ಕಾಂಗ್ರೆಸ್ನಲ್ಲಿ ಜೋರಾದ ಡಿನ್ನರ್ ಪೊಲಿಟಿಕ್ಸ್: ನಾಳಿನ ಪರಮೇಶ್ವರ್ ಡಿನ್ನರ್ ಸಭೆಗೆ ಹೈಕಮಾಂಡ್ ಬ್ರೇಕ್
135 ಸೀಟ್ಗಳನ್ನು ಗೆದ್ದು ಅಧಿಕಾರಕ್ಕೇರಿರೋ ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಮತ್ತಷ್ಟು ತಾರಕಕ್ಕೇರಿದೆ. ಕಳೆದ ವಾರ ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರು ನಿವಾಸದಲ್ಲಿ ನಡೆದಿದ್ದ ಡಿನ್ನರ್ ಪಾರ್ಟಿಯ ಚರ್ಚೆ ಮತ್ತೊಂದು ಹಂತಕ್ಕೆ ತಲುಪಿದೆ. ವಿದೇಶದಿಂದ ದೆಹಲಿಗೆ ಬಂದಿಳಿದ ಡಿಸಿಎಂ ಡಿಕೆ ಶಿವಕುಮಾರ್, ಹೈಕಮಾಂಡ್ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಸಚಿವ ಪರಮೇಶ್ವರ್ ಕರೆದಿದ್ದ ಮತ್ತೊಂದು ಡಿನ್ನರ್ ಮೀಟಿಂಗ್ ರದ್ದಾಗಿದೆ.
ಬೆಂಗಳೂರು, (ಜನವರಿ 07): ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಅಸಮಾಧಾನ ಕೊತಕೊತ ಕುದಿಯುತ್ತಿದ್ದಾರೆ ಇತ್ತ ಆಡಳಿತ ಪಕ್ಷ ಕಾಂಗ್ರೆಸ್ ಮನೆಯಲ್ಲಿ ನಿಧಾನವಾಗಿ ಡಿನ್ನರ್ ಪೊಲಿಟಿಕ್ಸ್ ಜೋರಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಇತ್ತೀಚೆಗೆ ನಡೆದಿದ್ದ ಡಿನ್ನರ್ ಮೀಟಿಂಗ್ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದಕ್ಕೆ ಕಾರಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದೇಶದಲ್ಲಿದ್ದಾಗ ಖುದ್ದು ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಒಂದೆಡೆ ಸೇರಿದ್ದು ಹಾಗೂ ಎಲ್ಲರೂ ಸಿದ್ದರಾಮಯ್ಯ ಬಣದ ನಾಯಕರೇ ಡಿನ್ನರ್‌ನಲ್ಲಿ ಭಾಗಿಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ನಾಳೆ (ಜನವರಿ 08) ಗೃಹ ಸಚಿವ ಪರಮೇಶ್ವರ್ ಎಸ್ಸಿ ಎಸ್ಟಿ ಶಾಸಕರು ಸಚಿವರ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೆ, ಹೈಕಮಾಂಡ್ ಇದೀಗ ಪರಮೇಶ್ವರ್ ಡಿನ್ನರ್ ಸಭೆಗೆ ಬ್ರೇಕ್ ಹಾಕಿದೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಸಂಚಲನಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಸಿಎಂ ಸಿದ್ದರಾಮಯ್ಯ ಸೇರದಿಂತೆ ಇತರೆ ಸಚಿವರು ಡಿನ್ನರ್ ಸಭೆ ಮಾಡಿದ್ದು, ಡಿಕೆಶಿ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ವಿದೇಶದಿಂದ ವಾಪಸ್ ಬಂದ ಬಳಿಕ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಹೈಕಮಾಂಡ್, ಗೃಹ ಪರಮೇಶ್ವರ್ ಅವರ ಕರೆದಿದ್ದ ಡಿನ್ನರ್ ಸಭೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ನಾಳಿನ (ಜನವರಿ 08) ಪರಮೇಶ್ವರ್ ಅವರ ಮತ್ತೊಂದು ಡಿನ್ನರ್ ಸಭೆ ರದ್ದಾಗಿದೆ.
