ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ನಾಯಕತ್ವ ಬದಲಾವಣೆ ಚರ್ಚೆ ಹುಟ್ಟಿದ್ದೆಲ್ಲಿ? ರಾಜ್ಯ ಬಿಜೆಪಿ ಮುಂದಿನ ದಾರಿ ಯಾವುದು?

ಕೊವಿಡ್​ ಸುನಾಮಿಯಿಂದ ತತ್ತರಿಸುತ್ತಿರುವ ಕರ್ನಾಟಕದಲ್ಲಿ ಈಗ ನಾಯಕತ್ವ ಬದಲಾವಣೆಯ ಸೊಲ್ಲೆತ್ತಿರುವವರು ಯಾರು? ಬಿಜೆಪಿಯ ಈ ಒಳ ಜಗಳವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದರ ವಿವರವಾದ ವಿಶ್ಲೇಷಣೆ ಇಲ್ಲಿದೆ.

ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ನಾಯಕತ್ವ ಬದಲಾವಣೆ ಚರ್ಚೆ ಹುಟ್ಟಿದ್ದೆಲ್ಲಿ? ರಾಜ್ಯ ಬಿಜೆಪಿ ಮುಂದಿನ ದಾರಿ ಯಾವುದು?
ಬಿ ಎಸ್​ ಯಡಿಯೂರಪ್ಪ - ಬಿ ಎಲ್​ ಸಂತೋಷ್
Follow us
ಡಾ. ಭಾಸ್ಕರ ಹೆಗಡೆ
|

Updated on:May 14, 2021 | 6:45 PM

ಕಳೆದ ವಾರ ಎಚ್ಎಎಲ್ ವಿಮಾನ ನಿಲ್ದಾಣದಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದೆಹಲಿಗೆ ಹೊರಡಲು ವಿಶೇಷ ವಿಮಾನ ಹತ್ತುತ್ತಿದ್ದಂತೆ ಬೆಂಗಳೂರಿನಲ್ಲಿ ರಾಜಕೀಯ ಸಂಚಲನ ಮೂಡಿತು. ಉಪಚುನಾವಣೆ ಮುಗಿಯಿತು, ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ನಾಯಕತ್ವ ಬದಲಾವಣೆಗೆ ಮುಹೂರ್ತ ಫಿಕ್ಸ್​ ಆಗಿಯೇ ಬಿಟ್ಟಿತು. ಒಂದು ವಾಹಿನಿಯಂತೂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮುಂದಿನ ಮುಖ್ಯಮಂತ್ರಿ ಮತ್ತು ವಿಜಯೇಂದ್ರ ಉಪ ಮುಖ್ಯಮಂತ್ರಿ ಆಗುವುದು ಖಂಡಿತ ಎಂಬ ಸುದ್ದಿಯನ್ನು ಬಿತ್ತರಿಸಿತು.

ಆದರೆ ದೆಹಲಿಯಲ್ಲಿ ಆಗಿದ್ದೇ ಬೇರೆ. ಆಮ್ಲಜನಕ ಪೂರೈಕೆ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಕೇಂದ್ರಕ್ಕೆ ಹಿನ್ನಡೆಯಾದ ಕಾರಣದಿಂದಾಗಿ ಕೇಂದ್ರದ ನಾಯಕರು ಸ್ವಲ್ಪ ಸಿಟ್ಟಾಗಿದ್ದರು. ನ್ಯಾಯಾಲಯದಲ್ಲಿ ಯಾವ ನಿರ್ಣಯ ಬರುತ್ತೆ ಎನ್ನುವುದಕ್ಕಿಂತ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೂ, ಹೊಂದಾಣಿಕೆಯ ಕೊರತೆಯಿಂದ ಕೇಂದ್ರ ಸರಕಾರಕ್ಕೆ ಮುಜುಗರವುಂಟಾಗಿದ್ದು ಚರ್ಚೆಯ ವಿಷಯವಾಗಿತ್ತು. ಹಾಗೆಯೇ, ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಬಂದ ಪ್ರಯಾಸದ ಗೆಲುವಿನ ಬಗ್ಗೆ ಕೂಡ ಚರ್ಚೆ ನಡೆದಿತ್ತು. ಹೀಗೆ ಇಲ್ಲದ ಸುದ್ದಿಯನ್ನು ಯಾರು ಹುಟ್ಟು ಹಾಕುತ್ತಾರೆ? ಮತ್ತೂ ಪದೇ ಪದೇ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಯಾಕೆ ನಡೆಯುತ್ತದೆ ಎಂಬುದು ಬಿಡಿಸಲಾಗದ ಕಗ್ಗಂಟೇನಲ್ಲ. ಅದೂ ಕೂಡ ಇಡೀ ರಾಜ್ಯವೇ ಕೊವಿಡ್​ನಿಂದ ನಲುಗಿರುವಾಗ ಈ ರೀತಿಯ ಸುದ್ದಿ ಮಾಡಲು ಹೇಗೆ ಸಾಧ್ಯ? ಒಂದು ರಾಜಕೀಯ ಪಕ್ಷ ಇದನ್ನು ಚರ್ಚಿಸಲು ಹೇಗೆ ಸಾಧ್ಯ?

