ಸುದ್ದಿ ವಿಶ್ಲೇಷಣೆ | ಕೊವಿಡ್​ ಸುನಾಮಿ ಮಧ್ಯೆ ರಾಜ್ಯದ ಐಎಎಸ್ ಅಧಿಕಾರಿಗಳ ವಿಫಲತೆ ಬಗ್ಗೆ ಮಾತನಾಡುವವರು ಯಾರು?​

|

Updated on: May 13, 2021 | 6:47 PM

ಯಾವುದೇ ಸಮಸ್ಯೆ ಬಂದಾಗಲೂ ನಮಗೆ ಕಾಣುವುದು ರಾಜಕಾರಣಿಗಳು ಮಾತ್ರ. ಆದರೆ, ಈ ಬಾರಿಯ ಕೊವಿಡ್​ ಅಲೆಯಲ್ಲಿ ಕರ್ನಾಟಕದ ಕೆಲವು ಐಎಎಸ್​ ಅಧಿಕಾರಿಗಳು ಯಾವ ಕೆಲಸಕ್ಕೂ ಪ್ರಯೋಜನ ಇಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಇದು ಹೇಗೆ ಆಯಿತು ಎಂಬುದರ ವಿಶ್ಲೇಷಣೆ ಇಲ್ಲಿದೆ.

ಸುದ್ದಿ ವಿಶ್ಲೇಷಣೆ | ಕೊವಿಡ್​ ಸುನಾಮಿ ಮಧ್ಯೆ ರಾಜ್ಯದ ಐಎಎಸ್ ಅಧಿಕಾರಿಗಳ ವಿಫಲತೆ ಬಗ್ಗೆ ಮಾತನಾಡುವವರು ಯಾರು?​
ವಿಧಾನಸೌಧ
Follow us on

ಇದನ್ನು ಓದಿದರೆ ನಿಮಗೆ ಆಶ್ಚರ್ಯ ಆಗಬಹುದು ಅಥವಾ ಶಾಕ್ ಆಗಬಹುದು. ಕರ್ನಾಟಕದಲ್ಲಿ ಆಮ್ಲಜನಕದ ಕೊರತೆ ಮಾತ್ರ ಇದೆ ಎಂದುಕೊಂಡಿರಾ? ಸದ್ಯ ಅದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯೂ ಇದೆ. ನಿಮಗೆ ಇದನ್ನು ಕೇಳಿದರೆ ಅಚ್ಚರಿ ಮತ್ತು ಶಾಕ್ ಎರಡೂ ಆಗುತ್ತೆ ಅಲ್ಲವೇ? ನೀವು ತುಂಬಾ ಸಿನಿಕರಾಗಿದ್ದರೆ, ಐಎಎಸ್ ಅಧಿಕಾರಿಗಳು ಎಂದರೆ ಬಿಳಿ ಆನೆ ಇದ್ದಂತೆ, ಅವರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು. ಅವರಿಂದ ನಮಗೇನು ಪ್ರಯೋಜನ ಇಲ್ಲ ಅಂತೀರಾ? ಅವರಿದ್ದರೇನು? ಬಿಟ್ಟರೇನು ಅಂದುಕೊಳ್ಳಬೇಡಿ. ಇತ್ತೀಚೆಗೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದನ್ನು ನೋಡಿದ ಮೇಲೆ ಗೊತ್ತಾಗುತ್ತೆ -ಈ ಐಎಎಸ್ ಅಧಿಕಾರಿಗಳು ಸ್ವಲ್ಪ ಎಡವಿದರೂ ಯಾವ ರೀತಿಯ ಪರಿಣಾಮ ಆಗುತ್ತೆ ಅಂತ. ಕೊವಿಡ್ ಸಂಕಟದ ಮಧ್ಯೆ ಈ ಐಎಎಸ್ ಕೊರತೆ ಬಗ್ಗೆ ಯಾಕೆ ಚರ್ಚೆ? ಅದು ಸೂಕ್ತ ಅಲ್ಲ ಅಂತ ಅನ್ನಿಸಿದರೆ ತಪ್ಪಲ್ಲ. ಅದಕ್ಕೂ ಮೊದಲು ಇವರ ಬಲಾಬಲ ನೊಡೋಣ.

ಐಎಎಸ್ ಬಲಾಬಲ-ಹೇಗೆ?
ಕರ್ನಾಟಕಕ್ಕೆ ಕೇಂದ್ರದಿಂದ ಮಂಜೂರಾದ ಐಎಎಸ್ ಹುದ್ದೆಗಳ ಸಂಖ್ಯೆ 314. ಈ ಸಂಖ್ಯೆ ಪ್ರತಿ ದಶಕಕ್ಕೊಮ್ಮೆ ಬದಲಾಗುತ್ತದೆ . ಈ 314 ರಲ್ಲಿ 33.3 ಪ್ರತಿಶತ ಅಧಿಕಾರಿಗಳು ಕೆಎಎಸ್​ನಿಂದ ಐಎಎಸ್​ಗೆ ಬಡ್ತಿ ಪಡೆದವರು. ಅಂದರೆ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿ ಕರ್ನಾಟಕ ಸರಕಾರದ ಸೇವೆಯಲ್ಲಿ ನಿರತರಾಗಿರುವ ಆಯ್ದ ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಐಎಎಸ್ ಸೇವೆಗೆ ಹೋಗುವವರನ್ನು ಪ್ರಮೋಟೆಡ್ ಐಎಎಸ್ ಎಂದು ಕರೆಯುತ್ತಾರೆ. ಹಾಗೆ ನೋಡಿದರೆ, ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ನೇರವಾಗಿ ಆಯ್ಕೆಯಾಗಿ ಬಂದಿರುವ ಅಧಿಕಾರಿಗಳು ಈ ಪ್ರಮೋಟೆಡ್ ಐಎಎಸ್ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಯಾವತ್ತು ಒಪ್ಪಿಕೊಳ್ಳುವುದಿಲ್ಲ. ಅತೀ ಹೆಚ್ಚು ಎಂದರೆ, ಈ ಪ್ರಮೋಟೆಡ್ ಐಎಎಸ್ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿ ಹುದ್ದೆಯವರೆಗೆ ಹೋಗಬಹುದು. ಅದಕ್ಕೂ ಮುಂದೆ ಹೋಗಲಾಗದು.

ಆಡಳಿತ ಇಲಾಖೆ (ಡಿಪಿಎಆರ್) ಮಾಹಿತಿ ಪ್ರಕಾರ ಪ್ರಕಾರ, ಈ 314 ರಲ್ಲಿ, 16 ಜನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕದಲ್ಲಿ ಇರಬೇಕು. ಆದರೆ ಅಷ್ಟೆಲ್ಲ ಜನ ಇಲ್ಲ. ಮೂವತ್ತು ವರ್ಷ ಸೇವೆ ಸಲ್ಲಿಸಿದವರೆಲ್ಲ ಈಗ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ಪಡೆಯುತ್ತಾರೆ (ಕೆಲಸ ಮಾಡಲಿ ಅಥವಾ ಬಿಡಲಿ). ಇವರ ಕೆಳಗೆ ಬರುವ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಸಂಖ್ಯೆ ಎಲ್ಲ ಸೇರಿ 171 ಹಿರಿಯ ಹುದ್ದೆಗಳು ಕರ್ನಾಟಕದಲ್ಲಿ ಇವೆ. ಸಾಮಾನ್ಯವಾಗಿ, ಕರ್ನಾಟಕದ ಬಲಕ್ಕೆ ಹೋಲಿಸಿದರೆ, 40 ಐಎಎಸ್ ಅಧಿಕಾರಿಗಳು ಕೇಂದ್ರ ಸೇವೆಯಲ್ಲಿ ಇರಬೇಕು. ಈಗ ಬರೀ 25 ಜನ ಮಾತ್ರ ಇದ್ದಾರೆ ಎಂದು ಓರ್ವ ನಿವೃತ್ತ ಮುಖ್ಯ ಕಾರ್ಯದರ್ಶಿ ಹೇಳುತ್ತಾರೆ. ಇದರ ಜೊತೆಗೆ ರಜೆ ಮೇಲೆ ಹೋಗುವವರು ಇದ್ದೇ ಇರುತ್ತಾರೆ. ಅವರು ಹೇಳುವ ಪ್ರಕಾರ, ಈಗ ಹಿರಿಯ ಹುದ್ದೆಗಳಲ್ಲಿ ಸುಮಾರು ಪ್ರತಿಶತಃ 30-40  ಕೊರತೆ ಇದೆ.

