Azadi ka amrit mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳು–ಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ. 1990ರಿಂದ 2014ರ ವರಗಿನ ಪ್ರಮುಖ ಘಟನೆಗಳು ಇಲ್ಲಿವೆ.
48. ಕಾಶ್ಮೀರಿ ಪಂಡಿತರ ಮೇಲೆ ದಾಳಿ
1990ರ ಜನವರಿ 19ರಿಂದ ಕಾಶ್ಮೀರ ಕಣಿವೆಯಲ್ಲಿ ದಂಗೆ ಪ್ರಾರಂಭವಾಯ್ತು. ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಹೆಚ್ಚು ದಾಳಿ ಇದೇ ವರ್ಷ ನಡೆಯಿತು. ಪರಿಣಾಮವಾಗಿ ಕಾಶ್ಮೀರಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಾರೆ. ಹೀಗೆ ವಲಸೆ ಹೋದ ಕಾಶ್ಮೀರಿ ಹಿಂದೂಗಳು ದೇಶದ ವಿವಿಧ ಭಾಗಗಳಲ್ಲಿ ನೆಲೆಸಲು ಆರಂಭಿಸುತ್ತಾರೆ. ಪಾಕಿಸ್ತಾನದ ಜೊತೆಗೆ ಭಾರತದ ಉದ್ವಿಗ್ನತೆ ಹೆಚ್ಚುತ್ತಾ ಸಾಗುತ್ತದೆ. ಜಮ್ಮು ಕಾಶ್ಮೀರದ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ರಾಜ್ಯಪಾಲರ ನೇರ ಆಡಳಿತವನ್ನು ಹೇರಲಾಯಿತು. ಇದೇ ವರ್ಷ ಮಾರ್ಚ್ ನಲ್ಲಿ ಕೊನೆಯ ಭಾರತೀಯ ಪಡೆಗಳನ್ನು ಶ್ರೀಲಂಕಾದಿಂದ ಹಿಂತೆಗೆದುಕೊಳ್ಳಲಾಯಿತು. ನವೆಂಬರ್ನಲ್ಲಿ ವಿ.ಪಿ. ಸಿಂಗ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಜನತಾ ದಳದ ಭಿನ್ನಮತೀಯ ಚಂದ್ರ ಶೇಖರ್ ಪ್ರಧಾನಿ ಹುದ್ದೆಗೇರಿದರು.
49. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ
ತಮಿಳುನಾಡಿನ ಪೆರಂಬದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಯಿತು. ಈ ದುರ್ಘಟನೆ ದೇಶದ ಜನತೆಗೆ ಅತಿ ದೊಡ್ಡ ಶಾಕ್ ಆಗಿತ್ತು. 90ರ ದಶಕದಲ್ಲಿ ಭಾರತಕ್ಕೆ ಅದೊಂದು ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಆಗ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿತ್ತು. ಚುನಾವಣೆ ಮಧ್ಯಭಾಗದಲ್ಲಿ ರಾಜೀವ್ ಗಾಂಧಿರನ್ನು ಎಲ್‌ಟಿಟಿಇ ಉಗ್ರರು ಹತ್ಯೆ ಮಾಡಿದ್ದರು. ರಾಜೀವ್ ಗಾಂಧಿಗೆ ಆಗ ನೀಡಿದ್ದ ಭದ್ರತೆಯನ್ನು ಹಿಂತೆೆಗೆದುಕೊಳ್ಳಲಾಗಿತ್ತು. ಭದ್ರತಾ ವೈಫಲ್ಯವೇ ರಾಜೀವ್ ಹತ್ಯೆಗೆ ಕಾರಣವೆಂದು ನಂತರ ತನಿಖಾ ಆಯೋಗ ವರದಿ ನೀಡಿತ್ತು. ರಾಜೀವ್ ಹತ್ಯೆಯ ಬಳಿಕ ದೇಶದಲ್ಲಿ ಕಾಂಗ್ರೆಸ್ ಪರ ಅನುಕಂಪದ ಅಲೆ ಸೃಷ್ಟಿಯಾಯಿತು.
ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿತ್ತು. ಪಿ.ವಿ ನರಸಿಂಹರಾವ್ ಪ್ರಧಾನಿಯಾದರು. ಇವರ ಆಡಳಿತದ ಕಾಲದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ ಬಹುತೇಕ ಖಾಲಿಯಾಗಿತ್ತು. ಐಎಂಎಫ್‌ಗೆ ಚಿನ್ನ ಅಡವಿಟ್ಟು ಹಣವನ್ನು ಸಾಲವಾಗಿ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇಂಥ ಸ್ಥಿತಿಯಲ್ಲಿ ಪಿ.ವಿ.ನರಸಿಂಹರಾವ್ ಹಾಗೂ ಹಣಕಾಸು ಮಂತ್ರಿ ಮನನೋಹನ್ ಸಿಂಗ್ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಮೂಲಕ ಭಾರತದ ಆರ್ಥಿಕತೆಗೆ ಹೊಸ ದಿಕ್ಕು ನೀಡಿದರು. ಬಳಿಕ ಭಾರತದ ಆರ್ಥಿಕತೆ ಚೇತರಿಸಿಕೊಂಡಿತ್ತು.
50. ಬಾಬ್ರಿ ಮಸೀದಿ ಧ್ವಂಸ
1992ರ ಡಿಸೆಂಬರ್ 6ರಂದು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕರಸೇವಕರು ಬಾಬ್ರಿ ಮಸೀದಿ ಧ್ವಂಸ ಮಾಡಿದರು. ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ 16ನೇ ಶತಮಾನದಲ್ಲಿ ನಿರ್ಮಿಸಿದ್ದ ಮಸೀದಿಯನ್ನು ಕರಸೇವಕರು ಕ್ಷಣಮಾತ್ರದಲ್ಲಿ ಕೆಡವಿದರು. ಈ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಘಟನೆ ರಾಷ್ಟ್ರವ್ಯಾಪಿ ಕೋಮುಗಲಭೆಗಳನ್ನು ಹುಟ್ಟುಹಾಕಿತ್ತು. ಇದೇ ವೇಳೆ ದೇಶಾದ್ಯಂತ ನಡೆದ ಕೋಮುಗಲಭೆಯಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದ್ದರು.
51. 1993 ಮುಂಬೈ ಸರಣಿ ಸ್ಪೋಟ
1993ರ ಮಾರ್ಚ್ 12ರಂದು ಇಡೀ ಮುಂಬೈ ನಗರ ನಡುಗಿ ಹೋಗಿತ್ತು. ಮಹಾನಗರದ 12 ಕಡೆ ಶಕ್ತಿಶಾಲಿ ಬಾಂಬ್‌ಗಳು ಸ್ಪೋಟಗೊಂಡು 250ಕ್ಕೂ ಹೆಚ್ಚು ಜನ ಅಸುನೀಗಿದ್ದರು. ನೂರಾರು ಮಂದಿ ಸಾವಿನ ದವಡೆಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿದ್ದರು. ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ದೇಶದಲ್ಲಿ ಮೊದಲ ಸಲ ಸಂಭವಿಸಿದ ಭಾರೀ ಪ್ರಮಾಣದ ಸರಣಿ ಬಾಂಬ್ ಸ್ಪೋಟ ಅದಾಗಿತ್ತು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಹಿಂದೂಪರ ಸಂಘಟನೆಗಳಿಂದ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ದ್ವೇಷ ತೀರಿಸಿಕೊಳ್ಳಲು ಮುಂಬೈನಲ್ಲಿ ಈ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ದಾವೂದ್ ಇಬ್ರಾಹಿಂ ಈ ಸ್ಪೋಟದ ಮಾಸ್ಟರ್ ಮೈಂಡ್ ಆಗಿದ್ದ. ಸರಣಿ ಬಾಂಬ್ ಸ್ಪೋಟಕ್ಕೆ ಪ್ಲ್ಯಾನ್ ಮಾಡಿ ತನ್ನ ಸಹಚರರ ಮೂಲಕ ಬಾಂಬ್ಗಳನ್ನು ಇಟ್ಟ ಬಳಿಕ ದಾವೂದ್ ಇಬ್ರಾಹಿಂ ಪಾಕಿಸ್ತಾನಕ್ಕೆ ಪರಾರಿಯಾಗಿದ್ದ. ಇಂದಿಗೂ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆ ತಂದು ಶಿಕ್ಷಿಸಲು ಸಾಧ್ಯವಾಗಿಲ್ಲ.
