ಆಕ್ಸಿಜನ್ ಇಲ್ಲದೆ ರೋಗಿಗಳ ಸಾವು: ಚಾಮರಾಜನಗರ ದುರಂತದ ನ್ಯಾಯಾಂಗ ತನಿಖೆಗೆ ಕರ್ನಾಟಕ ಸರ್ಕಾರ ಆದೇಶ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 3ರಂದು ಕೋವಿಡ್-19 ರೋಗಿಗಳ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಆಯೋಗವು ವಿಚಾರಣೆ ನಡೆಸಲಿದೆ. ಆಕ್ಸಿಜನ್ ಕೊರತೆ ಮತ್ತು ಇತರ ಯಾವ ಕಾರಣದಿಂದ ಸಾವು ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಆಯೋಗಕ್ಕೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್-19 ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರವು ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ. ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿಗೆ ಈ ಹೊಣೆಯನ್ನು ಒಪ್ಪಿಸಲಾಗಿದೆ. ಒಂದು ತಿಂಗಳ ಒಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 3ರಂದು ಕೋವಿಡ್-19 ರೋಗಿಗಳ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಆಯೋಗವು ವಿಚಾರಣೆ ನಡೆಸಲಿದೆ. ಆಕ್ಸಿಜನ್ ಕೊರತೆ ಮತ್ತು ಇತರ ಯಾವ ಕಾರಣದಿಂದ ಸಾವು ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಆಯೋಗಕ್ಕೆ ಸೂಚನೆ ನೀಡಲಾಗಿದೆ.
ಈ ಆಯೋಗವು ವಿಚಾರಣಾ ಆಯೋಗ ಕಾಯ್ದೆ 1952ರ ಅನ್ವಯ ಎಲ್ಲ ಅಧಿಕಾರಗಳನ್ನೂ ಹೊಂದಿರುತ್ತದೆ. ಒಂದು ತಿಂಗಳ ಒಳಗೆ ವರದಿಯನ್ನು ಸಲ್ಲಿಸಬೇಕಿದೆ. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಬೇಕು. ಆರೋಗ್ಯ ಇಲಾಖೆ ಆಯುಕ್ತರು ಈ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಆದೇಶವು ತಿಳಿಸಿದೆ.
ವಿಚಾರಣಾ ಆಯೋಗದ ಕಚೇರಿಯು ಮೈಸೂರಿನಲ್ಲಿ ಇರುತ್ತದೆ. ಆರೋಗ್ಯ ಇಲಾಖೆಯ ಆಯುಕ್ತರು ಆಯೋಗದ ಕಚೇರಿ ಸ್ಥಾಪನೆ, ಸಿಬ್ಬಂದಿ, ಗೌರವಧನ ಮತ್ತು ಇತರ ಭತ್ಯಗಳನ್ನು ಒದಗಿಸುತ್ತಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯೆಲ್ ಆದೇಶದಲ್ಲಿ ತಿಳಿಸಿದ್ದಾರೆ.
ಸ್ವತಂತ್ರ ವರದಿಗೆ ಹೈಕೋರ್ಟ್ ನಿರ್ದೇಶನ ಚಾಮರಾಜನಗರದಲ್ಲಿ ಸಂಭವಿಸಿದ ಕೋವಿಡ್-19 ರೋಗಿಗಳ ಸಾವಿನ ಬಗ್ಗೆ ದಾಖಲೆ ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇಂದೇ ಚಾಮರಾಜನಗರಕ್ಕೆ ಹೋಗಿ ಎಲ್ಲ ದಾಖಲೆ ಪರಿಶೀಲಿಸಿ ವರದಿ ಕೊಡಿ ಎಂದು ಸೂಚಿಸಿದೆ.
ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ಚಾಮರಾಜನಗರ ಆಸ್ಪತ್ರೆಯಲ್ಲಿ 24 ರೋಗಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ನಗರದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ ಜಪ್ತಿ ಮಾಡಿದರು. ಹೈಕೋರ್ಟ್ ಆದೇಶದಂತೆ ಚಾಮರಾಜನಗರ ಡಿಸಿ ಕಚೇರಿ, ಡಿಹೆಚ್ಒ ಕಚೇರಿ, ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದರು.
(Karnataka Government Constituted Commission for Inquiry of Chamarajanagar Oxygen Scarcity Deaths)
ಇದನ್ನೂ ಓದಿ: ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಕೋವಿಡ್ ಸರಣಿ ಸಾವು : ನಾನು ತಪ್ಪು ಮಾಡಿಲ್ಲ; ಭಾವುಕರಾದ DC ರೋಹಿಣಿ ಸಿಂಧೂರಿ
ಇದನ್ನೂ ಓದಿ: ಘಟನೆಗೆ ಮೈಸೂರು ಡಿಸಿಯೇ ನೇರ ಕಾರಣ; ಚಾಮರಾಜನಗರ ಡಿಸಿಯಿಂದ ಆರೋಪ
Published On - 6:00 pm, Wed, 5 May 21