ಸರ್ಕಾರಿ ಆಸ್ತಿ ಕಾವಲಿಗೆ ತಂತ್ರಜ್ಞಾನದ ಮೂಲಕ ಕಡಿವಾಣ; ಲ್ಯಾಂಡ್ ಬೀಟ್ ಆ್ಯಪ್ ಸಿದ್ಧಗೊಳಿಸಿದ ಸರ್ಕಾರ
Geofencing in Karnataka: ಸರ್ಕಾರದ ಆಸ್ತಿ ಕಾವಲಿಗೆ ಲ್ಯಾಂಡ್ ಬೀಟ್ ತಂತ್ರಾಂಶ ಬಳಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ತಂತ್ರಾಂಶದ ಮೂಲಕ ಸರ್ಕಾರದ ಆಸ್ತಿ ರಕ್ಷಣೆ ಮಾಡಲಾಗುವುದು. ಪ್ರತಿ ಜಮೀನಿಗೆ ಲ್ಯಾಂಡ್ ಬೀಟ್ ಆಪ್ ಬಳಸಿ ಸರ್ಕಾರಿ ಜಮೀನು ಸರ್ವೇ ಮಾಡಿ ಜಿಯೋ ಫೆನ್ಸಿಂಗ್ ಮಾಡುವ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತದೆ. ಸರ್ಕಾರಿ ಭೂಮಿ ರಕ್ಷಣೆಗೆ ಈ ತಂತ್ರಾಂಶ ಕ್ರಾಂತಿಕಾರಿ ಕೆಲಸ ಮಾಡಲಿದೆ ಎಂದು ದಾವಣಗೆರೆ ಡಿಸಿ ತಿಳಿಸಿದ್ದಾರೆ.
ದಾವಣಗೆರೆ ಫೆ.29: ನಮ್ಮದಲ್ಲದ ಮೂರಡಿ-ಆರಡಿ ಜಾಗದಲ್ಲಿ ಮಣ್ಣಾಗುವ ಮನುಷ್ಯನಿಗೆ ಊರಲೆಲ್ಲ ಜಾಗ ಖರೀದಿಸುವ ಆಸೆ ಇರುತ್ತೆ. ಹೀಗಾಗಿ ನಾನಾ ಮಾರ್ಗದಿಂದ ಜಾಗ ಒತ್ತುವರಿ ಮಾಡಿಕೊಳ್ಳುವವರೂ ನಮ್ಮಲ್ಲಿದ್ದಾರೆ. ಅಲ್ಲದೆ ಸರ್ಕಾರಿ ಆಸ್ತಿಗಳೆಂದರೆ ಯಾರು ಕೇಳುವವರಿರಲ್ಲ, ಯಾರು ಬೇಕಾದರೂ ಒತ್ತುವರಿ (Encroachment) ಮಾಡಬಹುದು ಎಂಬ ಭಾವನೆ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರಿ ಆಸ್ತಿಗಳ ಕಾವಲಿಗೆ ಲ್ಯಾಂಡ್ ಬೀಟ್ (Land Beat App) ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿದೆ. ಸರ್ಕಾರದ ಆಸ್ತಿ ಕಾವಲಿಗೆ ಲ್ಯಾಂಡ್ ಬೀಟ್ ತಂತ್ರಾಂಶ ಬಳಕೆ ಮಾಡಲು ಸರ್ಕಾರ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ.ವಿ ಅವರು ದಾವಣಗೆರೆ ಕಸಬಾ ಹೋಬಳಿಯ ದೊಡ್ಡಬಾತಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸರ್ವೆ ನಂಬರ್ 34 ರಲ್ಲಿನ ಸರ್ಕಾರಿ ಸ್ಮಶಾನದ ಜಮೀನನ್ನು ಸ್ವತಃ ಆಪ್ ಮೂಲಕ ಸರ್ವೆ ಮಾಡಿ ಒತ್ತುವರಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಜಿಯೋ ಫೆನ್ಸಿಂಗ್ ಮಾಡಿಸಿದ್ದಾರೆ. ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಸರ್ಕಾರ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಈ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಎಲ್ಲಾ ಜಮೀನುಗಳಿಗೆ ಜಿಯೋಫೆನ್ಸಿಂಗ್ ಮಾಡುತ್ತಾರೆ. ಈ ಆಪ್ ಮೂಲಕ ಜಿಯೋ ಫೆನ್ಸಿಂಗ್ ಮಾಡಿ, ಒತ್ತುವರಿ ಮಾಡಿದ್ದಲ್ಲಿ ಅಂತಹ ಆಸ್ತಿಗಳ ವಿವರ ಲಭ್ಯವಾಗುತ್ತದೆ. ಈ ಸ್ಥಳಗಳಿಗೆ ನಿಗದಿತ ಅವಧಿಯಲ್ಲಿ ಭೇಟಿ ನೀಡಲು ಯಾವ ರೀತಿ ಪೊಲೀಸ್ ಬೀಟಿಂಗ್ ವ್ಯವಸ್ಥೆ ಇರುತ್ತದೆ, ಅದೇ ರೀತಿ ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಬೀಟಿಂಗ್ ವ್ಯವಸ್ಥೆಯನ್ನು ಆಪ್‍ನಲ್ಲಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ವೆಂಕಟೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಮರುಕಳಿಸಿದ ವಂಟಮೂರಿ ಘಟನೆ; ಒತ್ತುವರಿ ಪ್ರಶ್ನಿಸಿದ್ದಕ್ಕೆ ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ?
ಈ ಆಪ್ ಮೂಲಕ ಪ್ರಾಯೋಗಿಕ ಸರ್ವೆಯನ್ನು ದೊದ್ದಬಾತಿಯಲ್ಲಿ ಜಿಲ್ಲಾಧಿಕಾರಿಯವರು ಖುದ್ದು ಕೈಗೊಂಡು ಸರ್ವೆ ನಂಬರ್ 34 ರಲ್ಲಿ ಸರ್ಕಾರಿ ಸ್ಮಶಾನ ಭೂಮಿ ಒತ್ತುವರಿಯಾಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಖಚಿತ ಪಡಿಸಿಕೊಂಡರು. ಈ ಭೂಮಿಯು ಒತ್ತುವರಿಯಾಗಿರುವುದಿಲ್ಲ ಎಂಬುದು ಇದರಿಂದ ಮಾಹಿತಿ ಲಭ್ಯವಾಗಿದೆ. ಆಪ್ ಮೂಲಕ ಎಲ್ಲಾ ಸರ್ಕಾರಿ ಜಮೀನು, ಜಾಗಗಳನ್ನು ಸರ್ವೆ ಮಾಡಿ ಜಿಯೋ ಫೆನ್ಸಿಂಗ್ ಮಾಡುವ ಮೂಲಕ ದತ್ತಾಂಶ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:55 am, Thu, 29 February 24