ಚಾಮರಾಜನಗರ: ಶಾಪಗ್ರಸ್ಥ ಜಿಲ್ಲೆ ಎಂದೇ ಕರೆಯಿಸಿಕೊಳ್ಳುವ ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರ ಸರಣಿ ಸಾವು ಮುಂದುವರೆದಿದೆ. ನಾಲ್ಕೈದು ದಿನಗಳ ಹಿಂದೆಯಷ್ಟೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಒಂದೇ ದಿನದಲ್ಲಿ 24ಜನ ರೋಗಿಗಳು ಮೃತಪಟ್ಟ ದುರ್ಘಟನೆ ನಡೆದಿತ್ತು. ಇದೀಗ ನಿನ್ನೆ (ಮೇ.6) ಮತ್ತೆ ಅದೇ ಆಸ್ಪತ್ರೆಯಲ್ಲಿ ಸರಣಿ ಸಾವು ಸಂಭವಿಸಿದ್ದು 20 ಜನ ಕೊರೊನಾ ಪೀಡಿತರು ಮೃತರಾಗಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್ ಸಾವಿನ ಸಂಖ್ಯೆ ಹೀಗೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿಗೆ ಕಾರಣ ತಿಳಿಯಲು ಪರಿಣಿತರ ತಂಡ ಕಳುಹಿಸಿ ಎಂದು ರಾಜ್ಯ ಸರ್ಕಾರಕ್ಕೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದಕ್ಕೆ ಕಾರಣ ತಿಳಿಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಬಳಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಮನವಿ ಸಲ್ಲಿಸಲಾಗಿದ್ದು, ಇಂದು (ಮೇ.7) ಪರಿಣಿತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಇತ್ತ ಜಿಲ್ಲಾ ಉಸ್ತುವಾರಿ ಸಚಿವರು ಸಹ ಇಂದು ಬೆಳಗ್ಗೆ 9 ಗಂಟೆಗೆ ನಗರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ಹಮ್ಮಿಕೊಂಡಿದ್ದಾರೆ. ಜೂಮ್ ಆ್ಯಪ್ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲಹೆ ಪಡೆಯಲಿರುವುದಾಗಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿಯೇ ಬೀಡು ಬಿಟ್ಟಿರುವ ಸಚಿವ ಇಂದು ಸಂತೇಮರಹಳ್ಳಿಯ ಕೊವಿಡ್ ಆಸ್ಪತ್ರೆ ಹಾಗೂ ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಕೊಳ್ಳೇಗಾಲದಲ್ಲಿ ತಾಲೂಕು ಟಾಸ್ಕ್ ಫೋರ್ಸ್ ಜೊತೆ ಸಭೆ ನಡೆಸುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ:
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಕೋವಿಡ್ ಸರಣಿ ಸಾವು : ನಾನು ತಪ್ಪು ಮಾಡಿಲ್ಲ – ಭಾವುಕರಾದ DC ರೋಹಿಣಿ ಸಿಂಧೂರಿ
ಆಕ್ಸಿಜನ್ ಇಲ್ಲದೆ ರೋಗಿಗಳ ಸಾವು: ಚಾಮರಾಜನಗರ ದುರಂತದ ನ್ಯಾಯಾಂಗ ತನಿಖೆಗೆ ಕರ್ನಾಟಕ ಸರ್ಕಾರ ಆದೇಶ
Published On - 7:49 am, Fri, 7 May 21