52. 1996ರಲ್ಲಿ ಅತಂತ್ರ ಲೋಕಸಭೆ ನಿರ್ಮಾಣ
1996ರ ಲೋಕಸಭಾ ಚುನಾವಣೆ ಫಲಿತಾಂಶ ಬಂದಾಗ ರಾಜಕೀಯ ಪಕ್ಷಗಳಿಗೆ ನಿರಾಶೆಯಾಗಿತ್ತು. ಏಕೆಂದರೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವೇ ಸಿಕ್ಕಿರಲಿಲ್ಲ. 1991 ರಿಂದ 96ರವರೆಗೆ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ವಿರೋಧ ಪಕ್ಷಗಳಿಗೂ ಸ್ಪಷ್ಟವಾದ ಜನಾದೇಶ ಸಿಕ್ಕಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ 140 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದ್ದರೆ, ಬಿಜೆಪಿ ಪಕ್ಷಕ್ಕೆ 161 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿತ್ತು. ಜನತಾದಳ ಪಕ್ಷ 46 ಕ್ಷೇತ್ರಗಳಲ್ಲಿ ಗೆದ್ದಿದ್ದರೇ, ಕಮ್ಯುನಿಸ್ಟ್ ಪಕ್ಷವು 32 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಹೀಗಾಗಿ ಆಗ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ ಅವರು ಬಿಜೆಪಿ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮೊದಲಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ 2 ವಾರಗಳಲ್ಲಿ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಷ್ಟ್ರಪತಿ ಸೂಚಿಸಿದ್ದರು. ಆದರೆ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅಗತ್ಯ ಸಂಖ್ಯಾಬಲ ಇಲ್ಲ ಎಂಬುದನ್ನು ಅರಿತಿದ್ದ ವಾಜಪೇಯಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ವಾಜಪೇಯಿ ಅವರಿಗೆ ಆಗ 200ಕ್ಕಿಂತ ಹೆಚ್ಚಿನ ಲೋಕಸಭಾ ಸದಸ್ಯರ ಬೆಂಬಲವೂ ಇರಲಿಲ್ಲ. ಹೀಗಾಗಿ ಮೊದಲ ಬಾರಿ 13 ದಿನಗಳ ಕಾಲ ಮಾತ್ರ ವಾಜಪೇಯಿ ದೇಶದ ಪ್ರಧಾನಿಯಾಗಿದ್ದರು.
53. 1996ರಲ್ಲಿ ಪ್ರಧಾನಿ ಹುದ್ದೆಗೇರಿದ ಮೊದಲ ಕನ್ನಡಿಗ ದೇವೇಗೌಡ
ವಾಜಪೇಯಿ ಸರ್ಕಾರ 13 ದಿನಕ್ಕೆ ಪತನವಾದ ಬಳಿಕ 2ನೇ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಆಸಕ್ತಿ ವಹಿಸಲಿಲ್ಲ. ಬದಲಿಗೆ ಜನತಾದಳ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸಿದರೆ ಬಾಹ್ಯ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಹೀಗಾಗಿ ಜನತಾದಳ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳು ಸಂಯುಕ್ತ ರಂಗ ರಚಿಸಿಕೊಂಡು ಸರ್ಕಾರ ರಚಿಸಲು ಮುಂದಾದವು. ಆಗ ವಿ.ಪಿ.ಸಿಂಗ್ ರನ್ನು ಸಂಯುಕ್ತ ರಂಗದಿಂದ ಪ್ರಧಾನಿ ಹುದ್ದೆ ಆಲಂಕರಿಸುವಂತೆ ಕೇಳಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ವಿ.ಪಿ.