ಯಾಕೆ ಹೀಗಾಯ್ತು?
1990 ರ ದಶಕದಲ್ಲಿ ಪ್ರತಿ ವರ್ಷ 120 ಐಎಎಸ್ ಅಧಿಕಾರಿಗಳನ್ನು ಕೇಂದ್ರ ಲೋಕಸೇವಾ ಆಯೋಗ ಆಯ್ಕೆ ಮಾಡಿ ಬೇರೆ ಬೇರೆ ರಾಜ್ಯಕ್ಕೆ ಹಂಚುತ್ತಿತ್ತು. ಮಧ್ಯೆ 1995, 1996 ರಲ್ಲಿ ಈ ಸಂಖ್ಯೆಯನ್ನು ಒಮ್ಮೆಲೆ 70 ಕ್ಕೆ ಇಳಿಸಿತ್ತು. ಇದರಿಂದಾಗಿ ರಾಜ್ಯಗಳಿಗೆ ಬರುವ ಹೊಸ ಅಧಿಕಾರಿಗಳ ಸಂಖ್ಯೆ ಒಮ್ಮೆಲೆ ಕುಸಿಯಿತು. ಎರಡು ವರ್ಷ ಹೊಸ ಐಎಎಸ್ ಅಧಿಕಾರಿಗಳು ಕರ್ನಾಟಕಕ್ಕೆ ಬರಲೇ ಇಲ್ಲ. ಅದರ ಪರಿಣಾಮ ಈಗ ಕಾಣುತ್ತಿದೆ.

ಚಾಮರಾಜನಗರ ಡಿಸಿ ಎಂ.ಆರ್.ರವಿ ಮತ್ತು ಮೈಸೂರು ಡಿಸಿ ರೋಹಿಣಿ ಸಿಂಧೂರಿ

ದೆಹಲಿ ಸ್ಥಿತಿ ಹೇಗೆ?
ಕರ್ನಾಟಕದಲ್ಲಿಯೂ ಕೆಲಸಕ್ಕೆ ಜನ ಇಲ್ಲ ದೆಹಲಿಯಲ್ಲಿಯೂ ಐಎಎಸ್ ಅಧಿಕಾರಿಗಳ ಕೊರತೆ ಇದೆ. ದಿ ಪ್ರಿಂಟ್ ಆನ್ಲೈನ್ ಪತ್ರಿಕೆ ಕಳೆದ ತಿಂಗಳು ಬರೆದ ವಿಶೇಷ ವರದಿಯ ಪ್ರಕಾರ ನರೇಂದ್ರ ಮೋದಿ ಸರಕಾರ ಕೂಡ ಐಎಎಸ್ ಅಧಿಕಾರಿಗಳ ಕೊರತೆಯಿಂದ ಕಂಗಾಲಾಗಿದೆ. ಎಲ್ಲ ರಾಜ್ಯಗಳಿಗೂ ಎರಡು ಬಾರಿ ಪತ್ರ ಕಳಿಸಿ, ಐಎಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳಿಸಿಕೊಡಿ ಎಂದು ಕೇಳಿದ್ದರೂ ಯಾರೂ ಅಷ್ಟೇನು ಉತ್ಸಾಹ ತೋರಿಸಿಲ್ಲ. ಬೇರೆ ರಾಜ್ಯದ ಸ್ಥಿತಿ ನಮಗೇನು ಗೊತ್ತಿಲ್ಲ. ಆದರೆ, ಕರ್ನಾಟಕದ ಸ್ಥಿತಿ ಮಾತ್ರ ಗಂಭೀರವಾಗಿದೆ.