ನಾಯಕತ್ವದ ಬದಲಾವಣೆ ಸುದ್ದಿ ಎತ್ತುವವರು ಯಾರು? ಯಡಿಯೂರಪ್ಪನವರ ಕ್ಯಾಂಪ್​ನ ನಾಯಕರ ಪ್ರಕಾರ ಇದರ ಹಿಂದೆ ಇರುವವರು ಒಬ್ಬರೇ. ಅವರೇ ಎಲ್ಲ ಮಾಡಿಸೋದು. ನಾಯಕತ್ವದ ಬದಲಾವಣೆಗಾಗಿ ಎಷ್ಟೆಲ್ಲ ಪ್ರಯತ್ನ ಮಾಡಿ, ಎಲ್ಲ ಪ್ರಯತ್ನದಲ್ಲಿಯೂ ವಿಫಲವಾಗಿ ಕೊನೆಗೆ ಯಡಿಯೂರಪ್ಪನವರಿಗೆ ಹಿನ್ನಡೆ ಆಗುವಂಥದ್ದನ್ನು ಏನಾದರೂ ಮಾಡಲೇಬೇಕು ಎಂದು ಮಾಡಿರುವ ತಂತ್ರಗಾರಿಕೆ ಭಾಗವಾಗಿ ಮಾಡಿದ ಕಿತಾಪತಿಯೇ ಈ ನಾಯಕತ್ವ ಬದಲಾವಣೆ ಸುದ್ದಿ. ಇದನ್ನು ಬಿಟ್ಟರೆ ಇದರ ಹಿಂದೆ ಬೇರೇನೂ ಉದ್ದೇಶ ಇದ್ದಂತೆ ಕಾಣುತ್ತಿಲ್ಲ.

ಕಾಕತಾಳೀಯವೋ ಎಂಬಂತೆ ಸೋಮವಾರ, ದೆಹಲಿಯಿಂದ ಪ್ರಕಟವಾಗುವ ದಿ ಪ್ರಿಂಟ್ ಆನ್ಲೈನ್ ಪತ್ರಿಕೆಯಲ್ಲಿ ಬಿಜೆಪಿಯ ಸ್ಥಿತಿಗತಿಗಳ ಬಗ್ಗೆ ಬರೆದಿರುವ ಡಿ.ಕೆ.ಸಿಂಗ್, ಕೇಂದ್ರದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್​ಗೆ ಯಡಿಯೂರಪ್ಪನವರನ್ನು ಕಂಡರೆ ಆಗುವುದಿಲ್ಲ ಎಂಬರ್ಥದಲ್ಲಿ ಬರೆದಿದ್ದಾರೆ. ಇದನ್ನು ಓದದ ಸ್ಥಳೀಯ ಬಿಜೆಪಿ ನಾಯಕರು (ಈ ನಾಯಕರಿಗೆ ಇಂಗ್ಲಿಷ್ ಅಷ್ಟೇನೂ ರುಚಿಸದು) ಕೂಡ ಸಂತೋಷ್​ ಅವರನ್ನೇ ಟೀಕಿಸುತ್ತಿರುವುದನ್ನು ನೋಡಿದಾಗ ದೆಹಲಿ ಮತ್ತು ಬೆಂಗಳೂರಿನ ಬಿಜೆಪಿ ವಲಯದಲ್ಲಿ ಸಾಮ್ಯತೆ ಇರುವುದು ಕಂಡುಬರುತ್ತಿದೆ . ಈಗ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ರಾಜ್ಯ ರಾಜಕೀಯದ ಎಲ್ಲ ಮಜಲು ಅರ್ಥವಾಗಿರುವುದರಿಂದ, ಸಂತೋಷ್ ಆಟ ಅಷ್ಟು ಬೇಗ ನಡೆಯುವುದಿಲ್ಲ ಎಂಬುದು ಯಡಿಯೂರಪ್ಪನವರ ಕ್ಯಾಂಪಿನ ವಾದ.