ಸಿಂಗ್ ಪ್ರಧಾನಿ ಹುದ್ದೆಗೆೇರಲು ಇಷ್ಟ ಇಲ್ಲದೆ ನಾಯಕರ ಕೈಗೆ ಸಿಗದೇ ದೆಹಲಿ ಹೊರವಲಯದಲ್ಲಿ ಕಾರಿನಲ್ಲಿ ಓಡಾಡಿಕೊಂಡಿದ್ದರು. ಪಶ್ಚಿಮ ಬಂಗಾಳದ ಸಿಎಂ ಆಗಿದ್ದ ಜ್ಯೋತಿಬಸು ಅವರು ಪ್ರಧಾನಿ ಹುದ್ದೆ ಆಲಂಕರಿಸಲು ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಒಪ್ಪಿಗೆ ನೀಡಲಿಲ್ಲ. ಕೊನೆಗೆ ಜನತಾದಳದಿಂದ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಯಿತು. ಆಗ ಕರ್ನಾಟಕದಲ್ಲಿ ದೇವೇಗೌಡ ನೇತೃತ್ವದಲ್ಲಿ ಜನತಾದಳ ಪಕ್ಷದ 16 ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇಡೀ ದೇಶದಲ್ಲಿ ಜನತಾದಳದಿಂದ 46 ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜನತಾದಳ ಲೋಕಸಭೆಯಲ್ಲಿ 3ನೇ ಅತಿ ದೊಡ್ಡ ಪಕ್ಷವಾಗಿತ್ತು. ಹೀಗಾಗಿ ಕನ್ನಡಿಗ ಎಚ್.ಡಿ. ದೇವೇಗೌಡ ಅನಿರೀಕ್ಷಿತವಾಗಿ ದೇಶದ ಪ್ರಧಾನಿ ಹುದ್ದೆಗೇರಿದ್ದರು. ದೇಶದ ಪ್ರಧಾನಿ ಹುದ್ದೆಗೇರಿದ ಮೊದಲ ಕನ್ನಡಿಗ ಎಂಬ ಖ್ಯಾತಿ ದೇವೇಗೌಡರಿಗೆ ಇದೆ. ದೇವೇಗೌಡರು 11 ತಿಂಗಳು ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದರು. ದೆಹಲಿಯ ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ದೇವೇಗೌಡ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿ ಹಿಂತೆಗೆದುಕೊಂಡರು. 1997ರ ಏಪ್ರಿಲ್ 21ರಂದು ದೇವೇಗೌಡ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ದೇವೇಗೌಡ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ ಐ.ಕೆ.ಗುಜ್ರಾಲ್ ಕಾಂಗ್ರೆಸ್ ಬೆಂಬಲ ಪಡೆದು ಪ್ರಧಾನಿ ಹುದ್ದೆಗೇರಿದ್ದರು. ಆದರೆ 1998ರ ವೇಳೆಗೆ ಗುಜ್ರಾಲ್ ಸರ್ಕಾರಕ್ಕೂ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಂಡಿತ್ತು. ಇದರಿಂದ ಐ.ಕೆ.ಗುಜ್ರಾಲ್ ಸರ್ಕಾರವು ಪತನವಾಯಿತು.
54. 1998ರಲ್ಲಿ ಬಿಜೆಪಿಯ 2ನೇ ಸರಕಾರ
1998 ರಲ್ಲಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ತನ್ನ 2ನೇ ಸರ್ಕಾರವನ್ನು ರಚಿನೆ ಮಾಡಿತು. 1998ರಲ್ಲಿ 2ನೇ ಬಾರಿಗೆ ಪ್ರಧಾನಿಯಾಗಿ ವಾಜಪೇಯಿ ಅಧಿಕಾರ ಸ್ವೀಕಾರಿಸಿದರು. 13 ತಿಂಗಳ ಬಳಿಕ ತಮಿಳುನಾಡಿನ ಎಐಎಡಿಎಂಕೆ ಮೈತ್ರಿ ಕಡಿದುಕೊಂಡ ಬಳಿಕ ವಾಜಪೇಯಿ ಸರಕಾರ ಪತನಗೊಂಡಿತು. ಯಾವ ಪಕ್ಷಗಳೂ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ವಾಜಪೇಯಿ ಉಸ್ತುವಾರಿ ಪ್ರಧಾನಿಯಾಗಿದ್ದರು. 1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಮುನ್ನಡೆ ಸಾಧಿಸಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ರಚಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಮತ್ತೆ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ಬಿಜೆಪಿಯ ಚುನಾವಣಾ ಚಿಹ್ನೆ ಕಮಲದ ಹೂವು. ಬಿಜೆಪಿಯ ಕಮಲದ ಹೂವು ಹಿಂದೂ ಸಂಪ್ರದಾಯದೊಂದಿಗೆ ಸಂಬಂಧ ಹೊಂದಿದೆ. 1980 ರಲ್ಲಿ ಬಿಜೆಪಿ ರಚನೆಯಾದ ನಂತರ ಪಕ್ಷವು 1984ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿತು. ಆಗ ಬಿಜೆಪಿ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.
