ಚಿತ್ತಾಪುರದಲ್ಲಿ ಪಥಸಂಚಲನ: ಸರ್ಕಾರಕ್ಕೆ ಕೋರ್ಟ್ ಮಹತ್ವದ ಸೂಚನೆ, RSSಗೆ ಕೊಂಚ ನಿರಾಸೆ
ಅರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಆರ್ ಎಸ್ಎಸ್ ಪರವಾಗಿ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದಾರೆ. ಇನ್ನು ಎಸ್ಪಿ ಹಾಗೂ ಜಿಲ್ಲಾಧಿಕಾರಿ ಕೋರ್ಟ್ ಗೆ ಕೊಟ್ಟ ವರದಿಯಲ್ಲೇನಿದೆ? ಹಾಗಾದ್ರೆ, ಈ ವಾದ ಪ್ರತಿವಾದ ಆಲಿಸಿದ ಕೋರ್ಟ್ ಹೇಳಿದ್ದೇನು? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕಲಬುರಗಿ, (ಅಕ್ಟೋಬರ್ 24): ಇದೇ ನವೆಂಬರ್ 2ರಂದು ಕಲಬುರಗಿಯ (Kalaburagi) ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್ಎಸ್ಎಸ್ಗೆ (RSS) ನಿರಾಸೆಯಾಗಿದೆ. ಆರ್ಎಸ್ಎಸ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು (ಅಕ್ಟೋಬರ್ 24) ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, (Kalabuaragi High Court Bench) ಸರ್ಕಾರಕ್ಕೆ ಕೆಲ ಸಲಹೆ ಸೂಚನೆಗಳನ್ನು ನೀಡಿ ಯಾವುದೇ ಆದೇಶ ನೀಡಿದೆ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ. ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ಅಕ್ಟೋಬರ್ 30ರಂದು ವರದಿ ನೀಡುವಂತೆ ಕೋರ್ಟ್ ತಿಳಿಸಿದ್ದು, ಈ ವರದಿ ಆಧಾರದ ಮೇಲೆ ಕೋರ್ಟ್ ತೀರ್ಪು ನೀಡಲಿದೆ. ಇನ್ನು ನವೆಂಬರ್ 2ರಂದು ಪಥಸಂಚಲನಕ್ಕೆ ಕೋರ್ಟ್ ಇಂದು ಅನುಮತಿ ನೀಡುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ಆರ್ಎಸ್ಸ್ ಮುಖಂಡರಿಗೆ ಕೊಂಚ ನಿರಾಸೆಯಾಗಿದೆ.
ಸರ್ಕಾರದ ಪರ ವಕೀಲ ಎಜಿ ಶಶಿಕಿರಣ್ ಶೆಟ್ಟಿ ವಾದ
ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ 2 ಅಭಿಪ್ರಾಯಗಳನ್ನು ನೀಡಿದ್ದಾರೆ. ಜನರಿಗೆ ತೊಂದರೆಯಾಗುವ ಬಗ್ಗೆ ಕಲಬುರಗಿ ಎಸ್‌ಪಿ ವರದಿ ನೀಡಿದ್ದಾರೆ. ಪಥಸಂಚಲನದ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಸಾಮಾನ್ಯವಾದ ನಂತರ ಪಥಸಂಚಲನ ಸೂಕ್ತ. ಕೆಲ ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತವೆಂದು ವರದಿಯಿದೆ. ಇದರಿಂದ ಯಾವುದೇ ಸಂಘಟನೆಗಳಿಗೂ ಅನುಮತಿ ನೀಡದಂತೆ ವರದಿಯಿದೆ ಎಂದು ಸರ್ಕಾರದ ಪರ ವಕೀಲ ಎಜಿ (ಅಡ್ವೊಕೇಟ್ ಜನರಲ್ ಶಶಿಕಿರಣ್ ) ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಇದನ್ನೂ ಓದಿ: ಚಿತ್ತಾಪುರದಲ್ಲಿ ಪಥಸಂಚಲನ ಫೈಟ್: RSS, ಭೀಮ ಆರ್ಮಿ ಬಳಿಕ ಮತ್ತೆರಡು ಸಂಘಟನೆಗಳಿಂದ ಅರ್ಜಿ
ಎಜಿ ಶಶಿಕಿರಣ್ ಶೆಟ್ಟಿ: ನಾವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿಲ್ಲ, ಬಾಕಿಯಿರಿಸಿದ್ದೇವೆ.
