್ಮ ರಾಜ್ಯದಲ್ಲಿ ವಿದ್ಯುತ್ ದರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ನಗರದ ಪ್ರದೇಶದ ವಿದ್ಯುತ್ ದರ ಮತ್ತೊಂದು ಗ್ರಾಮೀಣ ಪ್ರದೇಶದ ವಿದ್ಯುತ್ ದರ.
ಪ್ರತಿಯುನಿಟ್ ಲೆಕ್ಕಾಚಾರದಂತೆ 200 ಯುನಿಟ್ ವಿದ್ಯುತ್ನ್ನು 1.5 ಕೋಟಿ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಾ ಹೋದರೆ ಸರ್ಕಾರದ ಮೇಲೆ ಪ್ರತಿ ವರ್ಷ 5400 ಕೋಟಿಗೂ ಹೆಚ್ಚಿನ ಹೊರ ಬೀಳುವ ಸಾಧ್ಯತೆ ಇದೆ. ರಾಜ್ಯದಲ್ಲಿ 1,77,77,539 ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, 801.75 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಆಗುತ್ತಿದೆ. ಪ್ರಸ್ತುತ ಇರುವ ವಿದ್ಯುತ್ ದರಗಳ ಆಧಾರದ ಮೇಲೆ ರಾಜ್ಯಕ್ಕೆ 5403.60 ಕೋಟಿ ಖರ್ಚು ಬರುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಕೆಪಿಟಿಸಿಎಲ್ನಲ್ಲಿರುವ ಮೂಲಗಳು ತಿಳಿಸಿವೆ.
ಈಗಾಗಲೇ ಕೆಪಿಟಿಸಿಎಲ್(KPTCL) ಸೇರಿದಂತೆ ವಿವಿಧ ವಿದ್ಯುತ್ ಕಂಪನಿಗಳು ಭಾರೀ ಸಾಲವನ್ನು ಹೊತ್ತುಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ವಿದ್ಯುತ್ ಕಂಪನಿಗಳು ಒಟ್ಟು 29,328 ಕೋಟಿ ರೂ. ಸಾಲ ಮಾಡಿವೆ. ಈ ಪೈಕಿ ಬೆಸ್ಕಾಂ(BESCOM) 13,613.50 ಕೋಟಿ ರೂ., ಮೆಸ್ಕಾಂ(MESCOM)1282.26 ಕೋಟಿ ರೂ., ಹೆಸ್ಕಾಂ(HESCOM) 7642.74 ಕೋಟಿ ರೂ., ಜೆಸ್ಕಾಂ(GESCOM) 3241.73 ಕೋಟಿ ರೂ., ಸೆಸ್ಕಾಂ(CESCOM) 3548.54 ಕೋಟಿ ರೂ. ಸಾಲವನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾಡಿವೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ರೈತರ ಪಂಪಸೆಟ್ಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ.
ಹೌದು… ರೈತರ ಈ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ವರ್ಷಕ್ಕೆ ಸುಮಾರು 15 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಇನ್ನು ಇದರಲ್ಲಿ ಅದೆಷ್ಟೋ ಕದ್ದು-ಮುಚ್ಚಿ ವಿದ್ಯುತ್ ಹರಿದು ಹೋಗುತ್ತಿದೆ. ಅದು ಲೆಕ್ಕ ವೇ ಇಲ್ಲ. ಇದರ ಮಧ್ಯೆ ಕಾಂಗ್ರೆಸ್ ಏನಾದರೂ ಮುಂದೆ ಅಧಿಕಾರಕ್ಕೆ ಬಂದು ಘೋಷಣೆಯಂತೆ ಉಚಿತ ವಿದ್ಯುತ್ ಕೊಟ್ಟರೇ ಅಲ್ಲಿಗೆ ಸುಮಾರು 21 ಸಾವಿರ ಕೋಟಿ ರೂ. ಹೊರೆಬೀಳಲಿದೆ. ಇದರೊಂದಿಗೆ ವಿದ್ಯುತ್ ಕಂಪನಿಗಳ ಆರ್ಥಿಕ ಸ್ಥಿತಿ ಅಧೋಗತಿಗಿಳಿಯುವುದರಲ್ಲಿ ಅನುಮಾನವೇ ಇಲ್ಲ.
ಹೀಗೆ ವಿದ್ಯುತ್ ಕಂಪನಿಗಳು ಉಚಿತ ಕೊಟ್ಟು-ಕೊಟ್ಟು ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದ್ರೆ, ಇತ್ತ ರಾಜಕೀಯ ನಾಯಕರು ಮಾತ್ರ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋದಲೆಲ್ಲ ಉಚಿತ ವಿದ್ಯುತ್ ಘೋಷಣೆಗಳನ್ನ ಮಾಡುತ್ತಿರುವುದು ವಿಪರ್ಯಾಸವೇ ಸರಿ.
ಡಿಕೆ ಶಿವಕುಮಾರ್ ಘೋಷಿಸಿದಂತೆ ಮುಂದಿನ ದಿನಗಳಲ್ಲಿ ಏನಾದರೂ ಉಚಿತ ವಿದ್ಯುತ್ ನೀಡಿದ್ರೆ ರಾಜ್ಯದ ಅರ್ಥವ್ಯವಸ್ಥೆ ತಲೆಕೆಳಗಾಗುವುದರಲ್ಲಿ ಅನುಮಾನವೇ ಇಲ್ಲ.
ವಿವೇಕ ಬಿರಾದಾರ ಟಿವಿ9 ಡಿಜಿಟಲ್
Published On - 12:40 am, Thu, 12 January 23