55. 1998 ರಲ್ಲಿ ಆಪರೇಷನ್ ಶಕ್ತಿ
ಭಾರತವು 1998 ರ ಮೇ ತಿಂಗಳಲ್ಲಿ “ಆಪರೇಷನ್ ಶಕ್ತಿ” ಎಂಬ ಸಂಕೇತನಾಮದಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಐದು ಪರಮಾಣು ಬಾಂಬ್ ಪರೀಕ್ಷೆಗಳ ಸರಣಿಯನ್ನು ನಡೆಸಿತು. ಭಾರತದ ಮಿಸೈಲ್‌ಮ್ಯಾನ್ ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಆಪರೇಷನ್ ಶಕ್ತಿ ನಡೆದಿತ್ತು. ಇದು ಭಾರತ ಪೂರ್ಣ ಪ್ರಮಾಣದ ಪರಮಾಣು ರಾಷ್ಟ್ರವಾಗಲು ಕಾರಣವಾಯಿತು. ಅಣು ಪರೀಕ್ಷೆ ನಡೆಸಿದ ಕಾರಣಕ್ಕೆ ಅಮೆರಿಕವು ಭಾರತದ ಮೇಲೆ ನಿರ್ಬಂಧ ಹೇರಿತ್ತು. ಎರಡನೇ ಹಂತದ ಪರೀಕ್ಷೆಯ ವಿವರ ಬಹಿರಂಗವಾಗುತ್ತಿದ್ದಂತೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿತ್ತು. ಇದು ಭಾರತ ನಡೆಸಿದ ಪರಮಾಣು ಪರೀಕ್ಷೆಯ ಎರಡನೇ ನಿದರ್ಶನವಾಗಿದೆ. ವಿಜ್ಞಾನಿಗಳು ಸೈನಿಕರ ಸಮವಸ್ತ್ರದಲ್ಲಿ ಕಾರ್ಯನಿರ್ವಹಿಸಿದ್ದ ಕಾರಣ ಮತ್ತು ಬಹುತೇಕ ಕಾರ್ಯಾಚರಣೆ ರಾತ್ರಿ ವೇಳೆ ನಡೆದಿದ್ದರಿಂದ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎನ ಉಪಗ್ರಹಗಳ ಕಣ್ತಪ್ಪಿಸಲು ಭಾರತಕ್ಕೆ ಸಾಧ್ಯವಾಗಿತ್ತು. ಮೊದಲ ಪರಮಾಣು ಪರೀಕ್ಷೆಗೆ ಸ್ಮೈಲಿಂಗ್ ಬುದ್ಧ ಎಂಬ ಸೀಕ್ರೆಟ್ ಕೋಡ್ ನೀಡಿ 1974 ಮೇನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲಾಗಿತ್ತು.
56. ದೆಹಲಿ – ಲಾಹೋರ್ ಬಸ್ ಸೇವೆ
ಭಾರತ ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ದೆಹಲಿ -ಲಾಹೋರ್ ಬಸ್ ಸೇವೆಗೆ ಅಧಿಕೃತ ಚಾಲನೆ ನೀಡಲಾಯಿತು. ಪಾಕಿಸ್ತಾನದ ಲಾಹೋರ್ ನಗರ ಹಾಗೂ ಭಾರತದ ಗಡಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಿತ್ತು. ಇದಕ್ಕೆ 1999ರ ಫೆ.19 ರಂದು ಚಾಲನೆ ನೀಡಲಾಗಿತ್ತು. ಲಾಹೋರ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಲಿದ್ದ ಅಂದಿನ ಭಾರತೀಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಸ್ಸಿನಲ್ಲೇ ವಾಘಾ ಗಡಿಗೆ ಬಂದಿದ್ದರು. ವಾಘಾ ಗಡಿಯಲ್ಲಿ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ವಾಜಪೇಯಿಯವರನ್ನು ಬರಮಾಡಿಕೊಂಡಿದ್ದರು. 1999ರಲ್ಲಿ ಆರಂಭಗೊಂಡ ಈ ಬಸ್ ಸೇವೆ ಕಾರ್ಗಿಲ್ ಯುದ್ಧದ ವೇಳೆಯೂ ರದ್ದಾಗಿರಲಿಲ್ಲ. 2001ರಲ್ಲಿ ಸಂಸತ್ ಭವನದ ಮೇಲೆ ದಾಳಿಯ ವೇಳೆ ಮಾತ್ರ 2 ವರ್ಷ ಸ್ಥಗಿತಗೊಂಡಿತ್ತಾದರೂ 2003ರಲ್ಲಿ ಮತ್ತೆ ಸಂಚಾರ ಆರಂಭವಾಗಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ನಿರ್ಧಾರದಿಂದ ಹತಾಶಗೊಂಡ ಪಾಕಿಸ್ತಾನ, ಉಭಯ ದೇಶಗಳ ನಡುವಿನ ಬಸ್ ಸಂಚಾರವನ್ನು ಮತ್ತೆ ರದ್ದುಗೊಳಿಸಿತು.
