ಬೆಂಗಳೂರು: ಎಸಿಬಿ ವಿಚಾರವಾಗಿ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹಿಟಾಚಿ ಎನರ್ಜಿ ಇಂಡಿಯಾ ಆಯೋಜಿಸಿದ್ದ ಪವರ್ ಕ್ವಾಲಿಟಿ ಫ್ಯಾಕ್ಟರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಸಿಬಿ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ಖಾಸಗಿ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿಗೂ, ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ವರಿಷ್ಠರು ಆದೇಶ ನೀಡಿದ್ದಾರೆ ಹಾಗೂ ಅದೇ ನಮ್ಮ ಪ್ರಣಾಳಿಕೆಯಲ್ಲಿಯೂ ಇದೆ. ನಾವು ಅದೇ ನಿಲುವಿಗೆ ಬದ್ಧರಾಗಿದ್ದೇವೆ. ಉಚ್ಛ ನ್ಯಾಯಾಲಯದ ಆದೇಶವನ್ನು ಹೇಗೆ ಅನುಷ್ಠಾನಕ್ಕೆ ತರಬೇಕೆಂಬ ಪ್ರಕ್ರಿಯೆ ಈಗಾಗಲೇ ನಡೆದಿದೆ. ಹೀಗಾಗಿ ನಾವು ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ. ಮೇಲ್ಮನವಿ ಸಲ್ಲಿಸಬಾರದೆಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದರು. ಸಂದರ್ಭದಲ್ಲಿ ಬಂದರೆ ಇದೇ ನಿಲುವನ್ನು ಅಲ್ಲಿಯೂ ತಿಳಿಸುತ್ತೇವೆ ಎಂದರು.
ಸಿದ್ದರಾಮಯ್ಯ ಅವರೇ ಗೊಂದಲ ಸೃಷ್ಟಿಸುತ್ತಿದ್ದಾರೆ
ನಾನು ಹೋರಾಟ ಮಾಡುವಾಗಲೆಲ್ಲಾ ಪ್ರತಿ ಸಾರಿ ಬಿಜೆಪಿ ಒಂದಲ್ಲ ಒಂದು ರೀತಿ ತಪ್ಪಿಸಲು ಪ್ರಯತ್ನ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಗೊಂದಲದಲ್ಲಿದ್ದಾರೆ. ಎಲ್ಲಾ ಗೊಂದಲಗಳೂ ಅವರ ಹೇಳಿಕೆಯಿಂದಲೇ ಪ್ರಾರಂಭವಾಗಿದೆ. ಸಾವರ್ಕರ್ ಅವರ ಚಿತ್ರವನ್ನು ಮುಸಲ್ಮಾನರ ಪ್ರದೇಶದಲ್ಲಿ ಹಾಕಬಾರದೆಂದು ನಾವು ಹೇಳಿದ್ದೇವೆ? ಹಲವಾರು ಗೊಂದಲ ಗಳನ್ನು ಅವರು ಸೃಷ್ಟಿಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವು ಜವಾಬ್ದಾರರಲ್ಲ ಎಂದರು.
ಸಿದ್ದರಾಮಯ್ಯ ಹೇಳಿಕೆ ಶುದ್ಧ ಸುಳ್ಳು
ನನ್ನ ಮೇಲೆ ಕೇವಲ ಮೊಟ್ಟೆ ದಾಳಿಯಾಗಲಿಲ್ಲ, ಕಲ್ಲು ದಾಳಿಯೂ ಆಗಿತ್ತು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಉತ್ತರಿಸಿ, ಅದೆಲ್ಲವೂ ಶುದ್ಧ ಸುಳ್ಳು. ಈಗಾಗಲೇ ತನಿಖೆಗೆ ಆದೇಶ ನೀಡಿದ್ದು, ರಕ್ಷಣೆಯನ್ನೂ ನೀಡಲಾಗಿದೆ. ಆ ಸ್ಥಾನದ ಬಗ್ಗೆ ಇರುವ ಗೌರವ ದ ಬಗ್ಗೆ ಈಗಾಗಲೇ ಹೇಳಿದ್ದೇನೆ. ನಮ್ಮ ಸರ್ಕಾರಕ್ಕೆ ಈ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದರು.
ಜಿಲ್ಲಾ ಕೇಂದ್ರ
ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವ ಬಗ್ಗೆ ಘೋಷಣೆ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಮಾಹಿತಿ ಪಡೆದು , ಕೂಲಂಕಷವಾಗಿ ಪರಿಶೀಲಿಸಿ ನಿರ್ಣಯಕ್ಕೆ ಬರಲಾಗುವುದು ಎಂದರು.
ಜನೋತ್ಸವ
ಜನೋತ್ಸವ ಸೆಪ್ಟೆಂಬರ್ 08 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ . ಜನೋತ್ಸವ ಯಶಸ್ವಿಯಾದರೆ ಕೆಲವರಿಗೆ ಅದು ಕರಾಳ ದಿನವೇ ಆಗಿರುತ್ತದೆ ಎಂದರು.