ಚುನಾವಣಾ ರ್ಯಾಲಿಗಳಲ್ಲಿ ಉಳಿದ ವಿಷಪೂರಿತ ಆಹಾರ ಸೇವಿಸಿ 22 ಜಾನುವಾರುಗಳ ಸಾವು

|

Updated on: Mar 27, 2023 | 6:19 PM

ಎರಡು ಪ್ರತ್ಯೇಕ ಘಟನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 22 ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಇದೇ ತಿಂಗಳು ರಾಯಚೂರು ಮತ್ತು ಯಾದಗಿರಿಯಲ್ಲಿ ನಡೆದಿದೆ.

ಚುನಾವಣಾ ರ್ಯಾಲಿಗಳಲ್ಲಿ ಉಳಿದ ವಿಷಪೂರಿತ ಆಹಾರ ಸೇವಿಸಿ 22 ಜಾನುವಾರುಗಳ ಸಾವು
ಸಾಂದರ್ಭಿಕ ಚಿತ್ರ
Follow us on

ಯಾದಗಿರಿ/ರಾಯಚೂರು: ಎರಡು ಪ್ರತ್ಯೇಕ ಘಟನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 22 ಜಾನುವಾರುಗಳು (Cattle) ಸಾವನ್ನಪ್ಪಿರುವ ಘಟನೆ ಇದೇ ತಿಂಗಳು ರಾಯಚೂರು (Raichuru) ಮತ್ತು ಯಾದಗಿರಿಯಲ್ಲಿ (Yadgiri) ನಡೆದಿದೆ. ಎರಡು ರಾಜಕೀಯ ರ್ಯಾಲಿಯಲ್ಲಿ (Election Rally) ಉಳಿದ ಆಹಾರವನ್ನು ಸೇವಿಸಿ ಜಾನುವಾರುಗಳು ಸಾವನ್ನಪ್ಪಿವೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ಇಂಡಿಯನ್​ ಎಕ್ಸಪ್ರೆಸ್​ ವರದಿ ಮಾಡಿದೆ. ಇತ್ತೀಚಿಗೆ ಮಾರ್ಚ್ 25 ರಂದು ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದಲ್ಲಿ 15 ಜಾನುವಾರುಗಳು ಸತ್ತಿರುವುದು ಬೆಳಕಿಗೆ ಬಂದಿತ್ತು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿದಾಗ ಜಾನುವಾರುಗಳು ಜೆಡಿಎಸ್ ರ್ಯಾಲಿಯಲ್ಲಿ ಉಳಿದ ಆಹಾರವನ್ನು ಸೇವಿಸಿ ಸಾವನ್ನಪ್ಪಿವೆ ಎಂದು ತಿಳಿಸಿದ್ದರು.

ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್​ ಆಕಾಂಕ್ಷಿ ಶರಣಗೌಡ ಕಂದಕೂರ್ ಅವರು ಮಾರ್ಚ್ 24 ರಂದು ಚುನಾವಣಾ ರ್ಯಾಲಿ ನಡೆಸಿದ್ದರು. ಈ ರ್ಯಾಲಿಯಲ್ಲಿ ಉಳಿದ ಆಹಾರವನ್ನು, ಅದೇ ದಿನ ಸಂಜೆ ಗ್ರಾಮದ ಸುಮಾರು 30-35 ಜಾನುವಾರುಗಳು ಸೇವಿಸಿವೆ. ಮರುದಿನ ಬೆಳಗ್ಗೆ ಜಾನುವಾರುಗಳನ್ನು ನೋಡಿದಾಗ ಹೊಟ್ಟೆ ಉಬ್ಬುಗೊಂಡಿದ್ದವು. ಇದರಿಂದ ಕೆಲವು ಜಾನುವಾರುಗಳು ಸಾವನ್ನಪ್ಪಿದವು ಎಂದು ಸ್ಥಳೀಯರು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಗೆಲ್ಲಲು 3 ಪಕ್ಷಗಳ ರಣತಂತ್ರಗಳೇನು? ಸದ್ಯದ ಬಲಾಬಲಗಳೇನು? ರೆಡ್ಡಿ ಮಾಸ್ಟರ್ ಪ್ಲ್ಯಾನ್​ಗಳೇನು?

ಮೆಟಬಾಲಿಕ್ ಆಸಿಡೋಸಿಸ್​ನಿಂದಾಗಿ ಜಾನುವಾರುಗಳು ಸಾವನ್ನಪ್ಪಿವೆ. ಜಾನುವಾರುಗಳು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಬಹಳಷ್ಟು ಆಹಾರವನ್ನು ಸೇವಿಸಿದ್ದರಿಂದ ಸಾವನ್ನಪ್ಪಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಪ್ರಾಣಿಗಳು ಅಪಾರ ಪ್ರಮಾಣದ ಅಕ್ಕಿಯನ್ನು ಸೇವಿಸಿರುವುದು ಸಾವಿಗೆ ಕಾರಣವಾಯಿತು ಎಂದು ಎಂದು ಪಶುಸಂಗೋಪನಾ ಇಲಾಖೆಯ ಯಾದಗಿರಿ ಜಿಲ್ಲಾ ಉಪನಿರ್ದೇಶಕ ರಾಜು ದೇಶಮುಖ ತಿಳಿಸಿದ್ದಾರೆ.

ಜಾನುವಾರುಗಳ ಸಾವಿಗೆ “ವಿಷಪೂರಿತ ಆಹಾರ” ಸೇವನೆಯೇ ಕಾರಣ. ಜಾನುವಾರುಗಳು 5-6 ಕೆ.ಜಿ ಕೊಳೆತ ಆಹಾರವನ್ನು ಸೇವಿಸಿದ್ದು ಅವುಗಳ ಸಾವಿಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಇದೇ ತಿಂಗಳ ಆರಂಭದಲ್ಲಿ ರಾಯಚೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಮಾರ್ಚ್ 10 ರಂದು ನಡೆದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯಲ್ಲಿ ಉಳಿದ ಆಹಾರವನ್ನು ಸೇವಿಸಿ 7 ಜಾನುವಾರುಗಳು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಮಾರ್ಚ್ 10 ರ ರಾತ್ರಿ ರ್ಯಾಲಿಯಲ್ಲಿ ಉಳಿದ ಆಹಾರವನ್ನು 15 ಜಾನುವಾರುಗಳು ಸೇವಿಸಿವೆ. ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ 7 ಜಾನುವಾರಗಳು ಸಾವನ್ನಪ್ಪಿದ್ದವು. 8 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿವೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:46 pm, Mon, 27 March 23