ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಣಕ್ಕಾಗಿ ಕೆಲ ಅಂಕಪಟ್ಟಿಗಳಲ್ಲಿ ಅಂಕಗಳ ಅಕ್ರಮ ತಿದ್ದುಪಡಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ಪರೀಕ್ಷಾ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿರುವ ದೇವರಾಜು ಆಪ್ತರ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದೆ.
ಬೆಂಗಳೂರು ವಿವಿಯ ಪರೀಕ್ಷಾ ವಿಭಾಗದಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು ವಿಶ್ವವಿದ್ಯಾಲಯದ ಅಂಕಪಟ್ಟಿಗಳಲ್ಲಿ ಕಂಪ್ಯೂಟರ್ ವಿಭಾಗದ ಕೆಲ ಸಿಬ್ಬಂದಿಯಿಂದ ಅಕ್ರಮ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ವಿಭಾಗದ ನಾಗೇಶ್, ಕೆ.ಎನ್.ಪ್ರಧಾನ್, ರಾಜಕುಮಾರ್, ಕಾಂತಿಮತಿ, ಶಿವರಾಜ್ ರಾಮಕೃಷ್ಣ, ಮಧುಕರ್ ಮತ್ತು ವೀಣಾ ವಿರುದ್ಧ ಆರೋಪ ಕೇಳಿಬಂದಿದೆ.
ಅಂದ ಹಾಗೆ, ಈ ಹಿಂದೆಯೂ ಇವರ ಮೇಲೆ ಅಂಕಗಳ ತಿದ್ದುಪಡಿ ಆರೋಪ ಕೇಳಿಬಂದಿತ್ತು. ಹಾಗಾಗಿ, ಇವರನ್ನು ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿತ್ತಂತೆ. ಆದರೆ, ಡಾ.ವೇಣುಗೋಪಾಲ್ ವಿ.ಸಿ ಆಗುತ್ತಿದ್ದಂತೆ ಇವರೆಲ್ಲಾ ಮತ್ತೆ ಅದೇ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಂಡು ಅಕ್ರಮ ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಸ್ತುತ ಇವರು ಅದೇ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸುಮಾರು 804 ಅಂಕಪಟ್ಟಿಗಳಲ್ಲಿ ಅಂಕಗಳ ಬದಲಾವಣೆಯ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದ್ದು ಒಂದು ಪೇಪರ್ಗೆ ₹20 ಸಾವಿರದವರೆಗೂ ಹಣ ನಿಗದಿ ಸಹ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಸದ್ಯ, ಅಂಕಪಟ್ಟಿಗಳ ಅಂಕ ತಿದ್ದುಪಡಿ ಅಕ್ರಮದ ಬಗ್ಗೆ ಬೆಂಗಳೂರು ವಿವಿ ರಿಜಿಸ್ಟ್ರಾರ್ ಜ್ಯೋತಿ ಅವರಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. TRS ಎಂಬ ಖಾಸಗಿ ಕಂಪನಿಗೆ ಟೆಂಡರ್ ಕೊಡಲಾಗಿದ್ದು, ಇವರ ಮೇಲೂ ಸಹ ದೂರು ಕೊಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಜೊತೆಗೆ, ಸುಮಾರು ₹4ರಿಂದ 5 ಕೋಟಿ ಅಕ್ರಮ ನಡೆದಿರುವ ಸಾಧ್ಯತೆಯಿದೆ ಎಂದು ಜ್ಯೋತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.