ಚಿಕ್ಕಮಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಯುವ ಮೋರ್ಚಾ ಮುಖಂಡರು ಚಿಕ್ಕಮಗಳೂರಿನಲ್ಲಿ ಮೋರ್ಚಾದ ಅಧ್ಯಕ್ಷರೂ ಸೇರಿದಂತೆ ಅನೇಕರು ಸಾಮೂಹಿಕ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಮನವೋಲಿಸುವ ನಿಟ್ಟಿನಲ್ಲಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್ ಇದ್ದಿದ್ದರೆ ಕಲ್ಲು ಎಸೆಯಬಹುದಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ ಹೇಳಿಕೆ ವೈರಲ್ ಆಗಿತ್ತು. ಪ್ರಕರಣ ಸಂಬಂಧ ಗಂಭಿರವಾಗಿ ಪರಿಗಣಿಸಿದ ಬಿಜೆಪಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸ್ಥಾನದಿಂದ ಸಂದೀಪ್ ಹರವಿನಗಂಡಿ ಅವರನ್ನು ಬದಲಾಯಿಸಿದೆ. ಅಲ್ಲದೆ ಅಧ್ಯಕ್ಷರನ್ನಾಗಿ ಸಂತೋಷ್ ಕೋಟ್ಯಾನ್ ಅವರನ್ನು ನೇಮಕ ಮಾಡಿದೆ.
ಪ್ರವೀಣ್ ನೆಟ್ಟಾರು ಹತ್ಯೆ ನಂತರ ರಾಜ್ಯಾದ್ಯಂತ ಬಿಜೆಪಿ ಯುವ ಮೋರ್ಚಾದ ಮುಂಡರು, ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆ ಪರ್ವ ಮೊದಲ ಬಾರಿಗೆ ಪ್ರಾರಂಭವಾಗಿದ್ದು ಚಿಕ್ಕಮಗಳೂರು ಜಿಲ್ಲೆಯಿಂದ. ಚಿಕ್ಕಮಗಳೂರು ಮೋರ್ಚಾದ ಅಧ್ಯಕ್ಷರಾಗಿದ್ದ ಸಂದೀಪ್ ಅವರನ್ನು ಮನವೋಲಿಸುವ ಸಲುವಾಗಿ ತೇಜಸ್ವಿ ಸೂರ್ಯ ಅವರು ದೂರವಾಣಿ ಕರೆ ಮೂಲಕ ಮಾತನಾಡಿದ್ದರು. ಈ ಮಾತುಕತೆಯ ವಿಡಿಯೋ ವೈರಲ್ ಆಗುವ ಮೂಲಕ ತೇಜಸ್ವಿ ಸೂರ್ಯ ಅವರನ್ನು ಮುಜುಗರಕ್ಕೀಡು ಮಾಡಿತ್ತು.
ರಾಜೀನಾಮೆಯನ್ನು ಹಿಂಪಡೆಯುವಂತೆ ಸಂದೀಪ್ ಅವರನ್ನು ಮನವೋಲಿಸುವ ಭರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಸಂದೀಪ್ ಅವರಿಗೆ ಕೊಕ್ ನೀಡಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಂತೋಷ್ ಕೋಟ್ಯಾನ್ ಅವರನ್ನು ನೇಮಿಸಲಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 am, Fri, 19 August 22