CN ASHWATH NARAYAN - BL SANTHOSH

ಡಾ. ಸಿ.ಎನ್. ಆಶ್ವತ್ಥ ನಾರಾಯಣ – ಬಿ ಎಲ್​ ಸಂತೋಷ್

ಸಂತೋಷ್ ಆಟ ಯಾಕೆ? ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ಆಮ್ಲಜನಕ ದುರಂತದ ನಂತರ ತಮಿಳುನಾಡು ಉಸ್ತುವಾರಿ, ಕರ್ನಾಟಕದ ಸಿ.ಟಿ. ರವಿ ಹೇಳಿದ್ದೇನು? ಸೂಕ್ಷ್ಮವಾಗಿ ಗಮನಿಸಿದರೆ ಸರಕಾರಕ್ಕೆ ಮುಜುಗರ ತರುವ ಹೇಳಿಕೆಯನ್ನು ಅವರು ನೀಡಿದ್ದರು. ಅಥವಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವೀ ಸೂರ್ಯ ಕೂಡ ಹಾಸಿಗೆ ಕಾಯ್ದಿರಿಸುವಲ್ಲಿ ನಡೆದ ಅವ್ಯವಹಾರ ಎತ್ತಿದ್ದೇಕೆ? ಇವೆಲ್ಲವೂ ಸರಕಾರಕ್ಕೆ ಮುಜುಗರ ಉಂಟುಮಾಡಲು ಮಾಡಿದ ಪ್ರಯತ್ನವೇ ಆಗಿತ್ತು. ಯಡಿಯೂರಪ್ಪ ಸರಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೇಂದ್ರದ ನಾಯಕರಿಗೆ ತೋರಿಸಿಕೊಡುವ ಪ್ರಯತ್ನದ ಭಾಗವೇ ಇವೆಲ್ಲ. ಹಾಗಾಗಿ ರವಿ ಮತ್ತು ಸೂರ್ಯ ಈ ರೀತಿ ಮಾಡಿದ್ದಾರೆ ಎಂದು ಯಡಿಯೂರಪ್ಪ ಕ್ಯಾಂಪ್​ನವರ ವಾದ. ಒಂದಂತೂ ನಿಜ, ಸಿಎಂ ಯಡಿಯೂರಪ್ಪ ಒಳ್ಳೇ ಆಡಳಿತ ಕೊಡುತ್ತಿದ್ದಾರೋ ಬಿಟ್ಟಿದ್ದಾರೋ ಅದು ಬೇರೆ ವಿಷಯ. ಕರ್ನಾಟಕದ ವಿಚಾರದಲ್ಲಿ ತಮ್ಮ ತಟಸ್ಥ ನಿಲುವನ್ನು ಬಿಟ್ಟು ಅತ್ಯಂತ ಕ್ರಿಯಾತ್ಮಕವಾಗಿ, ಸಂತೋಷ್ ಅವರು ಯಡಿಯೂರಪ್ಪನವರ ಹಾದಿಯಲ್ಲಿ ಮುಳ್ಳು ತೂರುತ್ತಿದ್ದಾರೆ ಎಂಬುದು ಯಡಿಯೂರಪ್ಪನವರ ಕ್ಯಾಂಪಿನ ವಾದ. ಅದರಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಲಾಗದು. ಸಂತೋಷ್ ಅವರಿಗೆ ಪಕ್ಷ ನೀಡಿರುವ ಸ್ಥಾನ ಬಹಳ ದೊಡ್ಡದು. ಆ ಸ್ಥಾನಕ್ಕೆ ತುಂಬಾ ಮಹತ್ವ ಇರುವುದರಿಂದ ಆರ್​ಎಸ್​ಎಸ್​ ಕೂಡ ಅವರ ಯಾವ ರಾಜಕೀಯ ನಡೆಯನ್ನು ಸಂಶಯಿಸದೇ ಬೆಂಬಲಿಸುವುದು, ಅವರಿಗೆ ವರವಾಗಿದೆ. ಇದನ್ನು ಅವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಬಿಎಸ್​ವೈ ಕ್ಯಾಂಪಿನ ವಾದ.

