AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೆಟೊ ಬೆಳೆದು ಲಕ್ಷಾಂತರ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್; ಕಳಪೆ ಬೀಜದಿಂದಾಗಿ ಅನ್ನದಾತ ಕಂಗಾಲು

ಅವರೆಲ್ಲರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಹಗಲು ರಾತ್ರಿ ಕಷ್ಟಪಟ್ಟು ಟೊಮೆಟೊ ಬೆಳೆಯನ್ನ ಬೆಳೆದಿದ್ದರು. ಸದ್ಯ ಒಳ್ಳೆಯ ದರ ಕೂಡ ಇದ್ದು, ಇನ್ನೇನು ಫಸಲು ಬರುತ್ತದೆ,  ಲಕ್ಷ ಲಕ್ಷ ಆದಾಯ ಗಳಿಸಬಹುದು ಎಂಬ ಆಸೆಯಲ್ಲಿದ್ದರು. ಆದ್ರೆ, ಹೀಗೆ ಕನಸು ಕಾಣುತ್ತಿದ್ದ ರೈತ ಕುಟುಂಬಗಳಿಗೆ ಇದೀಗ ಭಾರೀ ಶಾಕ್ ಎದುರಾಗಿದೆ. ಆ ಕಂಪನಿ ನೀಡಿದ್ದ ಕಳಪೆ ಬೀಜದಿಂದಾಗಿ ಟೊಮೇಟೊ ಬೆಳೆದ ರೈತರು ಕಂಗಾಲಾಗಿದ್ದಾರೆ.

ಟೊಮೆಟೊ ಬೆಳೆದು ಲಕ್ಷಾಂತರ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್; ಕಳಪೆ ಬೀಜದಿಂದಾಗಿ ಅನ್ನದಾತ ಕಂಗಾಲು
ಕಳಪೆ ಬಿತ್ತನೆ ಬೀಜ; ಟೊಮೆಟೊ ಬೆಳೆದು ಆದಾಯದ ನಿರೀಕ್ಷೆಯಲ್ಲಿದ್ದ ರೈತ ಶಾಕ್​
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 31, 2024 | 10:34 PM

Share

ತುಮಕೂರು, ಮೇ.31: ಟೊಮೆಟೊ ಬೆಳೆ(Tomato Crop) ಬೆಳೆದ ತುಮಕೂರು ತಾಲೂಕಿನ ಮಲ್ಲಸಂದ್ರ ಗ್ರಾಮದ ಕೆಲ ರೈತರು ಇದೀಗ ಕಂಗಾಲಾಗಿದ್ದಾರೆ. ಇವರೆಲ್ಲ ಒಂದೇ ದಿನ ತುಮಕೂರು(Tumakuru) ತಾಲೂಕಿನ ಗೂಳೂರಿನ ವಿಷ್ಣುಪ್ರಿಯ ನರ್ಸರಿಯಲ್ಲಿ ಈಸ್ಟ್ ವೆಸ್ಟ್ ಕಂಪನಿಯ ಶ್ರೇಯಾ ತಳಿಯ ಟೊಮೆಟೊ ಸಸಿಗಳನ್ನ ತಂದು ನಾಟಿ ಮಾಡಿದ್ದರು. ಜನವರಿ ಅಂತ್ಯದಲ್ಲಿ ಈ ಟೊಮೆಟೊ ಸಸಿಗಳನ್ನ ನಾಟಿ ಮಾಡಲಾಗಿತ್ತು. ಗಿಡಗಳನ್ನ ಚೆನ್ನಾಗಿಯೇ ಪೋಷಿಸಿದ್ದರಿಂದ ಅವುಗಳು ತುಂಬಾ ಚೆನ್ನಾಗಿಯೇ ಬೆಳೆದಿದ್ದವು. ಆದ್ರೆ, ಇನ್ನೇನು ಫಸಲು ಕೈ ಸೇರೋ ಹೊತ್ತಿಗೆ ರೈತರಿಗೆ ಶಾಕ್ ಎದುರಾಗಿದೆ. ಕಳಪೆ ಬೀಜದ ಸಸಿಯ ಕಾರಣದಿಂದಾಗಿ ಟೊಮೆಟೊ ಕಾಯಿಗಳು ದಪ್ಪವೇ ಆಗುತ್ತಿಲ್ಲ. ಪೀಚು ಕಾಯಿಯೇ ಹಣ್ಣಾಗುತ್ತಿದೆ. ಒಂದು ಚಿಕ್ಕ ಗೋಲಿ ಗಾತ್ರದ ಕಾಯಿಯೇ ಹಣ್ಣಾಗಿ, ನಂತರ ಅದು ಒಡೆದು ಅಲ್ಲೇ ಉದುರಿ ಹೋಗುತ್ತಿದೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇನ್ನು ಈ ಮಲ್ಲಸಂದ್ರ ಗ್ರಾಮದಲ್ಲಿ ಒಟ್ಟು ಏಳು ಮಂದಿ ‘ಈಸ್ಟ್ ವೆಸ್ಟ್ ಕಂಪನಿಯ ಶ್ರೇಯಾ ತಳಿಯ ಟೊಮೆಟೊಗಳನ್ನು ಬೆಳೆದಿದ್ದಾರೆ. ಬರೋಬ್ಬರಿ 16 ಎಕರೆ ಜಮೀನಿನಲ್ಲಿ ಒಟ್ಟು 1ಲಕ್ಷ 70 ಸಾವಿರ ಸಸಿಗಳನ್ನ ನಾಟಿ ಮಾಡಿದ್ದರು. ಎಕರೆಗೆ 2 ಲಕ್ಷ ರೂಪಾಯಿಗಳಂತೆ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣವನ್ನ ಖರ್ಚು ಮಾಡಿದ್ದಾರೆ. ಬರಗಾಲ ಮಧ್ಯೆಯೇ ತೋಟಕ್ಕೆ ನೀರಿಲ್ಲದಿದ್ದರೂ ತೊಂದರೆಯಿಲ್ಲ ಎಂದು ಈ ಟೊಮೆಟೊ ಗಿಡಗಳಿಗೆ ಮನೆಯ ಹೆಂಗಸರು, ಮಕ್ಕಳೆಲ್ಲ ಸೇರಿ ಹಗಲು ರಾತ್ರಿ ನೀರು ಹಾಯಿಸಿದ್ದಾರೆ. ಗಿಡಗಳು ನೆಲಕ್ಕೆ ಬೀಳಬಾರದು ಎಂದು ತಂತಿ ಕಟ್ಟಿ, ಅವುಗಳನ್ನ ಮೇಲಕ್ಕೆ ಕಟ್ಟಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧಿಯನ್ನ ಸಿಂಪಡಿಸಿದ್ದಾರೆ. ಇನ್ನೇನು ಬೆಳೆದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಹೀಗಾಗಿರೋದನ್ನ ನೋಡಿ ರೈತರು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:ಮಂಡ್ಯ ಜಿಲ್ಲಾದ್ಯಂತ ಉತ್ತಮ ಮಳೆ, ಅರಳಿ ನಿಂತ ಕೆಂಪು ಸುಂದ್ರಿ ಗುಲಾಬಿ: ರೈತರ ಮೊಗದಲ್ಲಿ ಮಂದಹಾಸ

