ಮೊಟ್ಟೆ ಎಸೆತದಿಂದ ಸಿಡಿಮಿಡಿಯಾದ ಸಿದ್ದರಾಮಯ್ಯ; ಆರ್ಎಸ್ಎಸ್, ಬಿಜೆಪಿ ವಿರುದ್ಧ ಟೀಕಾಪ್ರಹಾರ
ತನ್ನ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಕರಣದಿಂದ ಆಕ್ರೋಶಗೊಂಡಿರುವ ಸಿದ್ದರಾಮಯ್ಯ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ ಕೊಡಗು ಎಸ್ಪಿ ವಿರುದ್ಧವೂ ಹರಿಹಾಯ್ದಿದ್ದಾರೆ.
ಕೊಡಗು: ಜಿಲ್ಲೆಯಲ್ಲಿ ತನ್ನ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಕರಣ ಸಂಬಂಧ ಕೊಡಗಿನಿಂದ ಚಿಕ್ಕಮಗಳೂರಿಗೆ ತೆರಳುವ ಮುನ್ನ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿದ್ದರಾಮಯ್ಯ, ಆರ್ಎಸ್ಎಸ್, ಬಿಜೆಪಿ ಗೂಟ ಹೊಡ್ಕೊಂಡು ಕೂತಿದ್ದಾರಾ? ಕಾನೂನು ಪರಿಪಾಲನೆ ಮಾಡುವುದು ಪೊಲೀಸರ ಜವಾಬ್ದಾರಿ, ಅದನ್ನು ಬಿಟ್ಟು ಆಟ ಆಡಿಸುತ್ತಿದ್ದೀರಾ? ಎಂದು ಪೊಲೀಸರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಕಾರಿನತ್ತ ಬರುವಾಗ ಪೊಲೀಸರಿಗೆ ಹಿಡಿದು ಒಳಗೆ ಹಾಕಲು ಆಗುವುದಿಲ್ಲವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಂದಾಗ ನಮ್ಮ ಕಾರ್ಯಕರ್ತರನ್ನು ಹಿಡಿಯುತ್ತೀರಿ, ನಾನು ಬರುವಾಗ ಆಗುದಿಲ್ವಾ? ಅವರನ್ನು ಬಿಟ್ಟುಕೊಂಡು ತಮಾಷೆ ನೋಡುತ್ತಿದ್ದೀರಾ? ನಾನು ಶಾಡೋ ಚೀಫ್ ಮಿನಿಸ್ಟರ್, ವಿಪಕ್ಷ ನಾಯಕ ಬಂದಾಗ ಭದ್ರತೆ ಕೊಡಲು ಆಗುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಎಸ್ಪಿ ಕಚೇರಿಗೆ ಮುತ್ತಿಗೆ
ಘಟನೆಯಿಂದ ಕೆರಳಿದ ಸಿದ್ದರಾಮಯ್ಯು, ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ. ಆಗಸ್ಟ್ 26ರಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಬೇಕು, ಅಂದು ನಾನು ಜಿಲ್ಲೆಗೆ ಬರುತ್ತೇನೆ, ನನ್ನ ನೇತೃತ್ವದಲ್ಲೇ ಬೃಹತ್ ಪ್ರತಿಭಟನೆ ನಡೆಯಲಿದೆ. ನಿನ್ನೆ ನಡೆದ ಘಟನೆ ರಾಜ್ಯ ಸರ್ಕಾರವೇ ಮಾಡಿಸಿದೆ ಎಂದು ಹೇಳಿದರು.
ಮುಂದಿನ ಆರೇಳು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಹತಾಶೆಯಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಲಾಗಿದೆ. ಗೋಬ್ಯಾಕ್ ಅಂದರೆ ಎಲ್ಲಿಗೆ ಹೋಗಲಿ ? ನಮ್ಮ ಕಾರ್ಯಕರ್ತರೂ ಗೋ ಬ್ಯಾಕ್ ಎಂದು ಹೇಳುತ್ತಾರೆ, ಆದರೆ ಭದ್ರತೆ ನೀಡುವುದು ಪೊಲೀಸ್ ಅಧಿಕಾರಿಗಳ ಜವಾಬ್ದಾರಿ. ಮೂರ್ನಾಲ್ಕು ಕಡೆಗಳಲ್ಲಿ ಪ್ರತಿಭಟನೆ ಮಾಡುವುದು ಗೊತ್ತಿದ್ದರೂ ಪೊಲೀಸರು ಸುಮ್ಮನಿದ್ದಾರೆ. ಮುಖ್ಯಮಂತ್ರಿಯವರು ಬರುತ್ತಿದ್ದರೆ ಈ ರೀತಿ ಪೊಲೀಸರು ಮಾಡುತ್ತಿದ್ದರಾ? ಎಂದು ಎಸ್ಪಿ ಅವರನ್ನು ಪ್ರಶ್ನಿಸಿದರು.