bs yediyurappa bl santhosh 2

ಬಿ ಎಸ್​ ಯಡಿಯೂರಪ್ಪ – ಬಿ ಎಲ್​ ಸಂತೋಷ್

ಅಸಲಿನಲ್ಲಿ ಸಂತೋಷ್​ ಅವರಿಗೆ ಮಹತ್ವಾಕಾಂಕ್ಷೆ ಇರುವುದನ್ನು ಬಿಜೆಪಿಯಲ್ಲಿನ ತಟಸ್ಥ ನಾಯಕರು ಕೂಡ ಒಪ್ಪಿಕೊಳ್ಳುತ್ತಾರೆ. ಸಂತೋಷ್ ಅವರ ಹಲವಾರು ನಡೆಯಿಂದ ಬಿಜೆಪಿ ರಾಜ್ಯ ಘಟಕಕ್ಕೆ ಹಿನ್ನಡೆ ಆಗಿದೆ. ಈಗ ನಮ್ಮಲ್ಲಿ ಕಾರ್ಯಕರ್ತರಿದ್ದಾರೆ. ಆದರೆ, ಗ್ರಾಮೀಣ/ನಗರ ಭಾಗದಲ್ಲಿ ರಾಜಕೀಯ ನಾಯಕರಿಲ್ಲದೇ ಬಿಜೆಪಿ ಸೊರಗುತ್ತಿದೆ. ಇತ್ತೀಚೆಗೆ ನಡೆದ ಪಟ್ಟಣ/ನಗರ ಪ್ರದೇಶಗಳಲ್ಲಿ ನಡೆದ ಸ್ಥಳೀಯ ನಗರಸಭೆಗಳ ಉಪ ಚುನಾವಣೆಯಲ್ಲಿ ಇದು ಪ್ರತಿಫಲಿತವಾಗಿದೆ. ಆಡಳಿತ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ ಎಂಬುದು ಇವರ ವಾದ. ಇದಕ್ಕೆ ಕಾರಣ, ಸಂತೋಷ್​ ಅವರು ಪಕ್ಷವನ್ನು ನಡೆಸಲು ಹಾಕಿದ ದಾರಿ.

