ರಾಜಕಾರಣ | ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತು ಜೊಲ್ಲೆ ಕುಟುಂಬದ ನಡುವೆ ಜಾರಿಯಲ್ಲಿದೆ ಶೀತಲ ಸಮರ!
ಜೊಲ್ಲೆ ದಂಪತಿಗಳು ಪ್ರತಿನಿಧಿಸುವ ಚಿಕ್ಕೋಡಿ ಮತ್ತು ನಿಪ್ಪಾನಿ ಕ್ಷೇತ್ರಗಳ ಬಗ್ಗೆ ಮಾತನಾಡುವುದರ ಜತೆಗೆ ಬಿಜೆಪಿ ಶಾಸಕರಿರುವ ಕ್ಷೇತ್ರದ ಬಗ್ಗೆಯೂ ಮಾತಾಡಿರುವ ರಮೇಶ್ ಜೊಲ್ಲೆ ಕುಟುಂಬದ ವೈಮನಸ್ಸನ್ನು ಕಟ್ಟಿಕೊಂಡಿದ್ದಾರೆ.

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಚಾರದಲ್ಲಿ ಬೆಳಗಾವಿ ಜಿಲ್ಲಾ ರಾಜಕಾರಣ ನಿರ್ವಹಿಸಿದ ಪಾತ್ರ ಎಂಥದ್ದು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಆದರೆ ಈಗ ಬೆಳಗಾವಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಕ್ರಮೇಣವಾಗಿ ಬಹಿರಂಗಗೊಳ್ಳುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಜೊಲ್ಲೆ ಕುಟುಂಬ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಜಾರಿಯಲ್ಲಿರುವ ಮುಸುಕಿನ ಗುದ್ದಾಟ.
ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದ 5 ದಿನಗಳ ನಂತರ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಮಧ್ಯೆ ಗೆದ್ದಿರುವ ಸದಸ್ಯರಲ್ಲಿ ಅತಿ ಹೆಚ್ಚು ನಮ್ಮವರೇ ಎಂದು ಬಿಂಬಿಸಿಕೊಳ್ಳುವ ಸಮರ ಶುರುವಾಗಿದೆ. ಏತನ್ಮಧ್ಯೆ, ಗೋಕಾಕ್ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದ ಸದಸ್ಯರಿಗೆ ಸನ್ಮಾನ ಸಮಾರಂಭವನ್ನ ಸೋಮವಾರ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಕ್ಷೇತ್ರವಷ್ಟೇ ಅಲ್ಲದೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದಾರೆ.
ಕಾಂಗ್ರೆಸ್ ಕ್ಷೇತ್ರಗಳ ಬಗ್ಗೆ ಮಾತನಾಡುವುದರ ಜತೆಗೆ ಬಿಜೆಪಿ ಶಾಸಕರಿರುವ ಕ್ಷೇತ್ರದ ಬಗ್ಗೆಯೂ ಮಾತಾಡಿದ ರಮೇಶ್, ಜೊಲ್ಲೆ ಕುಟುಂಬದ ವೈಮನಸ್ಸನ್ನು ಕಟ್ಟಿಕೊಂಡಿದ್ದಾರೆ. ಅದ್ರಲ್ಲೂ ಮುಖ್ಯವಾಗಿ ಜೊಲ್ಲೆ ದಂಪತಿ ಅಣ್ಣಾಸಾಹೇಬ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರದ ಬಗ್ಗೆ ಮಾತನಾಡಿ, ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ ಅಂತ ಪತ್ರಿಕೆಗಳಲ್ಲಿ ಓದಿದ್ದೇನೆ, ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ಹೊಂದಾಣಿಕೆಯ ಕೊರತೆಯಿಂದಾಗಿ ಈ ರೀತಿ ಆಗಿರಬಹುದು. ಆದರೆ ಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು 24 ಗಂಟೆಗಳಲ್ಲಿ ಬಿಜೆಪಿಗೆ ಕರೆತರಬಲ್ಲೆ ಎಂದು ಹೇಳಿದ್ದರು. ಇದರಿಂದ ಮುಜುಗರಕ್ಕಿಡಾಗಿರುವ ಜೊಲ್ಲೆ ದಂಪತಿ, ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಪಂ ಚುನಾವಣೆ ಫಲಿತಾಂಶ ಬರುವ ಮೊದಲು ಶಶಿಕಲಾ ಜೊಲ್ಲೆಯವರ ಕ್ಷೇತ್ರ ನಿಪ್ಪಾಣಿಯ ಕೆಲವು ಗ್ರಾಮಗಳಲ್ಲಿ ಜಾರಕಿಹೊಳಿ ಆಪ್ತರು ಮತ್ತು ಜೊಲ್ಲೆ ಕುಟುಂಬದ ಬೆಂಬಲಿಗರ ನಡುವೆ ಗಲಾಟೆಗಳು ನಡೆದಿದ್ದವು. ಅದೇ ಸಮಯದಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದ ತನ್ನ ಆಪ್ತರಿಗೆ ಸಪೋರ್ಟ್ ಮಾಡಿದ್ದರು ಎಂಬ ಮಾತುಗಳು ಕೂಡ ಬೆಳಗಾವಿ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಅವರ ಈ ನಡೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮತ್ತು ಶಶಿಕಲಾ ಜೊಲ್ಲೆ ಅವರನ್ನು ಅಸಮಾಧಾನಗೊಳಿಸಿತ್ತು.