57. ಕಾರ್ಗಿಲ್ ಯುದ್ಧ
1999ರ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ಆರಂಭವಾಯಿತು. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್ ಜಿಲ್ಲೆಯಲ್ಲಿ ಲೈನ್ ಆಫ್ ಕಂಟ್ರೋಲ್(ಎಲ್‌ಒಸಿ) ಮೂಲಕ ಒಳ ನುಸುಳಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಭಾರತೀಯ ಸೇನೆ ತನ್ನ ದಾಳಿಯನ್ನು ತೀವ್ರ ಗೊಳಿಸಿತು. ಪಾಕಿಸ್ತಾನದ ಈ ನಡೆ ಭಾರತಕ್ಕೆ ಸಂಪೂರ್ಣವಾಗಿ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ಸೇನೆಯು ಆತಂಕಕ್ಕೆ ಒಳಗಾಗದೆ ‘ಆಪರೇಷನ್ ವಿಜಯ್’ ಆರಂಭಿಸಿ ಯಶಸ್ವಿಯಾಗಿ ಮುಗಿಸಿತು. 60 ದಿನಗಳ ಸತತ ಯುದ್ಧ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದಿಂದಾಗಿ ಭಾರತೀಯ ಸೇನೆ ಅಂತಿಮವಾಗಿ ಟೈಗರ್ ಹಿಲ್ ಅನ್ನು ಮರು ಸ್ವಾಧೀನಕ್ಕೆ ಪಡೆದು ಪಾಕಿಸ್ತಾನಿ ಸೈನಿಕರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಒಟ್ಟು 150 ಕಿ.ಮೀ. ವ್ಯಾಪ್ತಿಯ ಸೀಮಿತ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವೇ ಕಾರ್ಗಿಲ್ ಯುದ್ಧ. ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಕಾಶ್ಮೀರದ ಪರ್ವತ ಪ್ರದೇಶದಲ್ಲಿ ಮೈಕೊರೆಯುವ ಚಳಿ ಇರುತ್ತದೆ. ಮೈನಸ್ ಡಿಗ್ರಿ ಚಳಿಯಲ್ಲಿ ನಮ್ಮ ವೀರ ಯೋಧರು ಗಡಿ ಕಾಯಬೇಕಾಗುತ್ತದೆ. ಈ ಮೈ ಕೊರೆಯುವ ಚಳಿಯಿರುವಾಗ ಗಡಿ ನಿಯಂತ್ರಣ ರೇಖೆಯ ಎರಡು ಬದಿಗಳಲ್ಲಿ ಕೆಲವು ಮುಂಚೂಣಿ ಶಿಬಿರಗಳನ್ನು ತೊರೆಯುವುದು, ಅತಿಕ್ರಮೇಣಕ್ಕೆ ದಾರಿಯಾಗದಂತೆ ಗಸ್ತನ್ನು ಕುಂಠಿತಗೊಳಿಸುವುದು ಪಾಕಿಸ್ತಾನ, ಭಾರತ ಎರಡೂ ಸೇನೆಗಳ ವಾಡಿಕೆ. ಆದರೆ 1999ರ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನ ಸೇನೆಯು ತನ್ನ ನೀಚ ಹಾಗೂ ಶಕುನಿಯಂತಹ ಕುತಂತ್ರ ಬುದ್ಧಿ ತೋರಿಸಿ ಭಾರತದ ಗಡಿ ನಿಯಂತ್ರಣ ರೇಖೆಯ ಬದಿಯಲ್ಲಿರುವ ಶಿಬಿರಗಳ ಮೇಲೆ ಆಕ್ರಮಣಕ್ಕೆ ತನ್ನ ಪಡೆಗಳನ್ನು ಕಳಿಸಿತ್ತು.
