ಬೆಂಗಳೂರು, ಜೂನ್.01: ಗುಜರಾತ್ನ ರಾಜ್ ಕೋಟ್ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದ ಬಳಿಕ ರಾಜಧಾನಿ ಬೆಂಗಳೂರಲ್ಲೂ (Bengaluru) ಪಾಲಿಕೆ ಅಲರ್ಟ್ ಆಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸೂಚನೆ ಬೆನ್ನಲ್ಲೆ ಅಲರ್ಟ್ ಆಗಿರೋ ಪಾಲಿಕೆ ಬೆಂಗಳೂರಿನ ಗೇಮ್ ಝೋನ್, ಚಿತ್ರಮಂದಿರ, ಪಬ್, ಸ್ಟಾರ್ ಹೊಟೇಲ್ ಸೇರಿದಂತೆ ಹಲವೆಡೆ ಫೈರ್ ಸೇಫ್ಟಿ ಪರಿಶೀಲನೆಗೆ ಮುಂದಾಗಿದೆ. ಸುರಕ್ಷತಾ ಕ್ರಮಗಳನ್ನ ಅನುಸರಿಸದ ಗೇಮ್ ಝೋನ್ ಗಳಿಗೆ ಪಾಲಿಕೆ (BBMP) ಶಾಕ್ ನೀಡಿದೆ.
ಮೇ 25 ರಂದು ಗುಜರಾತ್ನ ರಾಜ್ ಕೋಟ್ನಲ್ಲಿನ ಗೇಮ್ ಝೋನ್ ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಅಗ್ನಿ ಅವಘಡದಲ್ಲಿ 27 ಜನರು ಅಸುನೀಗಿದ್ರು. ಈ ಘಟನೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಬಿಎಂಪಿಯ ಮುಖ್ಯ ಅಯುಕ್ತರಿಗೆ ಪತ್ರ ಬರೆದು ಗೇಮ್ ಝೋನ್ ಗಳ ಸುರಕ್ಷತೆ ಪರಿಶೀಲನೆಗೆ ಸೂಚಿಸಿದ್ರು. ಇದೀಗ ಡಿಸಿಎಂ ಸೂಚನೆಯಂತೆ ಗೇಮ್ ಝೋನ್ ಗಳ ಸುರಕ್ಷತೆ ಪರಿಶೀಲನೆಗೆ ಟೀಂ ರಚಿಸಿದ್ದು, ಪರಿಶೀಲನೆ ಶುರುವಾಗಿದೆ.
ಇನ್ನು ಬರೀ ಗೇಮ್ ಝೋನ್ ಅಷ್ಟೇ ಅಲ್ಲದೇ ಚಿತ್ರಮಂದಿರ, ಪಬ್, ರೆಸ್ಟೋರೆಂಟ್, ಸ್ಟಾರ್ ಹೊಟೇಲ್ಗಳು, ಸೂಪರ್ ಮಾರ್ಕೆಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಪರಿಶೀಲನೆಗೆ ಪಾಲಿಕೆ ಮುಂದಾಗಿದೆ. ಸದ್ಯ ಪರಿಶೀಲನೆ ವೇಳೆ ಸುರಕ್ಷತಾಕ್ರಮ ಕೈಗೊಳ್ಳದ ಮೂರು ಗೇಮ್ ಝೋನ್ ಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಿರೋ ಪಾಲಿಕೆ, ನಗರದ ಗೇಮ್ ಝೋನ್ ಸೇರಿ ಎಲ್ಲೆಲ್ಲಿ ಸುರಕ್ಷತಾ ನಿಯಮ ಬ್ರೇಕ್ ಆಗಿದೆ ರಿಪೋರ್ಟ್ ನೀಡಲು ಸೂಚಿಸಿದೆ.
ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ: ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು, ಪ್ರವಾಸೋದ್ಯಮಕ್ಕೆ ಜೀವ
ಸದ್ಯ ನಗರದಲ್ಲಿ ಒಟ್ಟು 29 ಗೇಮ್ ಝೋನ್ ಗಳಿದ್ದು, ಅಲ್ಲಿ ಯಾವ ರೀತಿಯ ಸುರಕ್ಷತಾಕ್ರಮಗಳನ್ನ ಅನುಸರಿಸಲಾಗ್ತಿದೆ ಅನ್ನೋ ಬಗ್ಗೆ ಪರಿಶೀಲಿಸಲು ಪಾಲಿಕೆ ಸಜ್ಜಾಗಿದೆ.
ಒಟ್ಟಿನಲ್ಲಿ ಗುಜರಾತ್ ದುರಂತದ ಬಳಿಕ ನಗರದಲ್ಲೂ ಅಲರ್ಟ್ ಆಗಿರೋ ಪಾಲಿಕೆ, ಸುರಕ್ಷತಾ ಕ್ರಮಗಳನ್ನ ಅನುಸರಿಸದವರಿಗೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ. ಸದ್ಯ ನೂರಾರು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಇಂತ ದುರಂತಗಳು ನಡೆಯದಂತೆ ಪ್ರತಿಯೊಬ್ಬರು ಎಚ್ಚರಿಕೆವಹಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