Karnataka Budget 2023: ಬಜೆಟ್ ಮೊತ್ತದ ಶೇ 75ರಷ್ಟು ಖರ್ಚಾಗಿದೆ; ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್

| Updated By: ವಿವೇಕ ಬಿರಾದಾರ

Updated on: Feb 10, 2023 | 2:08 PM

ಬಜೆಟ್​ ಅಧಿವೇಶನದ ಮೊದಲ ದಿನವಾದ ಇಂದು ವಿಧಾನ ಮಂಡಲ ಉದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​​ ಭಾಷಣ ಮಾಡಿದ್ದಾರೆ. 2023 ಜನವರಿಗೆ ರಾಜಸ್ವ ಸಂಗ್ರಹಣೆ ಶೇಕಡಾ 91ರಷ್ಟು ಗುರಿ ಸಾಧಿಸಲಾಗಿದೆ. ಈ ಜನವರಿಗೆ ಪ್ರಸಕ್ತ ಬಜೆಟ್​​​ನ ಶೇಕಡಾ 75ರಷ್ಟು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Karnataka Budget 2023: ಬಜೆಟ್ ಮೊತ್ತದ ಶೇ 75ರಷ್ಟು ಖರ್ಚಾಗಿದೆ; ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​
Follow us on

ಬೆಂಗಳೂರು: ಇಂದಿನಿಂದ (ಫೆ.10) ಬಜೆಟ್​ ಅಧಿವೇಶನ ಪ್ರಾರಂಭವಾಗಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಇನ್ನು ಫೆಬ್ರವರಿ 17 ರಂದು ಬಜೆಟ್​ ಮಂಡನೆಯಾಗಲಿದೆ. ಅಧಿವೇಶನದ ಮೊದಲ ದಿನವಾದ ಇಂದು ವಿಧಾನ ಮಂಡಲ ಉದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ (Thawar Chand Gehlot) ​ಭಾಷಣ ಮಾಡಿದ್ದಾರೆ. ಈ ಜನವರಿಗೆ ರಾಜಸ್ವ ಸಂಗ್ರಹಣೆ ಶೇಕಡಾ 91ರಷ್ಟು ಗುರಿ ಸಾಧಿಸಲಾಗಿದೆ. ಈ ಜನವರಿಗೆ ಪ್ರಸಕ್ತ ಬಜೆಟ್​​​ನ ಶೇಕಡಾ 75ರಷ್ಟು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಜಾನುವಾರುಗಳ ಚರ್ಮ ಗಂಟುರೋಗ ತಡೆಯಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಗೋವುಗಳ ಪೋಷಣೆಗೆ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ ದೇಶದಲ್ಲಿ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಗೋವುಗಳ ರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ವಿಧಾನ ಮಂಡಲದಲ್ಲಿ ಮಾತನಾಡಿದ ಅವರು ಜಲ್​ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರಿನ ಸೌಲಭ್ಯ ನೀಡಲಾಗಿದೆ. ರಾಜ್ಯದ ಪ್ರತಿ ಶಾಲೆಯಲ್ಲಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ರೂಪಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಹಾಲು ವಿತರಣೆ ಮಾಡಲಾಗಿದೆ. ದೇಶದಲ್ಲೇ ಎನ್​ಇಪಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಎಸ್​ಸಿ, ಎಸ್​ಟಿ ಪಂಗಡದ ಬಿಪಿಎಲ್​ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ನಿಗಮದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಬೆಳಗಾವಿಯಲ್ಲಿ ತೆರೆಯಲಾಗಿದೆ. ಬಾಲ್ಯವಿವಾಹ ಹೆಚ್ಚಳವಿರುವ 11 ಜಿಲ್ಲೆಗಳಲ್ಲಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನಮ್ಮ ಕ್ಲಿನಿಕ್​ಗಳನ್ನು ಆರಂಭಗೊಂಡಿವೆ. ಚಾಮರಾಜನಗರದಲ್ಲಿ ವಿಶೇಷ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಆಸ್ಪತ್ರೆ ತೆರೆಯಲಾಗಿದೆ ಎಂದು ಹೇಳಿದ್ದಾರೆ.