ಇದರ ಒಳಗುಟ್ಟೇನು ಗೊತ್ತೆ? ದೆಹಲಿಯ ಐಎಎಸ್ ಲಾಬಿ ಒಂದು ಸಾಗರ ಇದ್ದಂತೆ. ಅಲ್ಲಿ ಹೋಗಿ ಒಳ್ಳೆ ಹುದ್ದೆ ಪಡೆಯುವುದು ಅಸಾಧ್ಯದ ಮಾತು. ಹಾಗಾಗಿ ಬಹಳ ಐಎಎಸ್ ಅಧಿಕಾರಿಗಳು, ಇಲ್ಲೇ ಮುಂದುವರಿಯಲು ಇಷ್ಟಪಡುತ್ತಾರೆ. ಅಲ್ಲಿ ಹೋಗಿ ತಮ್ಮ ಹುಳುಕು ಹೊರಬಿದ್ದರೆ ಮರ್ಯಾದೆ ಹೋಗಿಬಿಡಬಹುದು ಎಂಬ ಹೆದರಿಕೆ ಬಹಳ ಅಧಿಕಾರಿಗಳಿಗೆ ಇದೆ ಎಂದು ಆಡಳಿತದಲ್ಲಿ ಕಾಣುತ್ತಿದೆ. ಹೇಗೆ ಮಂತ್ರಿಗಳು ಒಳ್ಳೆಯ ಖಾತೆಯನ್ನು ಬಯಸುತ್ತಾರೋ, ಹಾಗೇ ಅಧಿಕಾರಿಗಳಿಗೂ ಒಳ್ಳೇ ಖಾತೆ ಬೇಕು.

ಈಗ ಏನಾಗಿದೆ ಗೊತ್ತಾ? ಸೂಕ್ಷ್ಮವಾಗಿ ಅವಲೋಕಿಸಿ ನೋಡಿ. ಹೆಚ್ಚಿನ ಅಪರ ಮುಖ್ಯ ಕಾರ್ಯದರ್ಶಿಗಳಲ್ಲಿ ಎರಡು ಅಥವಾ ಮೂರು ಇಲಾಖೆಗಳಿವೆ. ಇವರೆಲ್ಲಾ ಆ ಇಲಾಖೆಗಳಿಗೆ ಹೇಗೆ ನ್ಯಾಯ ಒದಗಿಸಲು ಸಾಧ್ಯ? ಅದನ್ನೇ ಇನ್ನೂ ಕೆಲವು ಕೆಳಗಿನ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳಿಗೆ ನೀಡಿದ್ದರೆ ಏನಾಗುತ್ತಿತ್ತು? ಏನೂ ಆಗುತ್ತಿರಲಿಲ್ಲ. ಕೆಳಗಿನವರಿಗೆ ಒಳ್ಳೆ ಇಲಾಖೆ ಕೊಟ್ಟರೆ ಮೇಲಿನವರ ಹಿಡಿತ ಹೋಗುವ ಭಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ. ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು. ಕೆಲವರು ಪ್ರಾಮಾಣಿಕರು ಮತ್ತು ಸತ್ಯಸಂಧರು, ಆದರೆ, ಇವರದ್ದು ಕೆಲಸದಲ್ಲಿ ಶೂನ್ಯ ಸಂಪಾದನೆ. ಇವರಿಂದ ಯಾವ ಸರ್ಕಾರಕ್ಕೂ ಶೋಭೆ ತರುವ ಕೆಲಸ ಆಗದು. ಇನ್ನು ಕೆಲವರು ಭೃಷ್ಠರು, ಆದರೆ ಕೆಲಸ ಮಾಡಿ ತೋರುವ ಶೂರತನ ಇರುವವರು. ಯಾವ ಕೆಲಸ ಕೊಟ್ಟರೂ ಇವರು ಮಾಡುತ್ತಾರೆ. ಹಾಗೇ, ಜೇನುತುಪ್ಪದ ಭರಣಿ ಕೈಯಲ್ಲಿಟ್ಟುಕೊಂಡು ಬೆರಳದ್ದುವ ಚಟ ಇವರದ್ದು. ಹಾಗೆ ನೋಡಿದರೆ ಎಲ್ಲಾ ಪಕ್ಷಗಳು ಇಂತಹ ಅಧಿಕಾರಿಗಳನ್ನೇ ಬಯಸುತ್ತಾರೆ.  ಮೂರನೇ ವರ್ಗ ಎಂದರೆ, ಭೃಷ್ಠರು ಮತ್ತು ಕೆಲಸಕ್ಕೂ ಬಾರದವರು. ನಾಲ್ಕನೆಯವರು ಪ್ರಾಮಾಣಿಕರು ಮತ್ತು ಕೆಲಸ ಮಾಡಿ ತೋರಿಸುವ ಛಾತಿ ಇರುವವರು. ಈ ನಾಲ್ಕು ವರ್ಗದಲ್ಲಿ ಕೊನೆಯ ವರ್ಗದ ಜನರನ್ನು ಕೆಲಸಕ್ಕೆ ಬಾರದ ಇಲಾಖೆಯಲ್ಲಿ ಇಟ್ಟು ಕೊಳೆಸುವ ಸಂಪ್ರದಾಯ ನಮ್ಮ ಕರ್ನಾಟಕದಲ್ಲಿದೆ.