ಹೈಕೋರ್ಟ್: ಹಾಗಿದ್ದರೆ ಯಾವಾಗ ತೀರ್ಮಾನ ಕೈಗೊಳ್ಳುತ್ತೀರಿ?
ಎಜಿ ಶಶಿಕಿರಣ್ ಶೆಟ್ಟಿ: ಶಾಂತಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎರಡು ವಾರಗಳ ಬಳಿಕ ವಿಚಾರಣೆ ನಡೆಸುವಂತೆ ಎಜಿ ಮನವಿ.
ಹೈಕೋರ್ಟ್: ನಿಮ್ಮ ಆಡಳಿತ ಸಾಮರ್ಥ್ಯ ಸಾಬೀತಿಗೆ ಇದು ಸಕಾಲ. ಎಲ್ಲರಿಗೂ ಸಮಾಧಾನಕರವಾಗುವಂತೆ ಸಮಸ್ಯೆ ಬಗೆಹರಿಸಿ ಎಂದ ಹೈಕೋರ್ಟ್
ಹೈಕೋರ್ಟ್: ಸಮಸ್ಯೆ ಬಗೆಹರಿಯುವ ಮಾರ್ಗದ ಬಗ್ಗೆ ವರದಿಯಲ್ಲಿ ಸ್ಪಷ್ಟತೆಯಿಲ್ಲ
ಎಜಿ ಶಶಿಕಿರಣ್ ಶೆಟ್ಟಿ: 8 ಬೇರೆ ಸಂಘಟನೆಗಳೂ ಪಥಸಂಚಲನಕ್ಕೆ ಅನುಮತಿ ಕೋರಿದ್ದರೂ ಪರಿಗಣಿಸಿಲ್ಲ. ಪಥಸಂಚಲನದ ಬಗ್ಗೆ ಒಂದೊಂದು ರೀತಿಯ ಹೇಳಿಕೆ ನೀಡಿದ್ದಾರೆ. ಹೀಗಾಗಿ 2 ವಾರಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ.
RSS ಪರ ವಕೀಲ: ಸರ್ಕಾರದ ವಾದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಆಕ್ಷೇಪ ವ್ಯಕ್ತಪಡಿಸಿದ್ದು, ನವೆಂಬರ್ 2ರಂದು ಪಥಸಂಚಲನಕ್ಕೆ ನಾವು ಒಪ್ಪಿದ್ದೆವು. ಈಗ ಪಥಸಂಚಲನಕ್ಕೆ ಅಡ್ಡಿ ಸೃಷ್ಟಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಕೇಂದ್ರದ ಪಡೆ ನಿಯೋಜಿಸಲಿ. ಪಥಸಂಚಲನ ನಡೆಸುವುದು ಮೂಲಭೂತ ಹಕ್ಕೆಂದರು.
ಹೈಕೋರ್ಟ್:ಶಾಂತಿ ಸಮಿತಿ ಸಭೆ ಯಾವತ್ತು ಕರೆಯುತ್ತೀರಿ? ಅ.28ರಂದು ಶಾಂತಿ ಸಭೆ ನಡೆಸಿ ಅ.30ರಂದು ವರದಿ ಸಲ್ಲಿಸಿ
RSS ಪರ ವಕೀಲ : ನಾಳೆ ಶಾಂತಿ ಸಭೆ ಕರೆಯಲು ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಮನವಿ
ಎಜಿ ಶಶಿಕಿರಣ್ ಶೆಟ್ಟಿ: ಸಭೆ ಯಾವಾಗ ಕರೆಯಬೇಕೆಂದು ಅರ್ಜಿದಾರರು ಆದೇಶಿಸುವಂತಿಲ್ಲ.
ಹೈಕೋರ್ಟ್: ಸಂಘಟನೆಗಳೊಂದಿಗೆ ಅ.28 ರಂದು ಶಾಂತಿ ಸಭೆ ನಡೆಸಬೇಕು. ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು. ಸಭೆಯ ನಿರ್ಧಾರವನ್ನು ಅ.30 ರಂದು ತಿಳಿಸಲು ಹೈಕೋರ್ಟ್ ಸೂಚನೆ.