ರೈತ ಯದುಕುಮಾರ್ ಎಂಬುವವರು 1 ಎಕರೆ ಜಮೀನಿನಲ್ಲಿ 15 ಸಾವಿರ ಸಸಿಗಳನ್ನ ಬೆಳೆದಿದ್ದರು. ಒಟ್ಟು ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದ್ದು, ಸುಮಾರು 8 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದರು. ಅದರಂತೆ ರೈತ ರವಿಕುಮಾರ್ 4 ಎಕರೆ ಜಮೀನಿನಲ್ಲಿ 40 ಸಾವಿರ ಸಸಿಯನ್ನ ನಾಟಿ ಮಾಡಿ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಹೀಗೆ ಹಲವು ರೈತರು ಲಕ್ಷಾಂತರ ರೂಪಾಯಿಗಳನ್ನು ಟೊಮೆಟೊ ಬೆಳೆ ವ್ಯಯಿಸಿದ್ದಾರೆ. ಎಲ್ಲಾ ರೈತರು ಬೆಳೆದ ಬೆಳೆ ಸೇರಿ ಒಂದೂವರೆ ಕೋಟಿಗೂ ಹೆಚ್ಚು ಆದಾಯವನ್ನ ನಿರೀಕ್ಷಿಸಿದ್ದರು. ಆದ್ರೆ, ಇದೀಗ ಕಂಪನಿಯ ಎಡವಟ್ಟಿನಿಂದಾಗಿ ಲಾಭ ಇರಲಿ, ಬಂಡವಾಳವೂ ಇಲ್ಲದಂತಾಗಿದೆ.

ಇನ್ನು ಈ ಬಗ್ಗೆ ರೈತರು ತೋಟಗಾರಿಕೆ ಇಲಾಖೆಯವರಿಗೆ ಮಾಹಿತಿ ನೀಡಿದ್ರೆ, ‘ರೈತರಿಗೆ ಉಡಾಫೆ ಉತ್ತರವನ್ನ ಕೊಟ್ಟಿದ್ದಾರಂತೆ. ‘ಈಸ್ಟ್ ವೆಸ್ಟ್ ಕಂಪನಿಯವರಿಗೆ ಕರೆ ಮಾಡಿದ್ರೆ, ಸ್ಯಾಂಪಲ್ ಗಳನ್ನ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡುತ್ತೀವಿ, ಸಸಿ ನಮ್ಮದು ಅನ್ನೋದಾದ್ರೆ ಆಮೇಲೆ ನೋಡೋಣ ಎನ್ನುತ್ತಿದ್ದಾರಂತೆ. ಹೀಗಾಗಿ ಇವರಿಬ್ಬರ ನಡುವೆ ಸಿಲುಕಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಏಳು ಕುಟುಂಬಗಳು ಸಾಲ ಸೂಲ ಮಾಡಿ ಟೊಮೆಟೊ ಬೆಳೆದು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕೊಡಿಸುವಂತೆ ಅಂಗಲಾಚಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