ರಾಷ್ಟ್ರೀಯ ಫೀಲ್ಡ್ ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ರಾಷ್ಟ್ರೀಯ ಫೀಲ್ಡ್ ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ರಾಮು, ಆನೇಕಲ್​
| Updated By: ವಿವೇಕ ಬಿರಾದಾರ

Updated on: Jan 07, 2025 | 2:21 PM

ಲಖನೌನಲ್ಲಿ ನಡೆದ 15ನೇ ರಾಷ್ಟ್ರೀಯ ಫೀಲ್ಡ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆನೆಕಲ್​ನ 12 ಮಂದಿ ಕ್ರೀಡಾಪಟುಗಳು 2 ಚಿನ್ನ, 7 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ರಿಷಿಕಾ ನಿವೇದನಾ ಮತ್ತು ತೇಜಿನಿ ರಾಜೇಶ್ ಚಿನ್ನದ ಪದಕ ವಿಜೇತರಾಗಿದ್ದಾರೆ.ಈ ಗೆಲುವು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದೆ.

15ನೇ ನ್ಯಾಷನಲ್ ಫೀಲ್ಡ್ ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ. ಫೀಲ್ಡ್ ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ ಲಖನೌನಲ್ಲಿ 2024ರ ಡಿಸೆಂಬರ್ 26 ರಿಂದ 29ವರೆಗೆ 15ನೇ ನ್ಯಾಷನಲ್ ಫೀಲ್ಡ್ ಆರ್ಚರಿ ಚಾಂಪಿಯನ್‌ ಶಿಪ್​ ಆಯೋಜಿಸಿತ್ತು. ಈ ಫೀಲ್ಡ್ ಆರ್ಚರಿ ಚಾಂಪಿಯನ್‌ ಶಿಪ್​​ನಲ್ಲಿ ಆನೇಕಲ್ ತಾಲೂಕಿನ 12 ಮಂದಿ ಕ್ರೀಡಾಪುಟುಗಳು ಭಾಗಿಯಾಗಿದ್ದರು.

ಈ ಕ್ರೀಡಾಪಟುಗಳು ಚಾಂಪಿಯನ್‌ ಶಿಪ್​​ನಲ್ಲಿ 2 ಚಿನ್ನದ ಪದಕ, 7 ಬೆಳ್ಳಿಯ ಪದಕ, 3 ಕಂಚಿನ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ತೇಜಿನಿ ರಾಜೇಶ್ ಮತ್ತು ರಿಷಿಕಾ ನಿವೇದನಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರೇ, ಸಾಶ್ರಿಕಾ ರಾಜೇಶ್, ಶಿಜಾ ಶೆರೀಫ್, ಸೋನಲ್ ಅಮಿತ್ ರಾಣೆ, ತನಿಷಿ ಸಿಂಗ್, ಅರೋಹಿ ಅಮರ್, ರಿಷಿಕಾ ನಿವೇದನಾ ಮತ್ತು ಹೇಮಂಶಿಲ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು, ನಶ್ವಾ ಜೈಸಾ, ಸೋಹನ್ ಗೌಡ ಮತ್ತು ಸಾನ್ವಿ ರೆಡ್ಡಿ ಬಿ ವಿ ಕಂಚಿನ ಪದಕ ವಿಜೇತರಾಗಿದ್ದಾರೆ.

ದೇಶದ 22 ರಾಜ್ಯಗಳಿಂದ ಸಾವಿರಕ್ಕೂ ಅಧಿಕ ಕೀಡಾಪಟುಗಳು ಈ ಚಾಂಪಿಯನ್​ ಶಿಪ್​ನಲ್ಲಿ ಭಾಗಿಯಾಗಿದ್ದರು. ಕರ್ನಾಟಕದಿಂದ 36 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು. ನಿರಂತರ ಶ್ರಮಕ್ಕೆ ಪದಕ ಗೆದ್ದಿರುವುದು ಖುಷಿ ತಂದಿದೆ ಎಂದು ರಿಷಿಕಾ ನಿವೇದನಾ ಸಂತಸ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