Paying Guest -PG: ನಾಯಿಕೊಡೆಗಳಂತೆ ಗಲ್ಲಿಗೊಂದು ಪೇಯಿಂಗ್ ಗೆಸ್ಟ್​ಗಳ ಅಬ್ಬರ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಕ್ರಮಕೈಗೊಳ್ಳುವುದು ಯಾವಾಗ?

| Updated By: ಸಾಧು ಶ್ರೀನಾಥ್​

Updated on: Feb 10, 2023 | 12:16 PM

Loss of Tax: ಒಂದು ಅಂದಾಜಿನ ಪ್ರಕಾರ, ಧಾರವಾಡದಲ್ಲಿರೋ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆ ಒಂದು ಲಕ್ಷದ ಮೇಲಿದೆ! ಹೀಗಾಗಿ ಇದಕ್ಕೆ ತಕ್ಕಂತೆ ಧಾರವಾಡದಲ್ಲೀಗ ಮೂಲೆ ಮೂಲೆಯಲ್ಲಿ ಸಾವಿರಾರು ಪಿಜಿಗಳು ತಲೆ ಎತ್ತಿವೆ.

Paying Guest -PG: ನಾಯಿಕೊಡೆಗಳಂತೆ ಗಲ್ಲಿಗೊಂದು ಪೇಯಿಂಗ್ ಗೆಸ್ಟ್​ಗಳ ಅಬ್ಬರ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಕ್ರಮಕೈಗೊಳ್ಳುವುದು ಯಾವಾಗ?
ನಾಯಿಕೊಡೆಗಳಂತೆ ಗಲ್ಲಿಗೊಂದು ಪೇಯಿಂಗ್ ಗೆಸ್ಟ್​ಗಳ ಅಬ್ಬರ
Follow us on

ಧಾರವಾಡ ಅಂದರೆ ವಿದ್ಯಾಕಾಶಿ. ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಹಾಗೂ ಕಾನೂನು ವಿಶ್ವವಿದ್ಯಾಲಯವನ್ನು ಒಳಗೊಂಡಿರೋ ಧಾರವಾಡದಲ್ಲಿ ಇತ್ತೀಚೆಗೆ ಕೋಚಿಂಗ್ ಕೇಂದ್ರಗಳ ಸಂಖ್ಯೆಯೂ ಸಾಕಷ್ಟು ಹೆಚ್ಚಾಗಿದೆ. ಅದಕ್ಕೆ ಪೂರಕವಾಗಿ ಗಲ್ಲಿ ಗಲ್ಲಿಯಲ್ಲಿಯೂ ಈಗ ಪಿಜಿಗಳ (Paying Guest -PG) ಅಬ್ಬರ ಜೋರಾಗಿದ್ದು, ಯಾವುದು ಅಧಿಕೃತ, ಯಾವುದು ಅನಧಿಕೃತ ಅನ್ನೋದೇ ಗೊತ್ತಿಲ್ಲ. ಹೀಗಾಗಿ ಅವನ್ನೆಲ್ಲ ಪಾಲಿಕೆ ಅಡಿಯಲ್ಲಿ ಅಧಿಕೃತ ಮಾಡೋಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿತ್ತು (Hubballi Dharwad Municipal Corporation council). ಆದರೆ ಕ್ರಮಕ್ಕೆ ಮುಂದಾಗಿ ಆರೇಳು ತಿಂಗಳು ಕಳೆದರೂ ಏನೂ ಆಗಿಲ್ಲ. ಧಾರವಾಡದಲ್ಲಿ ಇತ್ತೀಚೆಗೆ ಕೋಚಿಂಗ್ ಕೇಂದ್ರಗಳ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಲೇ ಇದೆ. ಒಂದು ಕಾಲಕ್ಕೆ ಎಲ್ಲೋ ನಿಂತು ಒಂದು ಕಲ್ಲು ಎಸೆದ್ರೆ ಅದು ಯಾವುದಾದ್ರೂ ಸಾಹಿತಿ ಮನೆ ಮೇಲೆ ಹೋಗಿ ಬಿಳುತ್ತೆ ಅನ್ನೋ ಮಾತು ಚಾಲ್ತಿಯಲ್ಲಿತ್ತು. ಆದರೀಗ ಅದು ಬದಲಾಗಿದೆ. ಈಗ ಎಲ್ಲಿಯೇ ನಿಂತು ಕಲ್ಲು ಎಸೆದರೆ ಅದು ಕೋಚಿಂಗ್ ಕೇಂದ್ರ ಇಲ್ಲವೋ ಪಿಜಿ ಮೇಲೆ ಬೀಳುತ್ತೆ ಅನ್ನೋ ಮಾತು ಚಾಲ್ತಿಗೆ ಬಂದಿದೆ (Loss of Tax).

