ನಾಟಿಕೋಳಿ, ಮುದ್ದೆ ಸವಿಯುತ್ತಲೇ ರಾಜಕೀಯ ತಂತ್ರಗಾರಿಕೆ: ಸಿಎಂ ಡಿನ್ನರ್‌ ಸಭೆಯ ಇನ್‌ಸೈಡ್‌ ಡಿಟೇಲ್ಸ್

ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ರೆ ಇತ್ತ ರಾಜ್ಯ ರಾಜಕೀಯದಲ್ಲಿ ಕೈ ನಾಯಕರ ಡಿನ್ನರ್ ಮೀಟಿಂಗ್ ಸಂಚಲನ ಸೃಷ್ಟಿಸಿದೆ. ನಿನ್ನೆ ರಾತ್ರಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆದಿದ್ದು, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಮಹದೇವಪ್ಪ, ರಾಜಣ್ಣ ಸೇರಿ ಹಲವು ಸಚಿವರು ಈ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದು, ನಾಟಿಕೋಳಿ ಸಾರು, ಮುದ್ದೆ ಸವಿಯುತ್ತಲೇ ರಾಜಕೀಯ ತಂತ್ರಗಾರಿಕೆ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ವಿದೇಶಿ ಪ್ರವಾಸದಲ್ಲಿರುವ ಈ ಸಂದರ್ಭದಲ್ಲಿ ಸಭೆ ನಡೆಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ನಾಟಿಕೋಳಿ, ಮುದ್ದೆ ಸವಿಯುತ್ತಲೇ ರಾಜಕೀಯ ತಂತ್ರಗಾರಿಕೆ: ಸಿಎಂ ಡಿನ್ನರ್‌ ಸಭೆಯ ಇನ್‌ಸೈಡ್‌ ಡಿಟೇಲ್ಸ್
ಡಿಕೆ ಶಿವಕುಮಾರ್, ಸಿದ್ದರಾಮಯ್ಯ
Follow us
ರಮೇಶ್ ಬಿ. ಜವಳಗೇರಾ
|

Updated on: Jan 03, 2025 | 5:20 PM

ಬೆಂಗಳೂರು, (ಜನವರಿ 03): ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣೀಟ್ಟಿದ ಡಿ ಕೆ ಶಿವಕುಮಾರ್‌ ಗೆ ಕೊನೆ ಗಳಿಗೆಯಲ್ಲಿ ಸಿಎಂ ಸ್ಥಾನ ಕೈ ತಪ್ಪಿತ್ತು. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ 2024 ರ ಲೋಕಸಭಾ ಚುನಾವಣೆಯವರೆಗೂ ಮುಂದುವರೆಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿತ್ತು.ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯಲ್ಲೂ ಕಾಂಗ್ರೆಸ್‌ ಭರ್ಜರಿ ಗೆಲುವು ಕಂಡಿತ್ತು. ಇದೀಗ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿ ಇರುವಾಗಲೇ ಇತ್ತ ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಸಚಿವರು, ಶಾಸಕರು ರಹಸ್ಯ ಸಭೆ ನಡೆಸಿದ್ದಾರೆ.

ಡಿನ್ನರ್ ಮೀಟಿಂಗ್​ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೀತಾ ಎಂಬ ಪ್ರಶ್ನೆ ಮೂಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣಿಟ್ಟಿದ್ದಾರೆನ್ನಲಾಗಿದ್ದು, ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಎಂಬ ಮಾತುಗಳು ಹರಿದಾಡುತ್ತಿವೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆದಿದೆ. ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಸಂದೇಶ ಬಂದಿಲ್ಲ. ಸಂದೇಶ ಬಂದರೆ ತಕ್ಷಣವೇ ಸಿಎಂ ದೆಹಲಿಗೆ ತೆರಳಲಿದ್ದಾರೆ. ಯಾವ ಸಚಿವರಿಗೆ ಕೊಕ್ ಕೊಡಬೇಕು? ಯಾವ ಶಾಸಕರನ್ನ ಇನ್ ಮಾಡಬೇಕು? ಈ ಬಗ್ಗೆ ಸಿದ್ದರಾಮಯ್ಯ ಚಿತ್ರಣ ರೆಡಿ ಮಾಡಿದ್ದಾರೆ. ಡಿನ್ನರ್ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲವೇ: ಡಿಕೆ ಶಿವಕುಮಾರ್ ಬಗ್ಗೆ ಆರ್ ಅಶೋಕ್ ವ್ಯಂಗ್ಯ

ಇನ್ನು ಡಿ.ಕೆ.ಶಿವಕುಮಾರ್ ವಿದೇಶಿ ಪ್ರವಾಸದಲ್ಲಿರುವಾಗಲೇ ಇತ್ತ ಡಿನ್ನರ್ ಸಭೆ ನಡೆದಿದ್ದು, ಕಾಂಗ್ರೆಸ್​ ಮಾತ್ರವಲ್ಲ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಸಂಪುಟ ಪುನಾರಚನೆ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕರು ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಟ್ಟಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ನಿನ್ನೆ ಕ್ಯಾಬಿನೆಟ್ ಬಳಿಕ ಸಡನ್ ಆಗಿ ಮೀಟಿಂಗ್ ಫಿಕ್ಸ್ ಆಯ್ತು. ರಾಜಕೀಯ, ಸಂಘಟನೆ ಬಗ್ಗೆ ಸ್ವಾಭಾವಿಕವಾಗಿ ಚರ್ಚೆ ಆಗುತ್ತೆ ಎಂದು ಹೇಳಿದ್ದಾರೆ. ಬದಲಾವಣೆ ಏನೂ ಇಲ್ಲ, ಇರೋದನ್ನ ಸರಿ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಒಂದೇ ಒಂದು ಡಿನ್ನರ್ ಮೀಟಿಂಗ್ ಹಲವು ಆಯಾಮಗಳಲ್ಲಿ ಚರ್ಚೆ ಹುಟ್ಟುಹಾಕಿದ್ದು, ಇದು ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾದ್ರೂ ಅಚ್ಚರಿ ಇಲ್ಲ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲೇ ಕೇಳಿರುತ್ತಿವೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