ಕರ್ನೂಲ್ ಬಸ್ ದುರಂತ: ಆಕೆ ಕಂಡ ಕನಸು ಬಸ್ಸಿನಲ್ಲಿ ಭಸ್ಮ, 22 ವರ್ಷದ ಟೆಕ್ಕಿ ಸಾವು
ಕರ್ನೂಲ್ ಬಸ್ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಜೀವ ದಹನವಾಗಿದ್ದಾರೆ. ಇದರಲ್ಲಿ ರಮೇಶ್ ದಂಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇದಲ್ಲದೆ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 22 ವರ್ಷದ ಅನುಷಾ ಕೂಡ ಅಸುನೀಗಿದ್ದಾರೆ. ದೀಪಾವಳಿ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಬೆಂಗಳೂರು, ಅ.24: ಆಂಧ್ರದ ಕರ್ನೂಲ್ ಬಳಿ (Kurnool bus fire tragedy) ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಅನೇಕ ಮಂದಿ ಸಾವನ್ನಪ್ಪಿದ್ದು, ಅನೇಕ ಕನಸುಗಳು ಭಸ್ಮವಾಗಿವೆ. ಆಂಧ್ರದ ನೆಲ್ಲೂರು ಮೂಲದವರಾದ ರಮೇಶ್, ಅವರ ಪತ್ನಿ ಅನೂಷಾ, ಹಾಗೂ ಮಕ್ಕಳು ಶಶಾಂಕ್ ಮತ್ತು ಮನ್ವಿತಾ ಈ ದುರಂತದಲ್ಲಿ ಸಜೀವ ದಹನವಾಗಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. ನಿದ್ರೆಯಲ್ಲಿದ್ದ ಕುಟುಂಬ ಸದಸ್ಯರು ಸಜೀವವಾಗಿ ಸುಟ್ಟು ಕರಕಲಾಗಿದ್ದು, ಈ ದೃಶ್ಯ ನೋಡಿದವರ ಮನ ಕಲುಕುವಂತಿದೆ.
ಇದಲ್ಲದೆ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿ ಅನುಷಾ ಕೂಡ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಯಾದಾದ್ರಿಯ ನಿವಾಸಿಯಾಗಿದ್ದ ಅನುಷಾ, ದೀಪಾವಳಿ ಹಬ್ಬಕ್ಕಾಗಿ ತಮ್ಮ ಊರಿಗೆ ಹೋಗಲು ಹೈದರಾಬಾದ್‌ನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಮರಳುತ್ತಿದ್ದರು. ಆದರೆ ಈ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಅನುಷಾ ಕೂಡ ಅಸುನೀಗಿದ್ದಾರೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಅನುಷಾ, ಈ ಘಟನೆಯಿಂದ ಸಾವನ್ನಪ್ಪಿರುವುದು ದುರದೃಷ್ಟಕರ.
ಇದನ್ನೂ ಓದಿ: ಆಂಧ್ರ ಬಸ್ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಬೆಂಗಳೂರಿನ ಟೆಕ್ಕಿ; ಜೀವ ಉಳಿಸಿಕೊಂಡಿದ್ದು ಹೇಗೆ ಗೊತ್ತಾ?
ವಿಡಿಯೋ ಇಲ್ಲಿದೆ ನೋಡಿ:
ಈ ಬಸ್‌ನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಯುವಕರಾಗಿದ್ದರು ಎಂದು ತಿಳಿದುಬಂದಿದೆ. ಅವರಲ್ಲಿ ಅನೇಕರು ಬೆಂಗಳೂರಿನಲ್ಲಿ ಟೆಕ್ಕಿಗಳಾಗಿ, ಅಥವಾ ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬದ ಆಚರಣೆಗಾಗಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಇವರೆಲ್ಲರೂ, ಹಬ್ಬ ಮುಗಿಸಿ ತಮ್ಮ ಸಂಬಂಧಿಕರೊಂದಿಗೆ ಸಂತಸದ ಕ್ಷಣಗಳನ್ನು ಕಳೆದ ನಂತರ ಬೆಂಗಳೂರಿಗೆ ಮರಳುತ್ತಿದ್ದರು. ಬೆಳಗ್ಗೆ ಬೆಂಗಳೂರು ತಲುಪಿ, ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮುಂದುವರಿಸಲು ಹಾಗೂ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ, ಈ ದುರಂತ ಅವರ ಎಲ್ಲಾ ಕನಸುಗಳನ್ನು ಬೂದಿ ಮಾಡಿದೆ. ಬೆಂಗಳೂರು ತಲುಪುವ ಬದಲು, ಸ್ಮಾಶನ ಸೇರುತ್ತಾರೆ ಎ ಯಾರೊಬ್ಬರೂ ಊಹಿಸಿರಲಿಲ್ಲ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