ಕೊವಿಡ್ ಸಮಯದಲ್ಲಿ ಈ ಚರ್ಚೆ ಏಕೆ?
ಕಂಡಕಂಡಂತೆ ಬಿಜೆಪಿ ಸರಕಾರವನ್ನು ಬಯ್ಯುವ ವಿರೋಧ ಪಕ್ಷಗಳಿಗೆ ನೆನಪಿಲ್ಲದಿರಬಹುದು, ಅದು ಹೊಸದೇನಲ್ಲ ಬಿಡಿ. ಯಾರು ವಿರೋಧ ಪಕ್ಷದಲ್ಲಿದ್ದರೂ ಅವರು ಹಾಗೇನೇ. ಕಳೆದ ವರ್ಷ ಬಂದ ಕೊವಿಡ್​ ಮೊದಲ ಅಲೆಯಲ್ಲಿ ಕರ್ನಾಟಕ ಮಾದರಿ (Karnataka model) ಎಂಬುದು ಪ್ರಖ್ಯಾತವಾಗಿತ್ತು. ಕೇಂದ್ರ ಸರಕಾರದ ಆರೋಗ್ಯ ಇಲಾಖೆ ತನ್ನ ಒಂದು ಮಾಧ್ಯಮ ಗೋಷ್ಠಿಯಲ್ಲಿ ಕರ್ನಾಟಕದ ಮಾದರಿ ಬಗ್ಗೆ ಪ್ರಾತ್ಯಕ್ಷಿಕೆ ಕೂಡ ನೀಡಿತ್ತು. ಮೊಟ್ಟ ಮೊದಲ ಬಾರಿಗೆ ಆ್ಯಪ್ ಅಭಿವೃದ್ಧಿಪಡಿಸಿ ಸೋಂಕಿತರನ್ನು ತಲುಪುವುದು, ಅವರ ಸುತ್ತ ಮುತ್ತ ಇರುವ ಕನಿಷ್ಠ ಹತ್ತು ಜನರನ್ನು ಹೋಂ ಐಸೋಲೇಶನ್ ಮಾಡಿಸುವುದು, ಹೀಗೆ ಒಂದು ಹಂತದ ಯಶಸ್ಸು ಸಿಕ್ಕಿತ್ತು. ಈಗ ಸರ್ವೊಚ್ಛ ನ್ಯಾಯಾಲಯ ಮಹಾರಾಷ್ಟ್ರ ಮಾದರಿ ಎಂದು ಹೇಳುವಂತೆ ಕರ್ನಾಟಕ ಮಾದರಿ ಎನ್ನುವುದು ಕಳೆದ ವರ್ಷ ಬಹುಚರ್ಚಿತ ವಿಷಯವಾಗಿತ್ತು. ಆದರೂ ಕೊನೆಗೆ ಅಲ್ಲಿಯೂ ಸರಿಯಾದ ನಿರ್ವಹಣೆ ನಡೆಯದೇ ಇಡೀ ಕೊವಿಡ್ ನಿರ್ವಹಣೆ ಒಂದು ಬಾರಿ ಕೈ ತಪ್ಪಿ ಹೋಗಿತ್ತು. ಆಗ ಕೆಲಸ ಮಾಡಿ ಹಲವಾರು ಅಧಿಕಾರಿಗಳಲ್ಲಿ ಮುನೀಶ್ ಮೌದ್ಗಿಲ್ ಹೊಸ ರೀತಿಯ ಪರಿಹಾರ (out of the box solution) ಹುಡುಕುವಲ್ಲಿ ಯಶಸ್ಸು ಕಂಡಿದ್ದರು.

