ಬೆಂಗಳೂರು: ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಕರ್ನಾಟಕದ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (Vydehi Institute of Medical Sciences & Research Centre)ಗೆ ಅವಕಾಶ ಸಿಕ್ಕಿದ್ದು, ನಮ್ಮ ರಾಜ್ಯಕ್ಕೆ ಹೆಮ್ಮೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ 19 ರಾಜ್ಯಗಳಲ್ಲಿ ನಡೆಯುತ್ತಿದೆ. ದೇಶದಲ್ಲಿ ಒಟ್ಟು 26 ಸಾವಿರ ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುವುದು. ಅದರಲ್ಲಿ 1,600-1,800 ಮಂದಿಗೆ ಪ್ರಾಯೋಗಿಕ ಲಸಿಕೆ ನೀಡಲಾಗುವುದು. ಲಸಿಕೆ ಅಂತಿಮ ಆದ ನಂತರ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಮೊದಲು ನೀಡಲಾಗುತ್ತದೆ. ಹೆಚ್ಚೆಚ್ಚು ಜನರಿಗೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
20 ಸಂಸ್ಥೆಗಳು ಅಂತಿಮ ಹಂತ ತಲುಪಿವೆ..!
ಈಗಾಗಲೇ ಒಟ್ಟು 50 ಕಂಪನಿಗಳು ಲಸಿಕೆ ಪ್ರಯೋಗ ಶುರು ಮಾಡಿಕೊಂಡಿವೆ. ಅದರಲ್ಲಿ 20 ಸಂಸ್ಥೆಗಳು ಅಂತಿಮ ಹಂತ ತಲುಪಿವೆ. ನಮ್ಮ ದೇಶ ವಿಶ್ವದ ಎಲ್ಲ ದೇಶಗಳಿಗೆ ಲಸಿಕೆ ಒದಗಿಸುವ ಹಂತಕ್ಕೆ ಬೆಳೆದಿದೆ. ಆದರೆ ಕೊವಿಡ್ ಲಸಿಕೆಯಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದ್ದು, ಅದನ್ನೆಲ್ಲ ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಮ್ಮಲ್ಲಿ ಬೆಂಗಳೂರು, ಶಿವಮೊಗ್ಗ ಮತ್ತು ಧಾರವಾಡದಲ್ಲಿ ಪ್ರಾದೇಶಿಕ ಲಸಿಕೆ ಕೇಂದ್ರ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.
900 ಕೋಟಿ ರೂ. ಮೀಸಲು
ಕೊವಿಡ್-19 ಸೋಂಕು ಹರಡದಂತೆ ತಡೆಯಲು ಸರ್ಕಾರ ಬದ್ಧವಾಗಿದೆ. ಲಸಿಕೆ ಮತ್ತು ಸಂಶೋಧನೆಗಾಗಿ 900 ಕೋಟಿ ರೂ. ಮೀಸಲು ಇಡಲಾಗಿದೆ. ಹಾಗೇ ಮುಖ್ಯಮಂತ್ರಿ ಯಡಿಯೂರಪ್ಪನವರು 300 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು, ಇದೀಗ ದಿನಕ್ಕೆ 1 ಲಕ್ಷ 25 ಸಾವಿರ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ 1 ಕೋಟಿ 20 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ. ಹಾಗೇ ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗುತ್ತದೆ ಎಂಬ ಭರವಸೆ ಇದೆ ಎಂದರು.
ಕೊರೊನಾ ಲಸಿಕೆ ಎಲ್ಲರಿಗೂ ಸಿಗಲ್ವಂತೆ.. ಅಗತ್ಯವಿರೋರಿಗೆ ಮಾತ್ರ ಕೊಡ್ತಾರಂತೆ
Published On - 12:40 pm, Wed, 2 December 20