ಮರುಕಳಿಸಿದ ವಂಟಮೂರಿ ಘಟನೆ; ಒತ್ತುವರಿ ಪ್ರಶ್ನಿಸಿದ್ದಕ್ಕೆ ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ?

| Updated By: ಆಯೇಷಾ ಬಾನು

Updated on: Feb 29, 2024 | 12:37 PM

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಈ ಘಟನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು, ಇಡೀ ಸಮಾಜ ತಲೆ ತಗ್ಗಿಸುವಂತೆ ಮಾಡಿತ್ತು. ಇದೀಗ ಇದೇ ರೀತಿಯ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಬಡ ಮಹಿಳೆಯ ಸೀರೆ ಬಿಚ್ಚಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮರುಕಳಿಸಿದ ವಂಟಮೂರಿ ಘಟನೆ; ಒತ್ತುವರಿ ಪ್ರಶ್ನಿಸಿದ್ದಕ್ಕೆ ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ?
ಒತ್ತುವರಿಯಾದ ಜಾಗ
Follow us on

ಬೆಳಗಾವಿ, ಫೆ.29: ವಂಟಮೂರಿ (Vantamuri) ಗ್ರಾಮದಲ್ಲಿ ಮಹಿಳೆ‌‌ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಘಟನೆಯಂತೆಯೇ ಅದೇ ಬೆಳಗಾವಿಯಲ್ಲಿ (Belagavi) ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮಹಿಳೆ ಸೀರೆ ಕಳಚಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆ ಅರೆ ಬೆತ್ತಲೆ ಮಾಡಿ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ,‌ ಮಾಯಪ್ಪ ಹಳ್ಯಾಳ ಎಂಬುವವರು ಸರ್ಕಾರಿ ರಸ್ತೆ ಜೊತೆಗೆ ಬಡ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡಿದ್ದ ಜಮೀನು ‌ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ನೀಡಿದ್ದ ಜಮೀನು ‌ಒತ್ತುವರಿ ಮಾಡಿಕೊಂಡ ಬಗ್ಗೆ ಬಡ ಮಹಿಳೆ ಪ್ರಶ್ನೆ ಮಾಡಿದ್ದು ಆರೋಪಿಗಳು ಮಹಿಳೆ ಸೀರೆ ಕಳಚಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಮಹಿಳೆ ಅರೆ ಬೆತ್ತಲೆ ಮಾಡಿ ಜೊತೆಗೆ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ, ಘಟನೆ ತಡೆದ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಸನ್ಮಾನ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ರಾಮಪ್ಪ ಭೀಮಪ್ಪ ನಾಗನೂರ ಎಂಬುವವರಿಗೆ 1991ರಲ್ಲಿ ಸರ್ಕಾರದಿಂದ ಮೂರು ಎಕರೆ ಜಮೀನು ಮಂಜೂರಾಗಿತ್ತು. ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ರಾಮಪ್ಪ ನಾಗನೂರು ಜೀವನ ನಡೆಸುತ್ತಿದ್ದರು. ಇದರ ಮೇಲೆ ಕಣ್ಣು ಹಾಕಿದ ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ,‌ ಮಾಯಪ್ಪ ಹಳ್ಯಾಳ ಎಂಬುವವರು ರಾಮಪ್ಪಗೆ ಸೇರಿದ ಜಮೀನಿನ‌ 20 ಗುಂಟೆ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ನಮಗೆ ರಾಜಕೀಯ ‌ನಾಯಕರ ಸಂಪರ್ಕ ಇದೆ ಎಂದು ಹೇಳಿ ದಬ್ಬಾಳಿಕೆ ಮಾಡ್ತಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ರಾಮಪ್ಪ ನಾಗನೂರಗೆ ಮಂಜೂರಾದ ಜಮೀನು ಜೊತೆಗೆ ರಸ್ತೆಗೆ ಮೀಸಲಿಟ್ಟ ‌ಜಾಗವೂ ಒತ್ತುವರಿ ಮಾಡಿಕೊಳ್ಳಲಾಗಿದೆ. ಒತ್ತುವರಿ ಪ್ರಶ್ನಿಸಲು ಹೋಗಿದ್ದ ರಾಮಪ್ಪ ಪತ್ನಿ ಜಯಶ್ರೀ ಜೊತೆಗೆ ಅಸಭ್ಯ ವರ್ತನೆ ತೋರಿ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ಸೀರೆ ಕಳಚಿ ವಿಕೃತಿ ಮೆರೆದಿದ್ದಾರೆ. ಅಲ್ಲದೇ ಜಯಶ್ರೀ ಪುತ್ರ ಮುರಾರಿ ಮೇಲೂ ಮಾರಣಾಂತಿಕ ಹಲ್ಲೆಗೈದಿದ್ದಾರೆ. ನ್ಯಾಯಕ್ಕಾಗಿ ಎಷ್ಟೇ ಅಲೆದಾಡಿದರೂ ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂದು ಟಿವಿ9 ಮುಂದೆ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಐನಾಪುರಕ್ಕೆ ಕಾಗವಾಡ ತಹಶೀಲ್ದಾರ್ ಸಂಜಯ್ ಇಂಗಳೆ ಭೇಟಿ

ಈ ಘಟನೆ ಸಂಬಂಧ ಟಿವಿ9 ವರದಿ ಬೆನ್ನಲ್ಲೇ ಸ್ಥಳಕ್ಕೆ ಐನಾಪುರಕ್ಕೆ ಕಾಗವಾಡ ತಹಶೀಲ್ದಾರ್ ಸಂಜಯ್ ಇಂಗಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿಕ್ರಮಣ ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನೊಂದ ಕುಟುಂಬ ದಾಖಲೆ ಸಮೇತ ತಹಶೀಲ್ದಾರ್​ಗೆ ವಿವರಣೆ ನೀಡಿದ್ದಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್​ ಭರವಸೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:20 am, Thu, 29 February 24