ಹೈಕೋರ್ಟ್ ಸಭೆಯ ಸಮಯವನ್ನು ಒಂದು ದಿನದಲ್ಲಿ ಅರ್ಜಿದಾರರಿಗೆ ತಿಳಿಸಿ . ವಿಚಾರವನ್ನು ಹೆಚ್ಚು ಲಂಬಿಸಬೇಡಿ. ಬೇಗ ಸಮಸ್ಯೆ ಬಗೆಹರಿಯುವುದು ಎಲ್ಲರಿಗೂ ಒಳ್ಳೆಯದು ಎಂದು ಹೇಳಿ ವಿಚಾರಣೆಯನ್ನು ಅ.30ಕ್ಕೆ ಮುಂದೂಡಿದೆ.
ಕೋರ್ಟ್ ಸೂಚನೆಯಂತೆ ಸರ್ಕಾರ ಅಕ್ಟೋಬರ್ 28ರಂದು ಸಭೆ ನಡೆಸಿ ಚಿತ್ತಾಪುರದಲ್ಲಿ ಸ್ಥಿತಿಗತಿ ಬಗ್ಗೆ ಅಕ್ಟೋಬರ್ 30ರೊಳಗೆ ವರದಿ ನೀಡಬೇಕಿದೆ. ಬಳಿಕ ಕೋರ್ಟ್, ಈ ವರದಿ ಆಧಾರದ ಮೇಲೆ ಆದೇಶ ನೀಡಲಿದೆ. ಹೀಗಾಗಿ ಸರ್ಕಾರ ವರದಿಯಲ್ಲಿ ಏನಂತ ನೀಡಲಿದೆ? ಕೋರ್ಟ್ ಯಾವ ತೀರ್ಪು ನೀಡಲಿದೆ ಎನ್ನುವ ಕುತೂಹಲ ಮೂಡಿಸಿದೆ.
ನವೆಂಬರ್ 2ರಂದು ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಮಾಡಲು ಈಗಾಗಲೇ ಕೋರ್ಟ್ ಮುಂದೆ ಹೇಳಿದ್ದು, ಇದಕ್ಕೆ ಕೋರ್ಟ್ ಸಹ ಹೊಸ ಅರ್ಜಿ ಸಲ್ಲಿಸುವಂತೆ ಹೇಳಿತ್ತು. ಆದ್ರೆ. ಆರ್ಎಸ್ಎಸ್ ಜೊತೆಗೆ ಇನ್ನುಳಿದ ಏಳು ಬೇರೆ ಬೇರೆ ಸಂಘಟನೆಗಳು ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ಮಾಡಲು ಅನುಮತಿ ನೀಡುವಂತೆ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿವೆ. ಹೀಗಾಗಿ ಯಾರಿಗೆ ಕೊಡಬೇಕೋ ಯಾರಿಗೆ ಬಿಡಬೇಕೆನ್ನುವುದೇ ದೊಡ್ಡ ಗೊಂದಲ ಏರ್ಪಟ್ಟಿದೆ.
ಕೊನೆಗೆ ಜಿಲ್ಲಾಡಳಿ ಏಳು ಸಂಘಟನೆಗಳು ಅರ್ಜಿ ಸಲ್ಲಿಸಿದ್ದು, ಹೀಗಾಗಿ ಸದ್ಯಕ್ಕೆ ಯಾವುದೇ ಸಂಘ-ಸಂಘಟನೆಗಳಿಗೆ ನವೆಂಬರ್ 2ರಂದು ಪಥಸಂಚಲನ ಮಾಡಲು ಅನುಮತಿ ನೀಡಬಾರದು ಎಂದು ವರದಿಯಲ್ಲಿ ತಿಳಿಸಿದೆ ಎಂದು ಸ್ವತಃ ಸರ್ಕಾರದ ಪರ ವಕೀಲರು ಕೋರ್ಟ್ ಮುಂದೆ ತಿಳಿಸಿದ್ದಾರೆ.
Published On - 4:25 pm, Fri, 24 October 25