2021-22ರಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಹ್ವಾನ ನೀಡಲಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ರೋಜ್​ಗಾರ್ ನೀತಿ ತಂದಿದೆ. ರಾಜ್ಯದಲ್ಲಿ ವಿಮಾನಯಾನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ. ಶೀಘ್ರದಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ. ವಿಜಯಪುರ, ಹಾಸನ ಏರ್​ಪೋರ್ಟ್ ನಿರ್ಮಾಣ ಕಾರ್ಯ ಮುಗಿದಿದೆ. ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ರೈತರು, ಕಾರ್ಮಿಕರು, ಬಡವರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.

ಅಭಿವೃದ್ಧಿ ಪಥದಲ್ಲಿ ರಾಜ್ಯ ಮುಂಚೂಣಿಯಲ್ಲಿ ದಾಪುಗಾಲಿಡುತ್ತಿದೆ. ಸರ್ಕಾರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಅನುಸರಿಸುತ್ತಿದೆ. ರೈತರನ್ನು ಸದೃಢಗೊಳಿಸಲು ಸರ್ಕಾರದಿಂದ ಅನೇಕ ಕಾರ್ಯಕ್ರಮ ಜಾರಿಯಾಗಿವೆ. ರೈತರು, ನೇಕಾರರು, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ. 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ರೈತಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ 250 ರೂ. ಡೀಸೆಲ್ ಸಹಾಯಧನ ನೀಡಲಾಗಿದೆ. 160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಲೋಕಾರ್ಪಣೆ ಮಾಡಲಾಗಿದೆ. ಕೃಷಿ ಸಂಜೀವಿನಿ ಯೋಜನೆಯಡಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮೋದಿಯವರು ಮುಂದಿನ 25 ವರ್ಷಕ್ಕೆ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ರಾಜ್ಯವು ಕ್ರಮಿಸುವ ವಿಶ್ವಾಸ ಇದೆ. 150 ಕೋಟಿ ರೂ. ವೆಚ್ಚದಲ್ಲಿ 1 ಲಕ್ಷದ 614 ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿ ನೀಡಲಾಗುತ್ತಿದೆ. ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ಹೊಸ ಯೋಜನೆಯಡಿ ಒಂದು ಸಾವಿರ ಬಹುಮಹಡಿ ವಿದ್ಯಾರ್ಥಿ ನಿಲಯ ಸಮುಚ್ಚಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಸುಮಾರು 268.98 ಕೋಟಿ ರೂ. ವೆಚ್ಚದಲ್ಲಿ 4244 ಹೊಸ ಅಂಗನವಾಡಿ ಕೇಂದ್ರಗಳನ್ನ ತೆರಯಲು ಮಂಜೂರಾತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬಾಲ್ಯ ವಿವಾಹವನ್ನ ತಡೆಗಟ್ಟಲು ಸ್ಪೂರ್ತಿ ಯೋಜನೆ ಅನುಷ್ಠಾನ ಮಾಡಲಾಗಿದೆ. 45 ತಾಲ್ಲೂಕು ಆಸ್ಪತ್ರೆಗಳನ್ನ ಜಯದೇವ ಹೃದ್ರೋಗ ಸಂಸ್ಥೆಗಳೊಂದಿಗೆ ಮ್ಯಾಪಿಂಗ್ ಮಾಡಿ ಸ್ಥಳೀಯವಾಗಿ ಹೃದ್ರೋಗ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್​ಗಳ ಸ್ಥಾಪನೆಯಲ್ಲಿ 271 ಈಗಾಗಲೆ ಕಾರ್ಯಾರಂಭ ಮಾಡಿವೆ ಎಂದು ಮಾತನಾಡಿದರು.

ಈ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ 50 ಜನರಿಗೆ ಕೆಲಸ ನೀಡಲಾಗಿದೆ. ಜಲಜೀವನ್​ ಮಿಷನ್​​ ಯೋಜನೆಯಡಿ ಶೇ.61.34ರಷ್ಟು ಮನೆಗಳಿಗೆ ನೀರು ನೀಡಲಾಗಿದೆ. 30,308 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯಾದ್ಯಂತ 11,333 ಪೌರಕಾರ್ಮಿರನ್ನು ಖಾಯಂ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ 16,811 ಹುದ್ದೆಗಳನ್ನು ಭರ್ತಿ ಮಾಡಿದೆ. 31 ಶೀಘ್ರಗತಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಮಂಜೂರು ಮಾಡಲಾಗಿದೆ. ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್ ರಚಿಸಲಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Fri, 10 February 23