ಸರ್ಕಾರಿ ಜಮೀನು ರಿಜಿಸ್ಟರ್ ಆರೋಪ: ಅಧಿಕಾರಿಗಳ ಮನೆ ಮೇಲೆ ACB ದಾಳಿ
ಯಲಹಂಕದ ಚಿಕ್ಕಬೆಟ್ಟಹಳ್ಳಿಯ ಗೋಮಾಳ ಜಮೀನಿನಲ್ಲಿ 1968 ರಿಂದ ವ್ಯವಸಾಯ ಮಾಡಿಕೊಂಡು ಬಂದವರಿಗೆ ಸಾಗುವಳಿ ಚೀಟಿ ನೀಡದೆ ಬೇರೆಯವರಿಗೆ ಪರಭಾರೆ ಮಾಡಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

ಬೆಂಗಳೂರು: ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಸರ್ಕಾರಿ ಅಧಿಕಾರಿಗಳು ರಿಜಿಸ್ಟರ್ ಮಾಡಿರುವ ಆರೋಪ ಕೇಳಿಬಂದಿದ್ದು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಖಾಸಗಿ ವ್ಯಕ್ತಿಯ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯಲಹಂಕದ ಚಿಕ್ಕಬೆಟ್ಟಹಳ್ಳಿಯ ಗೋಮಾಳ ಜಮೀನಿನಲ್ಲಿ 1968 ರಿಂದ ವ್ಯವಸಾಯ ಮಾಡಿಕೊಂಡು ಬಂದವರಿಗೆ ಸಾಗುವಳಿ ಚೀಟಿ ನೀಡದೆ ಬೇರೆಯವರಿಗೆ ಪರಭಾರೆ ಮಾಡಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ. ಗೋಮಾಳ ಜಮೀನಿನ ಮೂಲ ಮಂಜೂರಾತಿ ಕಡತವೂ ತಾಲ್ಲೂಕು ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ಈ ಸರ್ಕಾರಿ ಜಮೀನು ವಿವಾದಾತ್ಮಕ ಪ್ರಕರಣದಲ್ಲಿದೆ ಎಂದು ಕೋರ್ಟ್ ಪರಭಾರೆ ನಿಷಿದ್ಧ ಎಂದು ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಯಲಹಂಕ ತಾಲ್ಲೂಕು ಕಚೇರಿಯ ಅಧಿಕಾರಿಗಳು ಅಕ್ರಮ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ರಿಜಿಸ್ಟರ್ ಮಾಡಿರುವ ಆರೋಪ ಕೇಳಿಬಂದಿದೆ.
ರಾಜಸ್ವ ನಿರೀಕ್ಷಕರಾದ ಬಿ.ಕೆ.ಆಶಾರವರ ಬೆಂಗಳೂರಿನ ಅನ್ನಪೂರ್ಣೆಶ್ವರಿ ನಗರದ ಹೆಲ್ತ್ ಲೇಔಟ್ನ ಮನೆ, ಶಿರಸ್ತೆದಾರ್ ಪಿ.ಎಸ್.ಆರ್.ಪ್ರಸಾದ್ ಹಾಗೂ ಖಾಸಗಿ ವ್ಯಕ್ತಿಯಾದ ಕೆ.ವಿ. ನಾಯ್ಡುಗೆ ಸೇರಿದ ನಾಗಶೆಟ್ಟಿಹಳ್ಳಿಯ ಡಾಲರ್ಸ್ ಕಾಲೋನಿಯ ಮನೆಯಲ್ಲಿ ಎಸಿಬಿ ಶೋಧ ಕಾರ್ಯ ನಡೆಸಿದ್ದಾರೆ.
Published On - 6:45 pm, Wed, 13 January 21