ಹಾಗಾದರೆ, ಯಡಿಯೂರಪ್ಪ ಸರಿಯೇ? ವಯಸ್ಸಿಗೆ ಸಂಬಂಧಿಸಿ ಕೆಲವು ಸಮಸ್ಯೆಗಳಿಂದ ಯಡಿಯೂರಪ್ಪ ಅವರಿಗೆ ಕೆಲಸ ಮಾಡಬೇಕೆಂಬ ಉದ್ದೇಶವಿದ್ದರೂ, ಚುರುಕಾಗಿ ಕೆಲಸ ಮಾಡಲಾಗುತ್ತಿಲ್ಲ. ಪ್ರತಿ ಬಾರಿಯೂ ತನಗೆ ಬರೀ ವಿಘ್ನಗಳೇ ಬರುತ್ತವೆ. ತಾನೂ ಏನು ಮಾಡಿದರೂ ಯಾವ ಕೇಂದ್ರ ನಾಯಕರು ತನಗೆ ಶಹಬ್ಬಾಶ್​ಗಿರಿ ಕೊಡುವುದಿಲ್ಲ. ಹಾಗಾಗಿ ತಾನು ಮಾಡಿದರೆಷ್ಟು ಬಿಟ್ಟರೆಷ್ಟು ಎಂಬ ಮನೋಭಾವಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಬಂದ ಹಾಗಿದೆ. ತಾನು ಕೆಲಸ ಮಾಡಿ ಯಶಸ್ಸು ಬಂದಾಗ ಓಡಿ ಬಂದು ಪಕ್ಷವೇ ಎಲ್ಲ ಮಾಡಿತು ಎಂದು ತೋರಿಸಿಕೊಳ್ಳುವ ಪಕ್ಷದ ಕೆಲ ನಾಯಕರ ಹಪಾಹಪಿತನದ ಬಗ್ಗೆ ಯಡಿಯೂರಪ್ಪನವರಿಗೆ ಸಿಟ್ಟಿರುವುದಂತು ನಿಜ.

ಹಾಗಾಗಿ, ಕೆಲವೊಮ್ಮೆ ಅವರು ಅಂದುಕೊಳ್ಳುವುದೇನೆಂದರೆ ತಾನು ಏನು ಮಾಡಿದರೂ ಪ್ರಯೋಜನ ಕಾಣದು. ಹಾಗಾಗಿ  ಪಕ್ಷದ ನಾಯಕರೇ ಎಲ್ಲ ಕೆಲಸ ಮಾಡಿ ತೋರಿಸಲಿ, ನಾನೇಕೆ ಕೆಲಸ ಮಾಡಬೇಕು ಎಂಬ ಧೋರಣೆಗೆ ಅವರಿಗೆ ಬಂದಂತಿದೆ. ಇದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಸುದ್ದಿಯಲ್ಲ. ಅವರ ದುರಾದೃಷ್ಟಕ್ಕೆ, ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಕೆಲವರು ಮಾತ್ರ ಕೆಲಸದಲ್ಲಿ ತಾದಾತ್ಮ್ಯತೆ ತೋರಿಸುತ್ತಿದ್ದು ಇದು ಕರ್ನಾಟಕಕ್ಕೆ ಒಂದು ಶಾಪವಾಗಿ ಮತ್ತು ಯಡಿಯೂರಪ್ಪನವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು: ಓರ್ವ ನಿವೃತ್ತ ಮುಖ್ಯ ಕಾರ್ಯದರ್ಶಿಯೋರ್ವರು ಯಡಿಯೂರಪ್ಪನವರ ಬಗ್ಗೆ ಹೇಳಿದ್ದು ಸರಿ ಇದೆ. ಯಡಿಯೂರಪ್ಪ ಬೇರೆ ಎಲ್ಲ ರಾಜಕಾರಿಣಿಗಳಿಗಿಂತ ಭಿನ್ನ. ಅವರಿಗೆ ಸಂಕಷ್ಟವನ್ನು ತಮ್ಮ ಮೇಲೆ ಎಳೆದುಕೊಳ್ಳುವುದೆಂದರೆ ಇಷ್ಟ ಎಂದು ಕಾಣುತ್ತದೆ, ಎಂದು ಅವರು ಹೇಳುತ್ತಾರೆ. ಅವರಿಗೆ ರಾಜಕೀಯ ಮತ್ತು ರಾಜಕೀಯ ಹೋರಾಟ ತುಂಬಾ ಇಷ್ಟ. ಆಡಳಿತ ಅಷ್ಟೇನು ಇಷ್ಟವಿಲ್ಲದ ವಿಷಯ. ಹಾಗಾಗಿಯೆ ಅವರು ಆಡಳಿತಕ್ಕೆ ಸಂಬಂಧಿಸಿದ ಯಾವ ಸಭೆಯಲ್ಲಿಯೂ ಖುಷಿಯಿಂದ ಪಾಲ್ಗೊಳ್ಳಲಾರರು. ಇದೇ ಕಾರಣ ಇರಬಹುದು, ಅವರ ಕಾಲದಲ್ಲಿ ಯಾವ ಮುಖ್ಯ ಆಡಳಿತಾತ್ಮಕ ಬದಲಾವಣೆ ಆದಂತೆ ಕಾಣುತ್ತಿಲ್ಲ.