ಪ್ರಾತಿನಿಧಿಕ ಚಿತ್ರ

ಈ ಬಾರಿ ಎರಡನೇ ಅಲೆ, ಅತೀ ತೀವ್ರ ಮತ್ತು ಕ್ರೂರವಾಗಿದ್ದನ್ನು ಯಾರೂ ಅಲ್ಲಗಳೆಯಲಾರರು. ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗಿರುವುದಂತೂ ನಿಜ. ಉದಾಹರಣೆಗೆ ರಾಪಿಡ್ ಆ್ಯಂಟಿಜೆನ್ ಟೆಸ್ಟ್ ಮತ್ತು ಆರ್ಟಿಪಿಸಿಆರ್ ಟೆಸ್ಟ್ ಎರಡೂ ನೆಗೆಟಿವ್ ಬಂದರೂ, ಕೊರೊನಾ ಬಂದ ಉದಾಹರಣೆ ಸಾಕಷ್ಟು ಇದೆ. ಅಷ್ಟೇ ಅಲ್ಲ, ಇಂತಹ ಸೋಂಕಿತರು ಕೊನೇ ಸಮಯದಲ್ಲಿ ಆಸ್ಪತ್ರೆಗೆ ಸೇರಿ ಜೀವ ಬಿಟ್ಟ ಉದಾಹರಣೆ ಬಹಳ ಇವೆ. ಇಂಥ ಸಂದರ್ಭದಲ್ಲಿ ಯಾವ ಸರಕಾರ ಅಥವಾ ಅಧಿಕಾರಿಯೂ ಏನೂ ಮಾಡಲಾರ ಎಂಬ ಮಾತನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ ಅದರ ನಡುವೆಯೂ ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಅನೇಕರು ಇಂಥ ಸಂದರ್ಭದಲ್ಲಿ ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳದೇ ಆರಾಮಾಗಿ ಇರುವುದನ್ನು ಕಾಣುತ್ತಿದ್ದೇವೆ. ಕಳೆದ ವರ್ಷ ಮಾಡಿದಂತೆ, ಸೋಂಕಿನ ಗುರುತು ಸಿಕ್ಕವರನ್ನು ಬೇಗನೇ ತಲುಪಿ ಅತ್ಯಂತ ತೀವ್ರವಾಗಿ ಔಷಧಿ ಮತ್ತು ಇನ್ನಿತರೆ ಚಿಕಿತ್ಸೆ ನೀಡುವ ಕಾರ್ಯಯೋಜನೆ ಈ ವರ್ಷ ಜಾರಿಗೆ ಬರಲೇ ಇಲ್ಲ. ಅಲ್ಲಿ ಒಂದು ವಾದ ಮಂಡಿಸಬಹುದು. ಈ ವರ್ಷ 40-50000 ಕೇಸುಗಳು ಬಂದವು, ಇದನ್ನು ನಿರ್ವಹಿಸುವುದು ಹೇಗೆ? ಕಳೆದ ವರ್ಷಕ್ಕಿಂತ ಜಾಸ್ತಿ ಜನ ಸಹಾಯಕರನ್ನು ತೆಗೆದುಕೊಂಡು ಮಾಡಬಹುದಿತ್ತು.