ಈಗ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ನಿಪ್ಪಾಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ ಅಂತ ಹೇಳುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸವದಿ ಬಣದ ಜೊತೆಗೆ ಗುರುತಿಸಿಕೊಂಡಿರುವ ಜೊಲ್ಲೆ ಕುಟುಂಬ ಕೆಲ ತಿಂಗಳ ಹಿಂದೆಯಷ್ಟೇ ನಡೆದಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಮಯದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಒಂದು ಬಣವಾಗಿದ್ದರೆ ಜಾರಕಿಹೊಳಿ ಮತ್ತು ಕತ್ತಿ ಬ್ರದರ್ಸ್ ಅವರದ್ದು ಮತ್ತೊಂದು ಬಣವಾಗಿತ್ತು. ಆ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಬಣದಲ್ಲಿ ಜೊಲ್ಲೆ ಕುಟುಂಬ ಗುರುತಿಸಿಕೊಂಡಿತ್ತಾದರೂ ಕೊನೆ ಘಳಿಗೆಯಲ್ಲಿ ಕತ್ತಿ ಸಹೋದರರು, ಜಾರಕಿಹೊಳಿ ಬ್ರದರ್ಸ್ ಮತ್ತು ಸವದಿ ಬಣ ಒಗ್ಗೂಡಿಸಿ ಚುನಾವಣೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದರು. ಬ್ಯಾಂಕ್ ಚುನಾವಣೆ ಸಮಯದಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂಬ ಸೇಡಿಗೆ ರಮೇಶ್ ಈ ರೀತಿ ಮಾಡುತ್ತಿದ್ದಾರಾ ಅಥವಾ ಡಿಸಿಎಂ ಲಕ್ಷ್ಮಣ ಸವದಿ ಬಣದಲ್ಲಿ ಜೊಲ್ಲೆ ಕುಟುಂಬ ಗುರುತಿಸಿಕೊಂಡಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರಾ ಎಂಬ ಮಾತು ಚರ್ಚೆ ಈಗ ಶುರುವಿಟ್ಟುಕೊಂಡಿದೆ. ಇದರ ಜತೆಗೆ ಸದ್ಯ ನಿಪ್ಪಾಣಿ ಮತ್ತು ಚಿಕ್ಕೋಡಿಯಲ್ಲಿ ಜೊಲ್ಲೆ ಕುಟುಂಬ ಹಿಡಿತ ಸಾಧಿಸಿರುವುದನ್ನು ತಪ್ಪಿಸಲು ರಮೇಶ್ ಜಾರಕಿಹೊಳಿ ಈ ರೀತಿ ಮಾಡುತ್ತಿರಬಹುದು ಎಂಬುದು ರಾಜಕೀಯ ಲೆಕ್ಕಾಚಾರ.
ರಮೇಶ್ ಜಾರಕಿಹೊಳಿ ತಪ್ಪು ಕಲ್ಪನೆ ಎಂದ ಅಣ್ಣಾಸಾಹೇಬ್ ಜೊಲ್ಲೆ ನಿಪ್ಪಾಣಿಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಸೀಟ್ ಸಿಕ್ಕಿಲ್ಲ. ಹತ್ತು-ಹನ್ನೆರಡು ಸೀಟ್ ಕಾಂಗ್ರೆಸ್ ಬೆಂಬಲಿಗರಿಗೆ ಹೋಗಿರಬಹುದು. ಆದರೆ ಚಿಕ್ಕೋಡಿಯಲ್ಲಿ ನಾವೇ ಜಾಸ್ತಿ ಗೆದ್ದುಕೊಂಡಿದ್ದೇವೆ. ಅತಂತ್ರ ಸ್ಥಿತಿಯಲ್ಲಿರುವವರು ನಮ್ಮೊಂದಿಗೆ ಬರುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿಗೆ ತಪ್ಪು ಕಲ್ಪನೆಯಾಗಿರಬಹುದು. ಸರಿಯಾಗಿ ಅವಲೋಕನ ಮಾಡಿದರೆ ಕಾಂಗ್ರೆಸ್-ಬಿಜೆಪಿ ಸಮವಾಗಿರುವುದು ಗೊತ್ತಾಗುತ್ತದೆ. ಬಿಜೆಪಿಗೆ ಹೆಚ್ಚು ಜನರನ್ನು ಅವರು ತಂದರೆ ನಮಗೂ ಸಂತೋಷವಾಗುತ್ತದೆ ಎಂದು ಅಣ್ಣಾಸಾಹೇಬ್ ಹೇಳಿದ್ದಾರೆ.