AK-47: ಬೆಳಗಾವಿ ಐಟಿಬಿಪಿ ಶಿಬಿರದಲ್ಲಿ ಅತ್ಯಾಧುನಿಕ ಘಾತಕ ರೈಫಲ್ ಕಳವು; ಶೋಧಕ್ಕಾಗಿ ವಿಶೇಷ ತಂಡ ರಚನೆ, ಅಧಿಕಾರಿಗಳಲ್ಲಿ ಆತಂಕ
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಉನ್ನತ ಅಧಿಕಾರಿಗಳು ಧಾವಿಸಿದ್ದು, ಕಟ್ಟೆಚ್ಚರದ ಸಂದೇಶ ರವಾನಿಸಲಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯ ನೆರವಿನಿಂದ ವ್ಯಾಪಕವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬೆಳಗಾವಿ: ಚೀನಾ ಗಡಿ ಕಾವಲು ಜವಾಬ್ದಾರಿ ಹೊತ್ತಿರುವ ಐಟಿಬಿಪಿ (Indo Tibetan Border Police – ITBP) ಯೋಧರಿಗೆ ಸೇರಿದ ಎರಡು ಎಕೆ-47 ರೈಫಲ್ಗಳು (AK-47 Rifle) ಕಳುವಾಗಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅತ್ಯಂತ ಘಾತಕ ಸ್ವರೂಪದ ರೈಫಲ್ಗಳು (Assualt Rifles) ದುಷ್ಕರ್ಮಿಗಳ ಕೈಗೆ ಸಿಕ್ಕರೆ ಅನಾಹುತವೇ ಸಂಭವಿಸುತ್ತದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಉನ್ನತ ಅಧಿಕಾರಿಗಳು ಧಾವಿಸಿದ್ದು, ಕಟ್ಟೆಚ್ಚರದ ಸಂದೇಶ ರವಾನಿಸಲಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯ (Karnataka Police) ನೆರವಿನಿಂದ ವ್ಯಾಪಕವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ತರಬೇತಿಗೆಂದು ಮಧುರೈನಿಂದ ಬಂದಿರುವ ಐಟಿಬಿಪಿ 45ನೇ ಬೆಟಾಲಿಯನ್ನ ಯೋಧರಾದ ರಾಜೇಶ್ಕುಮಾರ್, ಸಂದೀಪ ಮೀನಾ ಅವರಿಗೆ ಸೇರಿದ ಎಕೆ-47 ರೈಫಲ್ಗಳು ಕಳುವಾಗಿವೆ. ಆಗಸ್ಟ್ 17ರಂದು ರಾತ್ರಿ ಮಲಗುವಾಗ ಎಕೆ-47 ರೈಫಲ್ಗಳನ್ನು ವಾಡಿಕೆಯಂತೆ ಭದ್ರತೆಯಲ್ಲಿಯೇ ಇರಿಸಲಾಗಿತ್ತು. ಬಿಗಿ ಭದ್ರತೆಯ ನಡುವೆಯೂ ಘಾತಕ ರೈಫಲ್ಗಳು ಯೋಧರ ಸುಪರ್ದಿಯಿಂದ ತಪ್ಪಿಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ರೈಫಲ್ ಪತ್ತೆಗಾಗಿ ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಐಟಿಬಿಪಿ ಅಧಿಕಾರಿಗಳು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜುಲೈ 29ರಿಂದ ಹಾಲಬಾವಿಯಲ್ಲಿ ಐಟಿಬಿಪಿ ವಿಶೇಷ ತರಬೇತಿ ಶಿಬಿರ ನಡೆಸುತ್ತಿದೆ. ಆಗಸ್ಟ್ 17ರಂದು ರಾತ್ರಿ ಈ ಇಬ್ಬರೂ ಸಿಬ್ಬಂದಿ ಬ್ಯಾರಕ್ನ 3ನೇ ಮಹಡಿಯಲ್ಲಿ ರೈಫಲ್ಗಳನ್ನು ಇರಿಸಿಕೊಂಡು ಮಲಗಿದ್ದರು. ಆಗ ಅವರಿಂದ ರೈಫಲ್ ಅಪಹರಿಸಲಾಗಿದೆ ಎಂದು ಅಧಿಕಾರಿಗಳು ದೂರು ನೀಡಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಐಟಿಬಿಪಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹುಡುಕಾಟಕ್ಕೆ ನೆರವಾಗುತ್ತಿದ್ದಾರೆ. ಡಿವೈಎಸ್ಪಿ ಪಿ.ವಿ.ಸ್ನೇಹಾ ಅವರೊಂದಿಗೆ ಎಸಿಪಿ ಎಸ್.ವಿ.ಗಿರೀಶ್, ಇನ್ಸ್ಪೆಕ್ಟರ್ ಐ.ಎಸ್.ಗುರುನಾಥ ಅವರನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.