ಐಎಎಸ್, ಕೆಎಎಸ್, ಪೊಲೀಸ್ ನೇಮಕಾತಿಯಿಂದ ಹಿಡಿದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರಗಳು ಧಾರವಾಡದಲ್ಲಿವೆ. ಒಂದು ಅಂದಾಜಿನ ಪ್ರಕಾರ, ಇಲ್ಲಿರೋ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆ ಒಂದು ಲಕ್ಷದ ಮೇಲಿದೆ! ಹೀಗಾಗಿ ಇದಕ್ಕೆ ತಕ್ಕಂತೆ ಧಾರವಾಡದಲ್ಲೀಗ ಮೂಲೆ ಮೂಲೆಯಲ್ಲಿ ಸಾವಿರಾರು ಪಿಜಿಗಳು ತಲೆ ಎತ್ತಿವೆ.

ಪಿಜಿ ತೆರೆಯೋದು ಕಮರ್ಷಿಯಲ್ ವ್ಯಾಪ್ತಿಗೆ ಬರುತ್ತದೆ. ಆದರೆ ಬಹುತೇಕ ಕಡೆಗಳಲ್ಲಿ ವಾಸದ ಮನೆಗಳನ್ನೇ ಪಿ.ಜಿ. ಗಳನ್ನಾಗಿ ಮಾಡಿದ್ದು, ಇವುಗಳಿಗೆ ಯಾವುದೇ ತೆರಿಗೆಯೂ ಇಲ್ಲ. ಜೊತೆಗೆ ನಗರದ ಸ್ವಚ್ಛತೆಗೂ ತೊಂದರೆಯಾಗುತ್ತಿದೆ. ಇದನ್ನು ಮನಗಂಡ ಮಹಾನಗರ ಪಾಲಿಕೆ ಅನುಮತಿ ಪಡೆದುಕೊಳ್ಳೋದಕ್ಕೆ ಅಂತಾನೇ 2,000ಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್ ಜಾರಿ ಮಾಡಿತ್ತು‌.

ಆದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ‌‌‌. ನೋಟಿಸ್‌ಗೆ ಯಾರೊಬ್ಬರೂ ಸಮಂಜಸವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ‌. ಹೀಗಾಗಿ ಈಗ ಇದಕ್ಕಾಗಿಯೇ ಪಾಲಿಕೆಯ ಹಿರಿಯ ಸದಸ್ಯ ಶಿವು ಹಿರೇಮಠ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನೇ ಮಾಡಿದ್ದಾರೆ.

ಧಾರವಾಡದಲ್ಲಿ ಆರಂಭದಲ್ಲಿ ಸಪ್ತಾಪುರ ಹಾಗೂ ಜಯನಗರ ಭಾಗದಲ್ಲಿ ಮಾತ್ರವೇ ಕೋಚಿಂಗ್ ಕೇಂದ್ರಗಳಿದ್ದವು. ಹೀಗಾಗಿ ಆ ಪ್ರದೇಶದ ಸುತ್ತಮುತ್ತ ಮಾತ್ರವೇ ಪಿ.ಜಿ. ಗಳು ಇರುತ್ತಿದ್ದವು. ಆದರೆ ಈಗ ಕೋಚಿಂಗ್ ಕೇಂದ್ರಗಳ ವ್ಯಾಪ್ತಿಯೂ ಜಯನಗರ, ಸಪ್ತಾಪುರ ಮೀರಿ ಬೆಳೆದಿದೆ. ಈ ಎರಡೂ ಏರಿಯಾಗಳಲ್ಲಿ ಸಂಪೂರ್ಣವಾಗಿ ಪಿಜಿಗಳು, ವಿವಿಧ ಕೋರ್ಸ್ ಕಲಿಸುವ ಕೇಂದ್ರಗಳೇ ತುಂಬಿ ಹೋಗಿರುವುದರಿಂದ ಹೊಸದಾಗಿ ಕೋಚಿಂಗ್ ಕೇಂದ್ರಗಳನ್ನು ತೆರೆಯುವವರು ಬೇರೆ ಬೇರೆ ಪ್ರದೇಶಗಳನ್ನು ನೋಡಿಕೊಂಡಿದ್ದಾರೆ.

