ಹಿರಿಯ ಪೊಲೀಸ್ ಅಧಿಕಾರಿ, ಐಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ಎದುರು ಹಾಕಿಕೊಂಡು ನಿರ್ಭಯಾ ನಿಧಿ ಉಪಯೋಗ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ whistle blower ಆಗಿ ವರ್ತಿಸಿದ್ದಕ್ಕೆ ಸರಕಾರ ಐಜಿಪಿ ಡಿ. ರೂಪಾ ಮೌದ್ಗಿಲ್ ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯಮಿಸಿದ ಬೆನ್ನಲ್ಲೇ ಈಗ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಲ್ಲಿಯೂ ರೂ 24 ಕೋಟಿ ಅವ್ಯವಹಾರ ನಡೆದಿರುವುದು ಹೊರಗೆ ಬಂದಿದೆ.
ಈ 24 ಕೋಟಿ ರೂ. ಅವ್ಯವಹಾರದ ಬಗ್ಗೆ ಈಗಾಗಲೇ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಿದೆ ಎಂದು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ, ಡಾ ಬೇಳೂರು ರಾಘವೇಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಡಾ. ಶೆಟ್ಟಿ ಹೇಳುವ ಪ್ರಕಾರ ಇನ್ನೋರ್ವ ಐಪಿಎಸ್ ಅಧಿಕಾರಿ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಆದರೆ ತನಿಖಾಧಿಕಾರಿಗಳು ಇದನ್ನು ತಮ್ಮ ತನಿಖೆಯಲ್ಲಿ ಹೇಳುತ್ತಿಲ್ಲ. ಏಕೆಂದರೆ ಅವರೊಬ್ಬ ಹಿರಿಯ ಅಧಿಕಾರಿಯಾಗಿರುವುದೇ ಇದಕ್ಕೆ ಕಾರಣ ಎಂದು ಡಾ ಬೇಳೂರು ರಾಘವೇಂದ್ರ ಶೆಟ್ಟಿ ಹೇಳುತ್ತಾರೆ.
ಶುಕ್ರವಾರ ಅಧಿಕಾರ ಸ್ವೀಕರಿಸಿದ ರೂಪಾ ಅವರಿಗೆ ಈಗ ಹೊಸ ಸವಾಲು ಎದುರು ಬಂದು ನಿಂತಿದೆ: ಅದೇನೆಂದರೆ, ಈ ಅವ್ಯವಹಾರದಲ್ಲಿ ನಿಜವಾಗಿಯೂ ದೊಡ್ಡ ಕುಳಗಳು ಪಾಲುದಾರರಾಗಿದ್ದರೆ, ಸಿಬಿಐನ್ನು ಒಪ್ಪಿಸಿ ತನಿಖೆಯ ವಲಯವನ್ನು ವಿಸ್ತರಿಸುವುದು.
ಡಾ. ಶೆಟ್ಟಿ ಹೇಳುವ ಪ್ರಕಾರ ಇದೊಂದು ಹೊಸ ರೀತಿಯ ಅವ್ಯವಹಾರ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಹಣವನ್ನು ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಒಂದು ವಾರದ ಸ್ಥಿರ ಠೇವಣಿ ಎಂದು ಹೆಸರಿಡುವುದು. ಅಲ್ಲಿಟ್ಟ ಹಣಕ್ಕೆ ಒಂದು ವರ್ಷದ ಅವಧಿಯ ಸ್ಥಿರ ಠೇವಣಿಯ ಪ್ರಮಾಣಪತ್ರ ಕಚೇರಿಯಲ್ಲಿ ತಯಾರಾಗುತ್ತೆ. ಬ್ಯಾಂಕಿನಲ್ಲಿಟ್ಟ ಆ ಹಣವನ್ನು ವ್ಯವಸ್ಥಾಪಕ ನಿರ್ದೇಶಕರು ಮತ್ತೊಂದು ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಒಂದೊಮ್ಮೆ ಈ ಹಿಂದೆ ಸೇವೆ ಸಲ್ಲಿಸಿದ್ದ ಅಧಿಕಾರಿಯ ಪಾಲುದಾರಿಕೆ ಬಗ್ಗೆ ಸಾಕ್ಷಾಧಾರ ಸಿಕ್ಕರೆ ರೂಪಾ ಅವರು ಮತ್ತೋರ್ವ ಐಪಿಎಸ್ ಅಧಿಕಾರಿಯನ್ನು ಎದುರು ಹಾಕಿಕೊಳ್ಳಲೇ ಬೇಕಾದ ಸ್ಥಿತಿ ಬಂದೊದಗಿದೆ.
ಇದು ನನ್ನನ್ನೂ ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತೆ: ಡಿ.ರೂಪಾ