ಇತಿಹಾಸದಲ್ಲಿ 40% ಸರ್ಕಾರ ಬಂದಿರಲಿಲ್ಲ
ಚಿಕ್ಕಮಗಳೂರು: ಜಿಲ್ಲೆಯಲ್ಲೂ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಲೂಟಿ ಹೊಡೆಯಲು ಬಂದಿದ್ದಾರೆ. ಇತಿಹಾಸದಲ್ಲೇ 40% ಸರ್ಕಾರ ಬಂದಿರಲಿಲ್ಲ. ಈ ಸರ್ಕಾರ ಕಮ್ಯುನಲ್ ಸರ್ಕಾರ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದಾಗ ಕೇವಲ ಪ್ರವೀಣ್ ಮನೆಗೆ ಹೋಗಿ ಮುಖ್ಯಮಂತ್ರಿ ಬಂದರು. ಫಾಝಿಲ್, ಮಸೂದ್ ಮನೆಗೆ ಹೋಗಲಿಲ್ಲ. ಪರಿಹಾರವನ್ನು ಕೇವಲ ಪ್ರವೀಣ್ ಕುಟುಂಬಸ್ಥರಿಗೆ ಮಾತ್ರ ಕೊಟ್ಟರು. ಇವರ ಸ್ವಂತ ಜೇಬಿನಿಂದ ಏನು ಕೊಟ್ರಾ? ಪರಿಹಾರ ಕೊಟ್ಟದ್ದು ಜನಸಾಮಾನ್ಯರ ತೆರಿಗೆ ಹಣದಿಂದ. ಪ್ರಜಾಪ್ರಭುತ್ವ, ಜನರ ಸರ್ಕಾರ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ನನ್ನ ಡೇಟ್ ಆಫ್ ಬರ್ತೆ ಗೊತ್ತಿಲ್ಲ
ಶಾಸಕ ರಾಜೇಗೌಡರ ಉಳಿದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಹಳ ಸಮಯದಿಂದ ನಮ್ಮ ಎಸ್ಟೇಟ್ನಲ್ಲಿ ಬಂದು ವಾಸ್ತವ್ಯ ಮಾಡಿ ಅಂತ ನಮ್ಮ ಶಾಸಕ ರಾಜೇಗೌಡರು ಯಾವಾಗ್ಲೂ ಕರಿಯುತ್ತಾ ಇದ್ದರು. ಅವರ ಆಹ್ವಾನದ ಮೇರೆಗೆ ನಿನ್ನೆ ರಾಜೇಗೌಡರ ಮನೆಯಲ್ಲಿ ಉಳಿದುಕೊಂಡಿದ್ದೆ. ಈ ವೇಳೆ ಹುಟ್ಟುಹಬ್ಬವನ್ನ ಇಲ್ಲೂ ಕೂಡ ಆಚರಣೆ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಜನ್ಮ ದಿನಾಂಕವೇ ನನಗೆ ಗೊತ್ತಿಲ್ಲ. ನಾನು ನೇರವಾಗಿ 5ನೇ ತರಗತಿಗೆ ಸೇರಿದೆ. ಆಗ ಮೇಷ್ಟ್ರು ನನಗೊಂದು ಜನ್ಮದಿನಾಂಕ ನೀಡಿದರು. ಅದೇ ನನಗೆ ಡೇಟ್ ಆಫ್ ಬರ್ತ್ ಆಗಿ ಮುಂದುವರಿದಿದೆ ಎಂದರು. ಅಲ್ಲದೆ, ದಾವಣಗೆರೆ ನಡೆದ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮ. ಈಗಾಗಲೇ 44 ವರ್ಷ ರಾಜಕೀಯ ಜೀವನ ನೋಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕೂಡ ಸ್ಪರ್ಧೆ ಮಾಡುತ್ತೇನೆ ಎಂದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Fri, 19 August 22