ಇನ್ನು ಧಾರವಾಡದಲ್ಲಿ ಅನೇಕ ಪ್ರತಿಷ್ಠಿತ ಕಾಲೇಜುಗಳಿದ್ದು, ಇಲ್ಲಿಗೆ ಬೇರೆ ಜಿಲ್ಲೆಗಳವರೂ ಕಲಿಯಲು ಬರುತ್ತಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ‌್‌‌ಗಳಿಲ್ಲ. ಹೀಗಾಗಿ ಎಲ್ಲರೂ ಪಿ.ಜಿ.ಗಳನ್ನೇ ಆಶ್ರಯಿಸುತ್ತಾರೆ. ಇದೇ ಕಾರಣಕ್ಕೆ ಈ ಹಿಂದೆಲ್ಲ ಮನೆಗಳನ್ನು ಸಂಸ್ಥಾರಸ್ಥರಿಗೆ ಬಾಡಿಗೆ ಕೊಡುತ್ತಿದ್ದವರೆಲ್ಲರೂ… ಅದೇ ಮನೆಗಳಲ್ಲಿ ಐದಾರು ಬೆಡ್ ಗಳನ್ನು ಹಾಕಿ, ಬೆಡ್ ಗೆ ಇಂತಿಷ್ಟು ಅಂತಾ ದರ ನಿಗದಿ ಮಾಡಿ, ಪಿ.ಜಿ. ನಡೆಸುತ್ತಿದ್ದಾರೆ.

ಇದರಿಂದ ಪಾಲಿಕೆ ಆದಾಯಕ್ಕೂ ಹೊಡೆತ ಬೀಳುತ್ತಿರೋ ಕಾರಣಕ್ಕೆ ಅವುಗಳ ಮೇಲೆ ಅಂಕುಶ ಇಡುವುದಕ್ಕೆ ಮುಂದಾಗಿದ್ದಾರೆ. ಆದರೆ ಅದು ಶೀಘ್ರಗತಿಯಲ್ಲಿ ಆಗುತ್ತಿಲ್ಲ. ಆದಕ್ಕೂ ಹಿಂದಿನಿಂದಲೂ ನಿಯತ್ತಾಗಿ, ಅಚ್ಚುಕಟ್ಟಾಗಿ ಎಲ್ಲ ನಿಯಮ ಪಾಲಿಸಿ ಪಿಜಿಗಳನ್ನು ನಡೆಸುತ್ತಿದ್ದವರು ಮಾತ್ರ ತೆರಿಗೆ ಇತ್ಯಾದಿ ‌ಕಟ್ಟುತ್ತ ಹೋಗುವಂತಾಗಿದ್ದು, ಆದಷ್ಟು ಬೇಗ ಒಂದು ನಿಯಮ ಮಾಡಿ ಅಂತಾ ಅಧಿಕೃತ ಪಿ.ಜಿ.ಯವರು ಆಗ್ರಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ಧಾರವಾಡದಲ್ಲಿ ಪಿ.ಜಿ.ಗಳಿಂದಲೂ ಒಂದು ಆದಾಯ ಪಡೆಯಬೇಕು. ಅದರ ಜೊತೆಗೆ ನಗರದ ಸ್ವಚ್ಛತೆ, ಅಚ್ಚುಕಟ್ಟುತನಕ್ಕೂ ಒಂದು ವ್ಯವಸ್ಥೆ ಜಾರಿಗೆ ತರಬೇಕು ಅನ್ನೋ ಉದ್ದೇಶದಿಂದ ಮಹಾನಗರ ಪಾಲಿಕೆ ಈಗ ಕಠಿಣ ನಿರ್ಧಾರಕ್ಕೆ ಮುಂದಾಗಿದೆ. ಮುಂದೆ ಇದು ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