ಬೆಂಗಳೂರು, ಆಗಸ್ಟ್ 14: ರಾಜ್ಯದಲ್ಲಿ ದಿನೇ ದಿನೇ ಅಪಘಾತ (Accident) ಪ್ರಕರಣ ಹೆಚ್ಚಾಗುತ್ತಿದೆ. ಕಾಲೇಜು ಯುವಕ, ಯುವತಿಯರು, ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ವಯೋವೃದ್ಧರು ಕೂಡ ಅಪಘಾತಕ್ಕೆ ಜೀವ ಬಿಡುತ್ತಿದ್ದಾರೆ. ಹೆಚ್ಚುತ್ತಿರುವ ಅಪಘಾತ ಪ್ರಕರಣಗಳು ಕುರಿತು ಆತಂಕ ವ್ಯಕ್ತಪಡಿಸಿರುವ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಶನಿವಾರ ಒಂದೇ ದಿನ ಸಂಭವಿಸಿದ ಅಪಘಾತಗಳನ್ನ ಆಧರಿಸಿ ಕರಾಳ ಶನಿವಾರ ಎಂದು ಕರೆದಿದ್ದಾರೆ.
ಚಿತ್ರದುರ್ಗದಲ್ಲಿ ಕಾರು-ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಸಾವನ್ನಪ್ಪಿದ ಪ್ರಕರಣ ಸೇರಿದಂತೆ ಶನಿವಾರ ಒಂದೇ ದಿನ ರಾಜ್ಯಾದ್ಯಂತ ವಿವಿಧ ಅಪಘಾತಗಳಲ್ಲಿ ಒಟ್ಟು 38 ಜನ ಪ್ರಾಣ ಕಳೆದುಕೊಂಡಿರುವ ಕುರಿತು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಹೆಚ್ಚು ದ್ವಿಚಕ್ರ ವಾಹನ ಸವಾರರೇ ಬಲಿಯಾಗುತ್ತಿದ್ದಾರೆ. ಆದ್ದರಿಂದ ಅವರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಅನಾನುಭವಿ ಚಾಲಕರು ರಾತ್ರಿ ಸಂಚಾರವನ್ನ ಮಾಡಬಾರದು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಶನಿವಾರ ಒಂದೇ ದಿನ 31 ಅಪಘಾತಗಳಲ್ಲಿ 38 ಜನ ಸಾವನ್ನಪ್ಪಿರುವುದು ವರದಿಯಾಗಿದೆ. ಆ ಪೈಕಿ ಚಿತ್ರದುರ್ಗದಲ್ಲಿ 7 ಜನ, ಪಾವಗಡ 2, ತುಮಕೂರು 6, ಚಿಕ್ಕಮಗಳೂರು 4, ಬೆಂಗಳೂರು 2, ಮಂಡ್ಯದಲ್ಲಿ 3 ಜನ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು
ಈ ಕುರಿತು ಪ್ರತಿಕ್ರಿಯಿಸಿದ ಎಡಿಜಿಪಿ ಅಲೋಕ್ ಕುಮಾರ್ “ಬಹಳಷ್ಟು ಪ್ರಕರಣಗಳಲ್ಲಿ ಚಾಲಕರಿಗೆ ನೈಪುಣ್ಯತೆ ಇರದಿರುವುದು ಅಪಘಾತಕ್ಕೆ ಕಾರಣವಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ರಸ್ತೆ ಖಾಲಿಯಿದ್ದಾಗ ಅತಿ ವೇಗವಾಗಿ ಚಾಲನೆ ಮಾಡುವುದರಿಂದ ಅಪಘಾತವಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ. ಈ ಮೂರು ಕಾರಣಗಳಿಂದ ಹೆಚ್ಚು ಅಪಘಾತಗಳಾಗುತ್ತವೆ. ಶೇ. 60 ರಷ್ಟು ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ” ಎಂದರು.
“ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 15 ಲಕ್ಷ ಜನ ಅಪಘಾತಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ 1 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ 965 ಜನ ಅಪಘಾತಗಳಿಂದ ಪ್ರಾಣ ಕಳೆದುಕೊಂಡರೆ, ಜುಲೈನಲ್ಲಿ 761 ಜನ ಪ್ರಾಣ ಕಳೆದುಕೊಳ್ಳುತ್ತಿರುವುದು ದುಃಖದ ವಿಚಾರ. ಈ ವರ್ಷದ ದ್ವಿತೀಯಾರ್ಧದಲ್ಲಿ ಶೇ.25 ಅಪಘಾತ ಪ್ರಕರಣಗಳನ್ನ ಕಡಿಮೆ ಮಾಡುವ ಗುರಿ ನಮ್ಮದು” ಎಂದು ಅವರು ತಿಳಿಸಿದರು.
“ಕೆಲವು ಕಡೆಗಳಲ್ಲಿ ಇಂಜಿನಿಯರಿಂಗ್ ದೋಷಗಳನ್ನ ಸರಿಪಡಿಸಬೇಕಿದೆ. ಅದರ ಜೊತೆಗೆ ಸಂಚಾರಿ ದಂಡ ವಿಧಿಸಿದರಷ್ಟೇ ಅಪಘಾತ ಪ್ರಕರಣಗಳು ಕಡಿಮೆಯಾಗುವುದಿಲ್ಲ. ಜನರು ಸಂಚಾರಿ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಆಗ ಮಾತ್ರ ಅಪಘಾತದಿಂದ ಸಾಯುವವರು ಹಾಗೂ ಗಾಯಾಳುಗಳ ಪ್ರಮಾಣ ತಗ್ಗಿಸಲು ಸಾಧ್ಯ” ಎಂದು ಅಲೋಕ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