ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳುತ್ತಿದ್ದಾರೆ. ಹಾಗಾಗಿ ಬಿಲ್ಡರ್ಗಳ ಜೊತೆ ಸಭೆ ನಡೆಸಿ ವಲಸೆ ಕಾರ್ಮಿಕರ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾರ್ಮಿಕರು ಗಾಳಿ ಸುದ್ದಿಗೆ ಕಿವಿಗೊಡಬಾರದು. ತಪ್ಪುಗ್ರಹಿಕೆಯಿಂದ ಬೆಂಗಳೂರು ತೊರೆಯಬೇಡಿ. ಕಾರ್ಮಿಕರಿಗೆ ಎಲ್ಲ ಸೌಲಭ್ಯವನ್ನು ಕಲ್ಪಿಸುತ್ತೇವೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ರಾಜ್ಯದಲ್ಲಿ ಕೆಂಪು ವಲಯವನ್ನು ಹೊರತುಪಡಿಸಿ ಉಳಿದೆಡೆ ವ್ಯಾಪಾರ, ಕೈಗಾರಿಕೆಗಳು ಆರಂಭಿಸಬೇಕು. ಕಾರ್ಮಿಕರ ವಲಸೆ ತಪ್ಪಿಸಲು ಊಟ, ವಸತಿ ಸೌಲಭ್ಯ ನೀಡಲಾಗುತ್ತದೆ. ಇನ್ನು ಮುಂದೆಯೇ ಇದೇ ರೀತಿ ಸೌಲಭ್ಯ ನೀಡುತ್ತೇವೆ. ವಾಪಸ್ ಹೋಗುವ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಕಾರ್ಮಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆ ಬಿಲ್ಡರ್ಗಳು ನೀಡಿದ್ದಾರೆ. ಇಲ್ಲೇ ಇದ್ದು ಅಗತ್ಯ ಸೌಲಭ್ಯವನ್ನು ಪಡೆದುಕೊಳ್ಳಿ ಎಂದು ಬಿಎಸ್ವೈ ಮನವಿ ಮಾಡಿದರು.
ರಿಯಾಯಿತಿ ದರದಲ್ಲಿ ಖಾಸಗಿ ಸಂಸ್ಥೆಗಳಿಗೆ ಬಸ್ ಸೇವೆಯನ್ನು ಒದಗಿಸಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ. ರೈತರಿಗೆ ಅಗತ್ಯ ಸವಲತ್ತು ಒದಗಿಸುವ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದೇನೆ ಎಂದು ಇದೇ ವೇಳೆ ಸಿಎಂ ಯಡಿಯೂರಪ್ಪ ತಿಳಿಸಿದರು.
Published On - 1:56 pm, Tue, 5 May 20