ಬೆಂಗಳೂರು: ಜನರ ಅಮಾನವೀಯ ನಡೆ ಕಂಡು ಆಂಬುಲೆನ್ಸ್ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಯಾವುದೇ ಅಂಗಡಿ ಆಥವಾ ಹೋಟೆಲ್ ಮುಂದೆ ಆಂಬುಲೆನ್ಸ್ ನಿಲ್ಲಿಸುವ ಹಾಗಿಲ್ಲ. ನಮ್ಮನ್ನು ಕಂಡ ಕೂಡಲೇ ಜನ ಹೆದರಿಕೊಳ್ಳುತ್ತಾರೆ. ತಕ್ಷಣ ಇಲ್ಲಿಂದ ಹೊರಡಿ ಎಂದು ಬೈಯುತ್ತಾರೆ ಎಂದು ನೋವು ಹಂಚಿಕೊಂಡಿದ್ದಾರೆ.
ಹೊಟ್ಟೆ ಹಸಿದಿದೆ ಎಂದು ಹೋಟೆಲ್ಗಳಿಗೆ ಹೋದರು ಊಟ ಸರಿಯಾಗಿ ನೀಡುವುದಿಲ್ಲ. ನಮ್ಮನ್ನು ನಾಯಿಗಳಂತೆ ನೋಡುತ್ತಾರೆ. ನಾಯಿಗಳಿಗೆ ಹಾಕಿದ ರೀತಿ ಊಟವನ್ನು ದೂರದಿಂದ ಎಸೆಯುತ್ತಾರೆ. ಎಷ್ಟೋ ಕೊವಿಡ್ ಮೃತದೇಹಗಳ ಅಂತ್ಯಸಂಸ್ಕಾರವನ್ನು ನಾವೇ ಮಾಡಿದ್ದೇವೆ. ಅವರ ಮನೆಯವರು ಕೂಡ ಬರುವುದಿಲ್ಲ. ನಾವು ಎಷ್ಟೇ ಕಷ್ಟಪಟ್ಟರೂ ನಮ್ಮನ್ನು ಕೀಳಾಗಿ ನೋಡುತ್ತಾರೆ ಎಂದು ಸುಮ್ಮನಹಳ್ಳಿ ಚಿತಾಗಾರದ ಬಳಿ ಆ್ಯಂಬುಲೆನ್ಸ್ ಚಾಲಕರು ನೋವು ಹಂಚಿಕೊಂಡಿದ್ದಾರೆ.
ಅಂತ್ಯಕ್ರಿಯೆಯಿಂದಲೂ ದೂರ ಉಳಿದ ಕುಟುಂಬಸ್ಥರು; 3 ದಿನದಿಂದ ಆಸ್ಪತ್ರೆಯಲ್ಲೇ ಮೃತದೇಹ
ಕೊರೊನಾ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದು ಜನರಿಗೆ ಆತಂಕ ಸೃಷ್ಟಿಸುತ್ತಿದೆ. ಕೊವಿಡ್ನಿಂದ ಸಾವಿಗೀಡಾದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಮತ್ತು ಸಂಬಂಧಿಕರು ಮುಂದಾಗುತ್ತಿಲ್ಲ. ಅಂತಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು 3 ದಿನಗಳಾದರೂ ಮೃತದೇಹದ ಅಂತ್ಯಕ್ರಿಯೆಗೆ ಕುಟುಂಬಸ್ಥರು ಆಸ್ಪತ್ರೆಗೆ ಬಂದಿಲ್ಲದ್ದನ್ನು ಕಂಡು ಆ್ಯಂಬ್ಯುಲೆನ್ಸ್ ಚಾಲಕ ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ.
ರಾಜನ್ ಕುಮಾರ್ (28) ಎಂಬುವವರಿಗೆ ಕೊವಿಡ್ ಸೋಂಕು ತಗುಲಿದ್ದ ಕಾರಣ ಯಲಹಂಕ ಚೈತನ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ರಾಜನ್ ಕುಮಾರ್ ಸಾವಿಗೀಡಾಗಿದ್ದಾರೆ. ವಿಷಯ ತಿಳಿಸಲು ಕುಟುಂಬಸ್ಥರಿಗೆ ಕರೆ ಮಾಡಿದರೆ ನಾಟ್ ರೀಚೆಬಲ್ ಬರುತ್ತಿದೆ. 3 ದಿನಗಳಾದರೂ ಕುಟುಂಬಸ್ಥರು ಮತ್ತು ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಂಬ್ಯಲೆನ್ಸ್ ಚಾಲಕ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಲಕ್ಷ್ಮೀಪುರದ ಮೇಡಿ ಅಗ್ರಹಾರ ಚಿತಾಗಾರದಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿದೆ.
ಮೃತ ವ್ಯಕ್ತಿಯ ಕುಟುಂಬಸ್ಥರು ಯಾರು? ಎಲ್ಲಿಯವರು ಎಂಬ ಮಾಹಿತಿ ತಿಳಿದು ಬಂದಿಲ್ಲ. ಆಸ್ಪತ್ರೆಯ ಬಿಲ್ ಕಟ್ಟಲಾಗದೆಯೇ ಶವ ಬಿಟ್ಟು ಹೋದ್ರಾ ಅಥವಾ ಕೊರೊನಾ ಭಯಕ್ಕೆ ಅಂತ್ಯಸಂಸ್ಕಾರದಿಂದ ದೂರ ಉಳಿದ್ರಾ ಎನ್ನುವ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಚಿತಾಗಾರಕ್ಕೆ ಆ್ಯಂಬುಲೆನ್ಸ್ ಸಿಗದ ಕಾರಣ ತಾಯಿ ಮೃತದೇಹವನ್ನು ಕಾರಿನಲ್ಲೇ ತಂದ ಮಗ