ಆಂಧ್ರ ಬಸ್​ ದುರಂತ: ಬೆಂಗಳೂರಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಸಾವು, ಓರ್ವ ಟೆಕ್ಕಿಯೂ ಬಲಿ

ಆಂಧ್ರ ಪ್ರದೇಶದ ಕರ್ನೂಲ್​ ಸಮೀಪ ನಡೆದಿರುವ ಬಸ್​ ದುರಂತದಲ್ಲಿ ಈವರೆಗೆ 20 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು 5 ಮಂದಿ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವಘಡದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಆಂಧ್ರ ಬಸ್​ ದುರಂತ: ಬೆಂಗಳೂರಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಸಾವು, ಓರ್ವ ಟೆಕ್ಕಿಯೂ ಬಲಿ
ಹೊತ್ತಿ ಉರಿದ ಖಾಸಗಿ ಬಸ್​

Updated on: Oct 24, 2025 | 4:17 PM

ಬೆಂಗಳೂರು, ಅಕ್ಟೋಬರ್​ 24: ಆಂಧ್ರ ಪ್ರದೇಶದ ಕರ್ನೂಲ್​ ಸಮೀಪ ಅಗ್ನಿ ದುರಂತದಿಂದ ಖಾಸಗಿ ಬಸ್ (Bus)​ ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ ಬೆಂಗಳೂರಲ್ಲಿ ನೆಲೆಸಿದ್ದ ಕುಟುಂಬ ಸೇರಿ 20 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಂದು (ಅ.24)ರ ಬೆಳಗಿನ ಜಾವ ಸಂಭವಿಸಿರೋ ಅನಾಹುತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಗೊಳ್ಳ ರಮೇಶ್​ ಕುಟುಂಬ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಆಂಧ್ರದ ನೆಲ್ಲೂರು ಮೂಲದವರಾಗಿದ್ದ ರಮೇಶ್​, ಪತ್ನಿ ಅನುಷಾ, ಮಕ್ಕಳಾದ ಶಶಾಂಕ್ ಮತ್ತು ಮನ್ವಿತಾ ಜೊತೆ ಇದೇ ಬಸ್​ ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್​​ ಹೊತ್ತಿ ಉರಿದಾಗ ಹೊರಬರಲಾಗದೆ ನಾಲ್ವರೂ ದುರ್ಮರಣ ಹೊಂದಿದ್ದಾರೆ.

ಘಟನೆಯಲ್ಲಿ ಬೆಂಗಳೂರಿನ ಖಾಸಗಿ ಕಂಪೆನಿಯ ಸಾಫ್ಟ್‌ವೇರ್ ಎಂಜಿನಿಯರ್ ಕೂಡ ಸಾವನ್ನಪ್ಪಿದ್ದಾರೆ. ಮೇಘನಾಥ್(24) ಮೃತರಾಗಿದ್ದು, ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದ ಮೇಘನಾಥ್ ಮರಳಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಮೇಘನಾಥ್​ ಸುಶೀಲಾ ಮತ್ತು ಭಾಸ್ಕರಾಚಾರಿ ದಂಪತಿಯ ಏಕೈಕ ಪುತ್ರನಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇರುವ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡು ಹೆತ್ತವರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಆಂಧ್ರ ಬಸ್ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಬೆಂಗಳೂರಿನ ಟೆಕ್ಕಿ; ಜೀವ ಉಳಿಸಿಕೊಂಡಿದ್ದು ಹೇಗೆ ಗೊತ್ತಾ?

ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಂತಾಪ

41 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಮೊದಲು​ ಬೈಕ್​ ಗೆ ಡಿಕ್ಕಿಯಾಗಿದ್ದು, ಆ ಬಳಿಕ ಬಸ್​ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕೆಲವರು ಹೊರಹಾರಿ ಪ್ರಾಣ ಉಳಿಸಿಕೊಂಡಿದ್ದರೆ ಹಲವರು ಬೆಂಕಿ ಕೆನ್ನಾಲೆಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಘಟನೆ ಬಗ್ಗೆ ಕರ್ನಾಟಕ ಸಿಎಂ ಸಂತಾಪ ವ್ಯಕ್ತಪಡಿಸಿದ್ದು, ಬಸ್‌ಗೆ ಬೆಂಕಿ‌ ತಗುಲಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಸುದ್ದಿ ಕೇಳಿ ಅತೀವ ದುಃಖವಾಯಿತು. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.