ಇದನ್ನೂ ಓದಿ: ನಾಟಿಕೋಳಿ, ಮುದ್ದೆ ಸವಿಯುತ್ತಲೇ ರಾಜಕೀಯ ತಂತ್ರಗಾರಿಕೆ: ಸಿಎಂ ಡಿನ್ನರ್ ಸಭೆಯ ಇನ್‌ಸೈಡ್ ಡಿಟೇಲ್ಸ್
ಸಚಿವ ಪರಮೇಶ್ವರ್ ನಾಳೆ(ಜನವರಿ 08) ಡಿನ್ನರ್ ಸಭೆ ಕರೆದಿದ್ದರು. ಆದ್ರೆ, ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಮೊದಲ ಸಭೆ ಪಕ್ಷದಲ್ಲಿ ಕೋಲಾಹಲ ಎಬ್ಬಿಸಿದ್ದರಿಂದ ಇದೀಗ ಪರಮೇಶ್ವರ್ ಅವರ ಸಭೆ ರದ್ದು ಮಾಡಿವಂತೆ ಹೈಕಮಾಂಡ್ ಸೂಚಿಸಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೂಚನೆ ಮೇರೆಗೆ ಡಿನ್ನರ್ ಮೀಟಿಂಗ್ ರದ್ದಗೊಳಿಸಿದ್ದಾರೆ. ಸಭೆ ರದ್ದಾಗಿರುವ ಬಗ್ಗೆ ಖುದ್ದು ಸಚಿವ ಡಾ.ಪರಮೇಶ್ವರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮುಂದಿನ ಸಭೆ ದಿನಾಂಕ ಶೀಘ್ರ ಹೇಳುವುದಾಗಿ ತಿಳಿಸಿದ್ದಾರೆ.
ವಿದ್ಯಮಾನಗಳ ಬಗ್ಗೆ ಡಿಕೆಶಿ ಅಸಮಾಧಾನ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋಗಿದ್ದ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಆಪ್ತ ಬಣ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಭೆ ಸೇರಿತ್ತು. ನ್ಯೂ ಇಯರ್ ಡಿನ್ನರ್ ನೆಪದಲ್ಲಿ ಎಲ್ರೂ ಒಂದಾಗಿದ್ದರು. ಡಿಕೆಶಿ ಅನುಪಸ್ಥಿತಿಯಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆಯೂ ಬಿಸಿಬಿಸಿ ಚರ್ಚೆ ಮಾಡಿದ್ದರು. ಇದೀಗ ದಲಿತ ನಾಯಕ ಗೃಹ ಸಚಿವ ಪರಮೇಶ್ವರ್, ನಾಳೆ ಸಂಜೆ ಡಿನ್ನರ್ ಮೀಟಿಂಗ್ ಕರೆದಿದ್ರು. ಆದ್ರೆ ಕೊನೆ ಕ್ಷಣದಲ್ಲಿ ರದ್ದಾಗಿದೆ.
ತಮ್ಮ ಅನುಪಸ್ಥಿತಿಯಲ್ಲಿ ಸಭೆ ಸೇರಿದ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರ ಹೊರ ಹಾಕಿದ್ದಾರೆ. ವಿದೇಶದಿಂದ ಬರ್ತಿದ್ದಂತೆ ಸೀದಾ ದೆಹಲಿ ಫ್ಲೈಟ್ ಹತ್ತಿರುವ ಡಿಕೆಶಿ ಹೈಕಮಾಂಡ್ಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿ ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ಆಗಿರೋ ಡಿಸಿಎಂ ಡಿಕೆಶಿ, ರಾಜ್ಯದಲ್ಲಿ ನಡೆದಿರೋ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದಾರಂತೆ, ಡಿನ್ನರ್ ಪಾಲಿಟಿಕ್ಸ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪು ಸೇರಿದಂತೆ ಚರ್ಚೆ ನಡೆಸಿದ್ದಾರೆ. ಇದಿಷ್ಟೇ ಅಲ್ಲ, ನಾನು ವಿದೇಶಕ್ಕೆ ಹೋಗಿದ್ದಾಗ ಡಿನ್ನರ್ ಹೆಸರಿನಲ್ಲಿ ಸೇರಿದ್ದು ಸರಿಯಲ್ಲ ಅಂತಾನೂ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಹೈಕಮಾಂಡ್ ನಾಯಕರಿಗೆ ರಿಪೋರ್ಟ್ ಕೂಡ ಕೊಟ್ಟಿದ್ದಾರೆ. ಖರ್ಗೆ ಭೇಟಿಗೂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಹೊಸ ವರ್ಷ ಆರಂಭದಲ್ಲೇ ಕಾಂಗ್ರೆಸ್ ಮನೆಯಲ್ಲಿ ಡಿನ್ನರ್ ಪೊಲಿಟಿಕ್ಸ್ ಜೋರಾಗಿದ್ದು ಡಿನ್ನರ್ ಮೀಟಿಂಗ್ ಬಗ್ಗೆ ಸಿಎಂ ಸಿದ್ದರಾಮಯ್ಯ ಆಗಲಿ ಅವರ ಆಪ್ತ ಬಣವಾಗಲಿ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ, ಅದೇನೇ ಇರಲಿ ಸಿಎಂ ಆಪ್ತ ಬಣದ ಡಿನ್ನರ್ ಮೀಟಿಂಗ್ ಒಳಗೊಳಗೆ ಡಿಕೆ ಬ್ರದರ್ಸ್ ನಿದ್ದೆ ಕೆಡುವಂತೆ ಮಾಡಿರುವುದಂತು ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Tue, 7 January 25