ಬೆಂಗಳೂರು: ನಾಳೆ (ಜ.12) ಹುಬ್ಬಳ್ಳಿ-ಧಾರವಾಡ (Hubli-Dharwad) ಅವಳಿನಗರದಲ್ಲಿ ನಡೆಯುತ್ತಿರುವುದು ರಾಷ್ಟ್ರೀಯ ಯುವಜನೋತ್ಸವ (National Youth Fest) ಅಲ್ಲ, ಯುವ ವಿನಾಶೋತ್ಸವ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬಿಜೆಪಿ (BJP) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು ನಿರುದ್ಯೋಗ, ಸರ್ಕಾರಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೀತಿದೆ. ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಯುವ ಸಮುದಾಯ ಕೋಮುಗಲಭೆಗೆ ಬಲಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನು ಅಣಕಿಸುವಂತೆ ಪ್ರಧಾನಿ ಮೋದಿ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಬರುತ್ತಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 25 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿಗಳಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ 2.52 ಲಕ್ಷ ಉದ್ಯೋಗಗಳು ಖಾಲಿ ಇವೆ. ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ಹುದ್ದೆಗಳು ಭರ್ತಿಯಾಗಿಲ್ಲ. ಸಣ್ಣ ಕೈಗಾರಿಕೆಗಳು ಮುಚ್ಚಿದ್ದರಿಂದ 83,190 ಜನರು ನಿರುದ್ಯೋಗಿಗಳಾಗಿದ್ದಾರೆ. ಈ ಸ್ಥಿತಿಯಲ್ಲಿ ಯಾವ ಮುಖ ಹೊತ್ತು ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ? ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವುದು ಯುವಜನೋತ್ಸವವೇ? ಅಲ್ಲ ಅದು ಯುವಜನ ವಿನಾಶೋತ್ಸವ ಎಂದರು.
ಇದನ್ನೂ ಓದಿ: ಯುಜನೋತ್ಸವಕ್ಕೆ ಮೋದಿ, ವೇದಿಕೆಯಲ್ಲಿ 21 ಗಣ್ಯರಿಗೆ ಅವಕಾಶ: ಜ.12ರಂದು ಹುಬ್ಬಳ್ಳಿ ಶಾಲೆಗಳಿಗೆ ರಜೆ
ಪಿಎಸ್ಐ ಹಗರಣಕ್ಕೆ 1.29 ಲಕ್ಷ ಯುವಜನ ಬಲಿಯಾಗಿದ್ದಾರೆ. ಎಇ ಮತ್ತು ಜೆಇ ಪರೀಕ್ಷೆಗಳ ಪ್ರತಿಯೊಬ್ಬ ಅಭ್ಯರ್ಥಿಗಳಿಂದ ಸುಲಿಗೆಯಾಗಿದೆ. ಪ್ರತಿಯೊಬ್ಬರಿಂದ 50 ರಿಂದ 80 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ. ರೈಲ್ವೆಯ ಭ್ರಷ್ಟ ಅಧಿಕಾರಿಗಳು 22 ಕೋಟಿ ರೂ. ಲೂಟಿ ಮಾಡಿದ್ದಾರೆ. ನೇಮಕಾತಿಯ ಸುಳ್ಳು ಭರವಸೆ ನೀಡಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಬೊಮ್ಮಾಯಿ, ಸಂಪುಟ ಸದಸ್ಯರು ಆಗಾಗ ಗೊಣಗಾಡ್ತಿರುವ ಗುಜರಾತ್ ಮಾದರಿ ಇದೇ ಆಗಿರಬಹುದು. ಡಬಲ್ ಇಂಜಿನ್ ಸರ್ಕಾರ ಯುವಜನರಿಗೆ ದ್ರೋಹ ಮಾಡಿದೆ. ಕನ್ನಡಿಗ ಯುವಕರಿಗೆ ಮಾಡಿರುವ ದ್ರೋಹ ಇತಿಹಾಸ ಮರೆಯದು. ಪ್ರಾದೇಶಿಕ ಭಾಷೆಯಲ್ಲಿ ಕೇಂದ್ರ ನೇಮಕಾತಿ ಪರೀಕ್ಷೆಗೆ ನಕಾರ ಯುವಜನರನ್ನು ತಾವು ಹುಟ್ಟಿದ ನಾಡಿನಲ್ಲೇ ಅನಾಥರನ್ನಾಗಿಸಿದೆ ಎಂದರು.
ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷೆ ಕೂಡ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಬೇಕು. ಎರಡೇ ಭಾಷೆಯಲ್ಲಿ ಪರೀಕ್ಷೆ ಬರೆಯುವುದರಿಂದ ಬ್ಯಾಂಕ್ಗಳಲ್ಲಿ ಕನ್ನಡಿಗರ ಸಂಖ್ಯೆ ಇಳಿಕೆಯಾಗಿದೆ. ಬ್ಯಾಂಕ್ಗಳಲ್ಲಿ ಕೇವಲ ಶೇಕಡಾ 6ರಷ್ಟು ಕನ್ನಡಿಗ ಉದ್ಯೋಗಿಗಳಿದ್ದಾರೆ. ಸಂವಿಧಾನ ಎಲ್ಲ ಭಾರತೀಯ ಭಾಷೆಗಳಿಗೆ ಮಾನ್ಯತೆ ನೀಡಿದ್ದರೂ, ಐಬಿಪಿಎಸ್ ಪರೀಕ್ಷೆಗಳು ಸೇರಿದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಯಾವ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ಪರೀಕ್ಷೆ ಬರೆಯುವಂತಿಲ್ಲ. ಇದರಿಂದಾಗಿ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಯುವಜನೋತ್ಸವಕ್ಕೆ ಪ್ರಧಾನಿ, ಮೋದಿ ಬರುವ ಮಾರ್ಗ ಉದ್ದಕ್ಕೂ ಪೊಲೀಸ್ ಸರ್ಪಗಾವಲು
ಕಾವೇರಿ ಮತ್ತು ಗಂಗೆಯಲ್ಲಿ ನೂರು ಬಾರಿ ಮುಳುಗಿ ಎದ್ದರೂ, ನೊಂದ ಯುವಕರ ಶಾಪದಿಂದ ಬಿಜೆಪಿಯವರಿಗೆ ಮುಕ್ತಿ ಸಿಗಲಾರದು. ಪಠ್ಯಪುಸ್ತಕ ಮತ್ತು ಪಠ್ಯೇತರ ಚಟುವಟಿಕೆಗಳ ಕೇಸರೀಕರಣಗೊಳಿಸಲು, ಆದ್ಯತೆ ನೀಡುತ್ತಿದೆಯೇ ಹೊರತು ಅಭಿವೃದ್ಧಿಗೆ ಗಮನ ನೀಡುತ್ತಿಲ್ಲ. ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಗಮನ ನೀಡುತ್ತಿಲ್ಲ. ಶಿಕ್ಷಣ ಕ್ಷೇತ್ರದ ಅನುದಾನ ಶೇಕಡಾ 1.97ಕ್ಕಿಂತ ಮೇಲೆ ಏರಿಲ್ಲ. ಸಿಎಜಿ ವರದಿ ಪ್ರಕಾರ 1.62 ಲಕ್ಷ ವಿದ್ಯಾರ್ಥಿಗಳು ಶಾಲೆ ತ್ಯಜಿಸಿದ್ದಾರೆ. 2020-21, 2021-22ರ ಅವಧಿಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 1,965 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