ಇದರ ಜೊತೆಗೆ, ಅವರು ಮುಲಾಜಿಲ್ಲದೇ ತಮ್ಮ ಸಮುದಾಯದ ಬಗ್ಗೆ ಮಮಕಾರವನ್ನು ತೋರಿಸುವುದು ಆಡಳಿತಾತ್ಮಕವಾಗಿ ಸೂಕ್ತವಲ್ಲ ಎಂಬುದು ಅವರ ವಿರೋಧಿಗಳ ವಾದ. ಹಾಗಾಗಿಯೇ, ಅವರ ಸಂಪುಟದಲ್ಲಿ, ಎಲ್ಲ ವರ್ಗದ ಜನ ಇದ್ದರೂ ಅವರ ಸರಕಾರವನ್ನು ಲಿಂಗಾಯತ ಸರಕಾರ ಎಂದು ಗೇಲಿ ಮಾಡುವುದು. ಈಗ್ಗೆ ಎರಡು ವರ್ಷಗಳಿಂದ ಅವರು ತಮ್ಮ ಮಗ ವಿಜಯೇಂದ್ರ ಅವರ ಮೇಲೆ ಜಾಸ್ತಿ ಅವಲಂಬಿಸಿದ್ದನ್ನು ಮತ್ತು ಆಡಳಿತದ ವಿಚಾರದಲ್ಲಿ ಮಗನ ಅಭಿಪ್ರಾಯಕ್ಕೆ ಮನ್ನಣೆ ಕೊಡುವುದನ್ನು ಮತ್ತು ಕುಟುಂಬ ರಾಜಕಾರಣ ಮಾಡುವುದು ಎಲ್ಲರಿಗೂ ಗೊತ್ತಿದೆ. ಇದು ಯಡಿಯೂರಪ್ಪನವರ ವಿರೋಧಿಗಳಿಗೆ ಅಸ್ತ್ರ ಸಿಕ್ಕಂತಾಗಿದೆ.

ಯಡಿಯೂರಪ್ಪ ಮುಂದುವರೆಯುತ್ತಾರೆಯೇ? ತಟಸ್ಥ ನಾಯಕರೂ ಕೂಡ ಹೇಳುವುದೇನೆಂದರೆ ಮುಂದಿನ ಚುನಾವಣೆ ಇನ್ನು ಎರಡು ವರ್ಷ ಮುಂದಿದೆ. ಆಗ ಯಾವ ರೀತಿಯ ರಾಜಕೀಯ ಸ್ಥಿತಿ ಇರುತ್ತೋ ಗೊತ್ತಿಲ್ಲ. ಕರ್ನಾಟಕ ಬಿಜೆಪಿ ಪ್ರಾಯಶಃ ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುವ ಸಂಭವ ಕಡಿಮೆ. ಅಂದರೆ, ಮಧ್ಯ ಯಾವುದೋ ಸಂದರ್ಭದಲ್ಲಿ ಅವರನ್ನು ಇಳಿಸಿ, ಪಕ್ಷ ನೀಡುವ ಕೆಲಸಕ್ಕೆ ಅವರನ್ನು ಕಳಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತದೆ.

