ಹಾಸನ ಜೆಡಿಎಸ್ ಪ್ರಚಾರ ಪುಸ್ತಕದಲ್ಲಿ ಭವಾನಿ ರೇವಣ್ಣ ಫೋಟೊ; ಹೆಚ್ಡಿ ರೇವಣ್ಣ ಹೇಳಿದ್ದೇನು?
ಹಾನಸ ಕ್ಷೇತ್ರದ ಜೆಡಿಎಸ್ ಟಿಕೆಟ್ ಬಗ್ಗೆ ಇರುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಧ್ಯೆಯೇ ಅಲ್ಲಿ ಪಕ್ಷದ ಪ್ರಚಾರ ಪುಸ್ತಕದಲ್ಲಿ ಭವಾನಿ ರೇವಣ್ಣ ಫೋಟೊ ಪ್ರಿಂಟ್ ಆಗಿರುವುದು ಕೌತುಕ ಮೂಡಿಸಿದೆ.
ಹಾಸನ: ಹಾನಸ ಕ್ಷೇತ್ರದ ಜೆಡಿಎಸ್ (JDS) ಟಿಕೆಟ್ ಬಗ್ಗೆ ಇರುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಧ್ಯೆಯೇ ಅಲ್ಲಿ ಪಕ್ಷದ ಪ್ರಚಾರ ಪುಸ್ತಕದಲ್ಲಿ ಭವಾನಿ ರೇವಣ್ಣ (Bhavani Revanna) ಫೋಟೊ ಪ್ರಿಂಟ್ ಆಗಿರುವುದು ಕೌತುಕ ಮೂಡಿಸಿದೆ. ಭವಾನಿ ರೇವಣ್ಣ ಅವರಿಗೇ ಹಾಸನ ಕ್ಷೇತ್ರದ ಟಿಕೆಟ್ ನೀಡಲಿದೆಯೇ ಜೆಡಿಎಸ್ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಹೆಚ್ಡಿ ರೇವಣ್ಣ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರ ಜತೆ ಕುಳಿತುಕೊಂಡು ಚರ್ಚೆ ನಡೆಸಲಾಗುವುದು. ಒಮ್ಮತಕ್ಕೆ ಬಂದ ಬಳಿಕವೇ ಎಲ್ಲ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈಗಾಗಲೇ ಹೆಚ್ಡಿ ಕುಮಾರಸ್ವಾಮಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪುಸ್ತಕದಲ್ಲಿ ಅಶೋಕ್ ಫೋಟೊ ಕೂಡ ಇದೆ, ಅವರು ಅರಸೀಕೆರೆ ಅಭ್ಯರ್ಥಿ ಎಂದು ರೇವಣ್ಣ ಸಮಜಾಯಿಷಿ ನೀಡಿದ್ದಾರೆ.
ಭವಾನಿಯವರು ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅದ್ಯಕ್ಷರಾಗಿ ಕೆಲಸ ಮಾಡಿದ್ದರು. ಅವರು ಇಡೀ ಜಿಲ್ಲೆಯನ್ನು ಎಸ್ಎಸ್ಎಲ್ಸಿಯಲ್ಲಿ ರಾಜ್ಯದಲ್ಲಿ ನಂಬರ್ ಒನ್ ಮಾಡಿದ್ದಾರೆ. ಅರೋಗ್ಯ ಇಲಾಖೆಯಲ್ಲಿ ಹಣ ಲಪಟಾಯಿಸಲಾಗುತ್ತಿತ್ತು, ಅದನ್ನು ಅವರು ಬಂದು ಸರಿ ಮಾಡಿದರು. ಹಾಗಾಗಿ ಅವರ ಪೋಟೊ ಹಾಕಿದ್ದಾರೆ ಎಂದು ರೇವಣ್ಣ ಹೇಳಿದರು.
ಅಶೋಕ್ ಅವರನ್ನು ಕುಮಾರಣ್ಣ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಹಾಗಾಗಿ ಅವರ ಫೋಟೊ ಹಾಕಲಾಗಿದೆ. ಎ ಮಂಜು ಅವರ ಹೆಸರನ್ನೂ ಪ್ರಕಟಿಸಲಾಗಿದೆ. ಹಾಗಾಗಿ ಅವರ ಫೋಟೊ ಕೂಡ ಹಾಕಲಾಗಿದೆ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Assembly polls: ಹಾಸನ ಕ್ಷೇತ್ರದ ಟಿಕೆಟ್ ತನಗೆ ಮಾತ್ರ ಅನ್ನೋದು ಭವಾನಿ ರೇವಣ್ಣಗೆ ಖಾತರಿಯಾದಂತಿದೆ!
ಹಾಸನದಲ್ಲಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ಮಧ್ಯೆ ಟಿಕೆಟ್ಗಾಗಿ ಫೈಟ್ ಇದೆ ಎಂಬುದು ಬಹುಚರ್ಚಿತ ವಿಷಯ. ಇವರಿಬ್ಬರಲ್ಲಿ ಯಾರಿಗೇ ಕೊಟ್ಟರೂ ಅವರ ಬೆಂಬಲಿಗರು ಸಿಡಿದೇಳುವ ಸಾಧ್ಯತೆ ಇರುವುದರಿಂದ ಹೊಸ ಮುಖಕ್ಕೆ ಮಣೆ ಹಾಕಲು ಜೆಡಿಎಸ್ ವರಿಷ್ಠರು ತಂತ್ರ ರೂಪಿಸಿದ್ದಾರೆ ಎಂಬುದಾಗಿ ಇತ್ತೀಚೆಗೆ ವರದಿಯಾಗಿತ್ತು.
ಭವಾನಿ ರೇವಣ್ಣ ಮತ್ತು ಸ್ವರೂಪ್ ನಡುವಣ ಟಿಕೆಟ್ ಫೈಟ್ ಆರಂಭದಿಂದಲೂ ರಾಜ್ಯದೆಲ್ಲೆಡೆ ಜೆಡಿಎಸ್ ಬೆಂಬಲಿಗರುವ, ಕಾರ್ಯಕರ್ತರು ಹಾಗೂ ಜನರಲ್ಲಿ ಕುತೂಹಲ ಮೂಡಿಸಿತ್ತು. ಅಲ್ಲಿನ ಅಭ್ಯರ್ಥಿ ಆಯ್ಕೆ ವಿಚಾರ ಸ್ವತಃ ಜೆಡಿಎಸ್ಗೂ ಕಗ್ಗಂಟಾಗಿ ಪರಿಣಮಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