AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಪ್ಟನ್ ಆದರೂ ರಜತ್​ಗೆ ತಪ್ಪಲಿಲ್ಲ ತೊಂದರೆ; ಫಿನಾಲೆ ಸಮೀಪದಲ್ಲಿ ಇಂಥ ಅವಸ್ಥೆ

ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್ ಅವರು ಬಿಗ್ ಬಾಸ್​ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ಇಮ್ಯುನಿಟಿ ಪಡೆದುಕೊಂಡಿದ್ದಾರೆ. ಆದ್ದರಿಂದ ಅವರು ನಿಶ್ಚಿಂತೆಯಾಗಿ ಇರಬೇಕಿತ್ತು. ಆದರೆ ಬೇರೆ ಸ್ಪರ್ಧಿಗಳ ವರ್ತನೆಯಿಂದಾಗಿ ರಜತ್ ಅವರಿಗೆ ತೊಂದರೆ ಆಗುತ್ತಿದೆ. ಟಾಸ್ಕ್​ನ ನಿಯಮಗಳನ್ನು ಯಾರೂ ಕೂಡ ಸರಿಯಾಗಿ ಪಾಲಿಸದೇ ಕಿರಿಕ್ ಮಾಡುತ್ತಿದ್ದಾರೆ.

ಕ್ಯಾಪ್ಟನ್ ಆದರೂ ರಜತ್​ಗೆ ತಪ್ಪಲಿಲ್ಲ ತೊಂದರೆ; ಫಿನಾಲೆ ಸಮೀಪದಲ್ಲಿ ಇಂಥ ಅವಸ್ಥೆ
Rajat
ಮದನ್​ ಕುಮಾರ್​
|

Updated on: Jan 07, 2025 | 10:57 PM

Share

ಕ್ಯಾಪ್ಟನ್ ಆಗಿರುವ ರಜತ್ ಅವರು ಈ ವಾರದ ಬಹುತೇಕ ಟಾಸ್ಕ್​ಗಳಿಗೆ ಉಸ್ತುವಾರಿ ಆಗಿದ್ದಾರೆ. ಸೋಲು-ಗೆಲುವಿನ ಚಿಂತೆ ಅವರಿಗೆ ಇಲ್ಲ. ಕ್ಯಾಪ್ಟನ್ ಆಗಿರುವುದರಿಂದ ನಾಮಿನೇಷನ್ ಬಗ್ಗೆ ಭಯ ಕೂಡ ಕಾಡುತ್ತಿಲ್ಲ. ಆದರೂ ಸಹ ಈ ವಾರ ಅವರಿಗೆ ತಲೆ ನೋವು ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು ಇನ್ನುಳಿದ ಸ್ಪರ್ಧಿಗಳ ಜಗಳ. ಈ ವಾರ ‘ಟಿಕೆಟ್​ ಟು ಫಿನಾಲೆ’ ಟಾಸ್ಕ್ ನೀಡಲಾಗಿದೆ. ಇದು ಎಲ್ಲರಿಗೂ ಬಹಳ ಮುಖ್ಯವಾಗಿದೆ. ಫಿನಾಲೆ ಟಿಕೆಟ್ ಪಡೆಯಬೇಕು ಎಂಬ ಭರದಲ್ಲಿ ಎಲ್ಲರೂ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದರಿಂದ ಕ್ಯಾಪ್ಟನ್ ರಜತ್​ಗೆ ತೊಂದರೆ ಉಂಟಾಗುತ್ತಿದೆ.

ಉಸ್ತುವಾರಿ ಆಗಿರುವ ರಜತ್ ಅವರು ಎಲ್ಲರ ತಪ್ಪುಗಳನ್ನು ನೋಡಿ ಹೇಳಬೇಕು. ಆದರೆ ಸ್ಪರ್ಧಿಗಳು ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಟಾಸ್ಕ್​ಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸಬಹುದು ಎಂಬುದರ ಕಡೆಗೆ ಗಮನ ನೀಡುವುದು ಬಿಟ್ಟು ಬರೀ ಜಗಳದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ‘ಇದು ಹಾಗಲ್ಲ, ಹೀಗೆ’ ಎಂದು ರಜತ್ ಹೇಳಲು ಬಂದಾಗ ಅವರ ಮಾತನ್ನು ಯಾರೂ ಕೇಳುತ್ತಿಲ್ಲ.

ಈ ಹಿಂದೆ ಚೈತ್ರಾ ಕುಂದಾಪುರ ಉಸ್ತುವಾರಿ ಮಾಡಿದ್ದಾಗ ರಜತ್ ಅವರು ಸಿಕ್ಕಾಪಟ್ಟೆ ಎಗರಾಡಿದ್ದರು. ಟಾಸ್ಕ್ ರದ್ದಾಗುವ ಮಟ್ಟಕ್ಕೆ ಅವರು ಅಗ್ರೆಷನ್ ತೋರಿಸಿದ್ದರು. ಈಗ ಸ್ವತಃ ರಜತ್ ಅವರಿಗೆ ಉಸ್ತುವಾರಿ ನಿಭಾಯಿಸುವುದು ಕಷ್ಟ ಆಗುತ್ತಿದೆ. ‘ರಜತ್ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಮಜಾ ಆಗುತ್ತಿದೆ’ ಎಂದು ತ್ರಿವಿಕ್ರಮ್ ಅವರು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್

ಉಸ್ತುವಾರಿ ಮಾಡುವವರು ಸ್ವಲ್ಪ ತಪ್ಪಾಗಿ ನಡೆದುಕೊಂಡರೂ ಇನ್ನುಳಿದವರ ಭವಿಷ್ಯ ಏರುಪೇರು ಆಗುತ್ತದೆ. ಹಾಗಾಗಿ ಉಸ್ತುವಾರಿ ಎಂಬುದು ಬಹಳ ಜವಾಬ್ದಾರಿಯುತ ಕೆಲಸ. ಈ ವೇಳೆ ಎಡವಟ್ಟು ಮಾಡಿದರೆ ಉಸ್ತುವಾರಿಯ ಮೇಲೆ ವೀಕ್ಷಕರು ಅಸಮಾಧಾನ ತೋರಿಸುವ ಸಾಧ್ಯತೆ ಜಾಸ್ತಿ. ಒಂದು ವೇಳೆ ರಜತ್ ಅವರ ಉಸ್ತುವಾರಿ ಸರಿ ಇಲ್ಲ ಎನಿಸಿದರೆ ಅವರಿಗೆ ವೀಕ್ಷಕರಿಂದ ನಿರೀಕ್ಷಿತ ಪ್ರಮಾಣದ ವೋಟ್​ಗಳು ಬಾರದೇ ಇರಬಹುದು. ಹಾಗಾಗಿ ರಜತ್ ಅವರ ಮುಖದಲ್ಲಿ ಟೆನ್ಷನ್ ಕಾಣಿಸಿದೆ. ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದರೂ ಕೂಡ ಅವರು ಉಸ್ತುವಾರಿ ಮಾಡುವಾಗ ಸುಸ್ತು ಹೊಡೆಯುತ್ತಿದ್ದಾರೆ. ಎಷ್ಟು ಕೂಗಾಡಿಕೊಂಡು ಹೇಳಿದರೂ ಕೂಡ ಅವರ ಮಾತನ್ನು ಇನ್ನುಳಿದ ಸ್ಪರ್ಧಿಗಳು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.