58. ವಿಮಾನ ಅಪಹರಣ
1999ರಲ್ಲಿ ಐಸಿ-814 ವಿಮಾನವನ್ನು ಪಾಕಿಸ್ತಾನಿ ಉಗ್ರರು ಹೈಜಾಕ್ ಮಾಡಿದ್ದರು. 176 ಪ್ರಯಾಣಿಕರನ್ನು ಅಪಹರಣಕಾರರು ಏಳು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿದ್ದರು. ವಿಮಾನವು ಕಠ್ಮಂಡುವಿನಿಂದ ಹೊರಟು ದೆಹಲಿಗೆ ಹೋಗುತ್ತಿದ್ದಾಗ ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್ಗೆ ಕೊಂಡೊಯ್ಯಲಾಯಿತು. ಈ ಅಪಹರಣ ಕಾರ್ಯಾಚರಣೆಯನ್ನು ಪಾಕಿಸ್ತಾನದ ಮಿಲಿಟರಿ ಗುಪ್ತಚರ ಸಂಸ್ಥೆ, ಐಎಸ್‌ಐ ಬೆಂಬಲಿಸಿತ್ತು. ಭಾರತ ವಶದಲ್ಲಿದ್ದ ಮೂವರು ಭಯೋತ್ಪಾದಕರ ವಿನಿಮಯವಾದ ಬಳಿಕ ವಿಮಾನ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಯಿತು. ಈ ಮೂವರು ಉಗ್ರರ ಪೈಕಿ ಇಬ್ಬರು ಇನ್ನೂ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗಾಡುತ್ತಲೇ ಇದ್ದಾರೆ. ಅವರಲ್ಲಿ ಒಬ್ಬ ಮುಷ್ತಾಖ್ ಅಹಮದ್ ಝರ್ಗಾರ್ ಅಲಿಯಾಸ್ ಮುಷ್ತಾಖ್ ಲತ್ರಮ್. ಈತ ಕಾಶ್ಮೀರ ಮೂಲದ ಉಗ್ರ ಸಂಘಟನೆ ಅಲ್ ಉಮರ್ ಮುಜಾಹಿದೀನ್ ನೇತೃತ್ವ ವಹಿಸಿದ್ದಾನೆ. ಇನ್ನೊಬ್ಬ ಮೌಲಾನಾ ಮಸೂದ್ ಅಜರ್. ಈತ ಭಾರತದ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೆ ಜೈಶ್ ಎ ಮೊಹಮದ್ ಎಂಬ ಉಗ್ರ ಸಂಘಟನೆಯನ್ನೇ ಹುಟ್ಟುಹಾಕಿದ್ದಾನೆ. ಇನ್ನೊಬ್ಬ ಉಗ್ರ ಶೇಖ್ ಉಮರ್ ಇಂಗ್ಲೆಂಡ್ ಮೂಲದವನಾಗಿದ್ದ. ಈತನನ್ನು ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅವರನ್ನು ಹತ್ಯೆಗೈದ ಆರೋಪದಲ್ಲಿ ಪಾಕಿಸ್ತಾನವೇ ಬಂಧಿಸಿತ್ತು. ಕೊನೆಗೆ ಪಾಕಿಸ್ತಾನದ ನ್ಯಾಯಾಲಯ ಈತನಿಗೆ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದೆ. ಆದರೆ ಮುಷ್ತಾಖ್ ಅಹಮದ್ ಮತ್ತು ಮೌಲಾನಾ ಮಸೂದ್ ಅಜರ್ ಇನ್ನೂ ಪಾಕಿಸ್ತಾನದಲ್ಲಿದ್ದು, ಭಾರತದ ಮೇಲೆ ಉಗ್ರ ದಾಳಿಗೆ ಸಂಚು ರೂಪಿಸುತ್ತಲೇ ಇದ್ದಾರೆ.
59. ಲಾಹೋರ್ ಒಪ್ಪಂದ
ಭಾರತ, ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಆಕಸ್ಮಿಕ ಮತ್ತು ಅನಧಿಕೃತವಾಗಿ ಅಣ್ವಸ್ತ್ರ ಬಳಕೆ ತಡೆಗೆ ಎರಡೂ ರಾಷ್ಟ್ರಗಳು ಮಾಡಿಕೊಂಡ ಮಹತ್ವದ ಒಪ್ಪಂದವೇ ಲಾಹೋರ್ ಒಪ್ಪಂದವಾಗಿದೆ. 1999ರ ಫೆಬ್ರುವರಿ 21ರಂದು ಲಾಹೋರ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ವಾಜಪೇಯಿ ಮತ್ತು ನವಾಜ್ ಶರೀಫ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಜೊತೆಗೆ 1998ರಲ್ಲಿ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದ ಅಣ್ವಸ್ತ್ರ ಅತಿಕ್ರಮಣ ತಡೆ ಒಪ್ಪಂದವನ್ನು ಮುಂದುವರಿಸಿಕೊಂಡು ಹೋಗಲೂ ನಿರ್ಧರಿಸಲಾಯಿತು. ಈ ಒಪ್ಪಂದಕ್ಕೆ ಅಂತಾರಾಷ್ಟ್ರೀಯ ಸಮುದಾಯದಿಂದ ಶ್ಲಾಘನೆ ವ್ಯಕ್ತವಾಗಿತ್ತು. ಇದೇ ವೇಳೆ ದೆಹಲಿ, ಲಾಹೋರ್ ಬಸ್ ಸೇವೆ ಆರಂಭಗೊಂಡಿತ್ತು. ಕೆಲವೇ ತಿಂಗಳುಗಳಲ್ಲಿ ಅಂದರೆ 1999ರ ಮೇ ತಿಂಗಳಿನಲ್ಲಿ ಪಾಕಿಸ್ತಾನದ ಸೈನಿಕರು ಮತ್ತು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದರು. ಮುಂದೆ ಕಾರ್ಗಿಲ್ ಯುದ್ಧವೇ ನಡೆಯಿತು. ವಾಜಪೇಯಿ ಅವರು ‘ಆಪರೇಷನ್ ವಿಜಯ್’ ಘೋಷಿಸಿದ್ದರು.
60. ಮೂರು ಹೊಸ ರಾಜ್ಯಗಳ ಉದಯ
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ (2000ನೇ ಇಸವಿ) ಶಾಂತಿಯುತವಾಗಿ ಛತ್ತೀಸ್‌ಗಢ, ಉತ್ತರಾಖಂಡ ಮತ್ತು ಜಾರ್ಖಂಡ್ ಎಂಬ ಮೂರು ಹೊಸ ರಾಜ್ಯಗಳ ಉದಯವಾಯಿತು. ಛತ್ತೀಸ್‌ಗಢ ರಾಜ್ಯವನ್ನು ನವೆಂಬರ್ 1ರಂದು ರಚನೆ ಮಾಡಲಾಯಿತು. ನವೆಂಬರ್ 9 ರಂದು ಉತ್ತರಖಂಡ ಮತ್ತು ನವೆಂಬರ್ 15ರಲ್ಲಿ ಜಾರ್ಕಾಂಡ್ ರಾಜ್ಯದ ರಚನೆ ಮಾಡಲಾಯಿತು. ಛತ್ತೀಸ್‌ಗಢವನ್ನು ಮಧ್ಯಪ್ರದೇಶದಿಂದ, ಉತ್ತರಾಖಂಡವನ್ನು ಉತ್ತರ ಪ್ರದೇಶದಿಂದ ಮತ್ತು ಜಾರ್ಖಂಡ್ ಅನ್ನು ಬಿಹಾರದಿಂದ ಬೇರ್ಪಡಿಸಲಾಗಿತ್ತು. ಮೂರು ಹೊಸ ರಾಜ್ಯಗಳ ರಚನೆಯಿಂದ ಭಾರತದ ರಾಜ್ಯಗಳ ಸಂಖ್ಯೆ 25 ರಿಂದ 28ಕ್ಕೆ ಏರಿತು. ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಯಾವುದೇ ಗೊಂದಲವಿಲ್ಲದೆ ಮೂರು ರಾಜ್ಯಗಳನ್ನು ರಚಿಸುವ ವಾಜಪೇಯಿ ಅವರ ಸಾಮರ್ಥ್ಯವನ್ನು ಶ್ಲಾಘಿಸಿದ್ದರು. (ಮುಂದುವರಿಯುವುದು)
ವರದಿ: ಚಂದ್ರಮೋಹನ್
Published On - 10:21 am, Sun, 14 August 22