ಹೀಗೆ ಮಾಡದಿದ್ದುದು ಒಂದು ಕಪ್ಪು ಚುಕ್ಕೆ. ಕೆಲವರು ತಮ್ಮ ಇಲಾಖಾ ಜವಾಬ್ದಾರಿ ಬಿಟ್ಟು ಕೊವಿಡ್ ಕೆಲಸಕ್ಕೆ ತೊಡಗಿಕೊಂಡವರು ಇದ್ದಾರೆ. ರಾಜಕಾರಣಿಗಳು ಉಪಚುನಾವಣೆಯಲ್ಲಿ ಓಡಾಡುತ್ತಿದ್ದಾಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ? ಅಥವಾ ಈಗ ಎರಡು ವಾರದ ಹಿಂದೆ ಮಾಡಿದ ಕೆಲಸವನ್ನು ಮೊದಲೇ ಮಾಡಿದ್ದರೆ? ಒಂದೊಂದು ಕೆಲಸವನ್ನು ಅಧಿಕಾರಿಗಳ ಗುಂಪಿಗೆ ಹಂಚಿಕೆ ಮಾಡಿ ಅವರೆಲ್ಲ ಮೊದಲೇ ಕಣಕ್ಕೆ ಇಳಿಯುವಂತೆ ಮಾಡಿದ್ದರೆ ಕರ್ನಾಟಕದ ಸ್ಥಿತಿ ಖಂಡಿತ ಹಿಡಿತ ತಪ್ಪಿಹೋಗುತ್ತಿರಲಿಲ್ಲವೇನೋ? ಸುಲಭಕ್ಕೆ ಸಿಗುವ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತ, ತಮ್ಮ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವ ಬಹಳ ಐಎಎಸ್ ಅಧಿಕಾರಿಗಳು ಪ್ರಾಮಾಣಿಕರಿಗೆ ಕಳಂಕ ತಂದಿಟ್ಟಿದ್ದು ನಿಜ. ಅಷ್ಟೇ ಅಲ್ಲ, ಕರ್ನಾಟಕ ಕೇಡರ್​ಗೆ ಕೆಟ್ಟ ಹೆಸರು ತಂದು ರಾಜ್ಯಕ್ಕೆ ಮತ್ತೊಮ್ಮೆ ಕಂಟಕ ತಂದಿಡುವಲ್ಲಿ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದು ಯಾವ ಚುನಾವಣೆಯ ವಿಷಯವೂ ಆಗುವುದಿಲ್ಲ ಎಂಬುದು ವಿಪರ್ಯಾಸವೇ ಸರಿ.

ಇದನ್ನೂ ಓದಿ: 

ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ನಾಯಕತ್ವ ಬದಲಾವಣೆ ಚರ್ಚೆ ಹುಟ್ಟಿದ್ದೆಲ್ಲಿ? ರಾಜ್ಯ ಬಿಜೆಪಿ ಮುಂದಿನ ದಾರಿ ಯಾವುದು?

ಕೋವಿಡ್-19 ಕಾರ್ಯಪಡೆ ಪುನಾರಚನೆ: ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವ, ಆರೋಗ್ಯ ಸಚಿವ ಡಾ ಸುಧಾಕರ್​ಗೆ ಹಿನ್ನಡೆ

(Analysis of shortage of IAS officers in Karnataka and how IAS lobby failed the state in fighting against Covid 19 pandemic)

Published On - 8:36 pm, Wed, 12 May 21