ಆ ಪೋರಿಗೆ ಇನ್ನೂ ಮೂರು ವರ್ಷ ವಯಸ್ಸು.. ಆದ್ರೆ ಆಕೆಯ ಟ್ಯಾಲೆಂಟ್ ಮಾತ್ರ ಎಲ್ಲರ ಹುಬ್ಬೇರಿಸುವಂತಿದೆ.. ವಯಸ್ಕರರೇ ಪುಸ್ತಕ ಓದಿಕೊಂಡು ಸಂಸ್ಕೃತ ಶ್ಲೋಕಗಳನ್ನ ಓದಲು ತೊದಲ್ತಾರೆ.. ಆದ್ರೆ ಆ ಪುಟಾಣಿ ಮಾತ್ರ ಹರಳು ಹುರಿದಂತೆ ಪಟ್ ಪಟ್ ಅಂತ ಹೇಳ್ತಾಳೆ. ಅದೇ ಕಾರಣಕ್ಕೆ ಆ ಬಾಲೆ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ (India Book of Records) ಮಾಡಿದ್ದಾಳೆ. ಹರಳು ಹುರಿದಂತೆ ಸಂಸ್ಕೃತ ಶ್ಲೋಕಗಳನ್ನು ಉಚ್ಛರಿಸುವ ಈ ಬಾಲೆಯ ಹೆಸರು ನಿಧಿಶ್ರೀ ಪಾಟೀಲ್ (Raichur toddler Nidhisri Patil).. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಡಾ. ಅನ್ನಪೂರ್ಣೇಶ್ವರಿ ಹಾಗೂ ಡಾ. ಹೆ ಬಿ ತಳ್ಳಳ್ಳಿ ಅನ್ನೋರ ಪುತ್ರಿ ಇವಳು.. ಈ ಮುದ್ದು ಪುಟಾಣಿಗೆ ಇನ್ನೂ ಮೂರು ವರ್ಷ ವಯಸ್ಸು.. ಈ ವಯಸ್ಸಿನಲ್ಲೇ ಒಂದು ಸಾರಿ ಹೇಳಿದ್ದನ್ನ ಗ್ರಹಿಸಿ ಗುರುತಿಸುತ್ತಾಳೆ.. ಸಂಸ್ಕೃತದ ಶ್ಲೋಕಗಳನ್ನ ಹರಳು ಹುರಿದಂತೆ ತನ್ನ ತೊದಲ ನುಡಿಯಲ್ಲಿ ಉಚ್ಛರಿಸುತ್ತಾಳೆ.. ತನ್ನ ಮುಂದೆ ಯಾವುದೇ ವಸ್ತು ಇಟ್ಟರೂ ಆ ವಸ್ತುವಿನ ಹೆಸರನ್ನ ನಿಖರವಾಗಿ ಹೇಳುತ್ತಾಳೆ.. ಜೊತೆಗೆ ಇಂಗ್ಲಿಷ್ ರೈಮ್ಸ್, ನ್ಯಾಷನಲ್ ಸಿಂಬಲ್ಸ್, ವಾಹನಗಳು, ಪಕ್ಷಿಗಳ ಹೆಸರು, ವೃತ್ತಿ, ಅಂಕಿ ಸಂಖ್ಯೆ, ಹ ಣ್ಣು-ತರಕಾರಿಗಳ ಹೆಸರುಗಳನ್ನ ಲೀಲಾಜಾಲವಾಗಿ ಪಟಾಕಿ ಸಿಡಿಸಿದಂತೆ ಹೇಳುತ್ತಾಳೆ ಈ ನಿಧಿಶ್ರೀ ಪಾಟೀಲ್. ಇಂತಹ ವಿಶೇಷ ಜ್ಞಾನ ಹೊಂದಿರೊ ಈ ನಿಧಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿಮೆ ಹಿರಿಮೆಗೆ ಪಾತ್ರಳಾಗಿದ್ದಾಳೆ.
ಹೀಗೆ ನಿಧಿಶ್ರೀ ಸುಮಾರು 200 ಕ್ಕೂ ಹೆಚ್ಚು ವಸ್ತುಗಳನ್ನ ಗ್ರಹಿಸಿ ಉತ್ತರಿಸುವ ಟ್ಯಾಲೆಂಟ್ ಹೊಂದಿದ್ದಾಳೆ. ನಿಧಿಶ್ರೀ ಟ್ಯಾಲೆಂಟ್ ಗೆ ಇತ್ತೀಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ ಲಭಿಸಿದೆ. ಈ ಪುಟಾಣಿ ಪೋರಿ ಒಂದು ವರ್ಷದವಳಿದ್ದಾಗಲೇ ವಸ್ತುಗಳು, ಪ್ರಾಣಿಗಳನ್ನ ಸೂಕ್ಷ್ಮವಾಗಿ ಗಮನಿಸಿ ಗುರುತಿಸುತ್ತಿದ್ದಳಂತೆ. ಅಷ್ಟೇ ಅಲ್ಲದೇ ತನ್ನ ಸ್ವಂತ ವಾಕ್ಯದಲ್ಲಿ ಅವುಗಳನ್ನ ಉಚ್ಚಾರಣೆ ಮಾಡುತ್ತಿದ್ದಳಂತೆ.. ವೃತ್ತಿಯಲ್ಲಿ ವೈದ್ಯರು ಆಗಿರುವ ನಿಧಿಶ್ರೀ ಪೋಷಕರು ಬಿಡುವಿನ ವೇಳೆ ಅವಳಿಗೆ ಬೇಕಾದ ಆಟಿಕೆಗಳ ಜೊತೆಗೆ ಶ್ಲೋಕ, ಪುಸ್ತಕ, ಸಿಂಬಲ್ ಗಳನ್ನ ಪರಿಚಯಿಸಿದ್ದಾರೆ. ಹೀಗಾಗಿ ನಿಧಿಶ್ರೀ ತನ್ನ ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿಯಿಂದ ಗ್ರಹಿಸಿದ್ದನ್ನ ಕರಾರುವಕ್ಕಾಗಿ ಹೇಳುವುದನ್ನ ರೂಢಿಸಿಕೊಂ ಡಿದ್ದಾಳೆ. ಕರ್ನಾಟಕ ಬುಕ್ ಆಫ್ ರೆಕಾರ್ಡ್ ಜೊತೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಈಕೆಗೆ ಲಭಿಸಿದೆ.
ಮೂರು ವರ್ಷದ ಅದೆಷ್ಟೋ ಮಕ್ಕಳು ಹೇಳಿದ ಮಾತುಗಳನ್ನ ತಿರುಗಿ ಹೇಳಲು ಕಷ್ಟ ಪಡ್ತಾರೆ. ಅಂಥದ್ರಲ್ಲಿ ಈ ನಿಧಿಶ್ರೀ ಮೂರು ವರ್ಷದಲ್ಲೇ ವಿಶಿಷ್ಟ ಸಾಧನೆ ಮಾಡೋ ಮೂಲಕ ಜನರ ಮೆಚ್ಚುಗೆಗೆ ಕಾರಣರಾಗಿದ್ದು, ಇತರರಿಗೆ ಮಾದರಿಯಾಗಿದ್ದಾಳೆ.
ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು