ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಓರ್ವ ಹೆಚ್ಚುವರಿ ಆಯುಕ್ತರು, 10 ಡಿಸಿಪಿಗಳು, 19 ಎಸಿಪಿಗಳು ಭದ್ರತಾ ಕಾರ್ಯದ ಮುಂಚೂಣಿಯಲ್ಲಿರಲಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಬೆಂಗಳೂರಿನಲ್ಲಿ ವಿಜ್ರಂಭಣೆಯಿಂದ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರಾಜಕೀಯ ಪಕ್ಷಗಳು ಕೂಡ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಂದೆಡೆ ಆಡಳಿತ ಪಕ್ಷ ಬಿಜೆಪಿ ಜಾಥಾ ಆಯೋಜಿಸಿದ್ದು, ಇನ್ನೊಂದೆಡೆ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋವಸ್ತ್ ಮಾಡಲಾಗುತ್ತಿದೆ.
ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಓರ್ವ ಹೆಚ್ಚುವರಿ ಪೊಲೀಸ್ ಆಯುಕ್ತರು, 10 ಡಿಸಿಪಿಗಳು, 19 ಎಸಿಪಿಗಳು, 50 ಇನ್ಸ್ಪೆಕ್ಟರ್ಗಳು, 100 ಪಿಎಸ್ಐ, 15 ಮಹಿಳಾ ಪಿಎಸ್ ಐ, 80 ಎಎಸ್ಐ, 650 ಕಾನ್ಸ್ಟೇಬಲ್ಗಳು ಮತ್ತು ಗಸ್ತಿನಲ್ಲಿ 150 ಪೊಲೀಸರು ಇರಲಿದ್ದಾರೆ. 10 ಕೆಎಸ್ಆರ್ಪಿ ತುಕಡಿ, 1 ಕ್ಯುಆರ್ಟಿ, 1 ಡಿಸ್ ಕ್ಯುಆರ್ಟಿ 1, ಡಿ ಸ್ವಾಟ್ ತುಕಡಿ, ಕ್ಷಿಪ್ರ ಕಾರ್ಯಪಡೆ 1 ಸೇರಿದಂತೆ 1 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.
ಈದ್ಗಾ ಮೈದಾನದಲ್ಲಿ ಫುಲ್ ಸೆಕ್ಯುರಿಟಿ
ವಿವಾದಿತ ಸ್ಥಳ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಕಂದಾಯ ಇಲಾಖೆಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಓರ್ವ ಹೆಚ್ಚುವರಿ ಪೊಲೀಸ್ ಆಯುಕ್ತರು, 3 ಡಿಸಿಪಿಗಳು, 6 ಎಸಿಪಿಗಳು, 15 ಇನ್ಸ್ಪೆಕ್ಟರ್, 45 ಪಿಎಸ್ಐ, 5 ಮಹಿಳಾ ಪಿಎಸ್ಐ, 30 ಎಎಸ್ಐ, 300 ಕಾನ್ಸ್ಟೇಬಲ್ಗಳು, 20 ಗಸ್ತಿನಲ್ಲಿರುವ ಪೊಲೀಸರು, 5 ಕೆಎಸ್ಆರ್ಪಿ ತುಕಡಿ, 2 ಸಿಎಆರ್ ತುಕಡಿ, ಆರ್ಎಎಫ್ 1 ತುಕಡಿ ನಿಯೋಜಿಸಲಾಗಿದೆ.
ಕಾಂಗ್ರೆಸ್ ಕಾಲ್ನಡಿಗೆಗೆ ಪೊಲೀಸ್ ಭದ್ರತೆ
ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾದ ಕಾಲ್ನಡಿಗೆ ಜಾಥಾವು ಪೊಲೀಸ್ ಭದ್ರತೆಯೊಂದಿಗೆ ಸಾಗಲಿದೆ. 4 ಡಿಸಿಪಿಗಳು, 15 ಎಸಿಪಿಗಳು, 20 ಇನ್ಸ್ಪೆಕ್ಟರ್ಗಳು, 24 ಪಿಎಸ್ಐ, 3 ಮಹಿಳಾ ಪಿಎಸ್ಐ, 15 ಎಎಸ್ಐ, 500 ಕಾನ್ಸ್ಟೇಬಲ್ಗಳು, 5 ಕೆಎಸ್ಆರ್ಪಿ ತುಕಡಿ, 6ಸಿಎಆರ್ ತುಕಡಿ ನಿಯೋಜಿಸಲಾಗುತ್ತಿದೆ.
Published On - 9:26 am, Sun, 14 August 22