ಯಡಿಯೂರಪ್ಪ ಅವರನ್ನು ಟೀಕಿಸಿ ಹಳಿದು, ಅವರಿಲ್ಲದಿದ್ದರೆ ಪಕ್ಷ ಮುಂದುವರಿಯುತ್ತದೆ ಎಂದು 2010 ರಿಂದ ಹೇಳುತ್ತ ಬಂದ ಪಕ್ಷ, ಅವರನ್ನು ಬಿಟ್ಟು ದೊಡ್ಡ ನಾಯಕರನ್ನು ಬೆಳೆಸುವ ಎಲ್ಲ ರೀತಿಯ ಪ್ರಯೋಗ ಮಾಡಿತು. ಅವು ಯಾವುದೂ ಕೈಗೂಡಲಿಲ್ಲ. ಯಡಿಯೂರಪ್ಪ ಬಿಜೆಪಿ ಬಿಟ್ಟು ತನ್ನದೇ ದಾರಿ ಕಂಡುಕೊಳ್ಳುವ ಪ್ರಯತ್ನ ಕೂಡ ಸಫಲವಾಗಲಿಲ್ಲವಲ್ಲ. ಅಂದರೆ, ಪಕ್ಷಕ್ಕೆ ಯಡಿಯೂರಪ್ಪ ಬೇಕೇ ಬೇಕು. ಹಾಗೇ ಯಡಿಯೂರಪ್ಪನವರಿಗೂ ಸಹ. ಅದನ್ನು ಯಡಿಯೂರಪ್ಪ ಹಲವಾರು ಬಾರಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವ ಅವರ ಟೀಕಾಕಾರರ ವಾದದಲ್ಲಿ ಹುರುಳಿಲ್ಲ ಎಂದು ಹೇಳಲಾಗದು.

ಈಗಲೂ ಬಿಜೆಪಿ ನಂಬಿಕೊಂಡಿರುವುದೇನೆಂದರೆ, ಯಡಿಯೂರಪ್ಪ ಇಳಿದ ಮೇಲೂ ಲಿಂಗಾಯತ ಮತ ನಮ್ಮನ್ನು ಬಿಟ್ಟು ಹೋಗಲಾರದು. ಏಕೆಂದರೆ, ನಮ್ಮಲ್ಲಿ ಇರುವಷ್ಟು ಗಟ್ಟಿ ಲಿಂಗಾಯತ ನಾಯಕತ್ವ ಕಾಂಗ್ರೆಸ್​ನಲ್ಲಿ ಇಲ್ಲ. ಹಾಗಾಗಿ ನಮಗೆ ಲಿಂಗಾಯತ ಮತ ಬ್ಯಾಂಕಿನ ತೊಂದರೆ ಆಗದು ಎಂಬ ವಿಶ್ವಾಸ ಎಲ್ಲ ನಾಯಕರದ್ದು. ಆದರೆ, ಇತ್ತೀಚೆಗೆ ನಡೆದ ಉಪಚುನಾವಣೆಯ ಫಲಿತಾಂಶ ಬೇರಯದೇ ವಿಚಾರವನ್ನು ಬಿಂಬಿಸುತ್ತವೆ ಎಂಬುದು ಬಹಳ ಗಮನಾರ್ಹ ಅಂಶವಾಗಿದೆ. ಪ್ರಾಯಶಃ ಮುಂದಿನ ಎರಡು ವರ್ಷದಲ್ಲಿ ಈ ಸರಕಾರದ ಕಾರ್ಯವೈಖರಿ ನೋಡಿ ಲಿಂಗಾಯತರು ತಮ್ಮ ಮುಂದಿನ ದಾರಿಯ ಬಗ್ಗೆ ನಿರ್ಧರಿಸಬಹುದು. ಹಾಗೆಯೇ ಪಕ್ಷದ ಒಳಜಗಳ ಕೂಡ ಯಾವ ದಾರಿಯಲ್ಲಿ ಹೋಗುತ್ತದೆ ಎನ್ನುವುದರ ಮೇಲೆ ಪಕ್ಷದ ಭವಿಷ್ಯ ನಿಂತಿದೆ.

ಇದನ್ನೂ ಓದಿ: 

ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಬಾರದು: ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಮನವಿ

CM BSY ಮತ್ತು ಸರ್ಕಾರದ ವಿರುದ್ಧ BJP MLC ಹೆಚ್​.ವಿಶ್ವನಾಥ್ ಮತ್ತೆ ವಾಗ್ದಾಳಿ

(The analysis of infighting in Karnataka BJP in the middle of Covid crisis and if BS Yediyurappa will be replaced)

Published On - 6:27 pm, Tue, 11 May 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?