ಸ್ವಾತಂತ್ರ್ಯದ ಅಮೃತ ಮಹೋತ್ಸವ: ನಾಳೆ ಇವರಿಗೆಲ್ಲ ಮೆಟ್ರೋದಲ್ಲಿ ಉಚಿತ ಪ್ರಯಾಣ
Bangalore News: ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾರ್ವಜನಿಕರಿಗೆ ಪಕ್ಷದ ಕಡೆಯಿಂದ ಉಚಿತ ಮೆಟ್ರೋ ಪ್ರಯಾಣ ಕಲ್ಪಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರಿನಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಉಚಿತ ಪ್ರಯಾಣವನ್ನು ಕಲ್ಪಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar), ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗಿಯಾಗುವವರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುತ್ತಿದೆ. ನಮ್ಮ ಮೆಟ್ರೋಗೆ ಹಣ ಪಾವತಿಸಿ ಕೂಪನ್ ಪಡೆದಿದ್ದೇನೆ. ನಮ್ಮ ಮೆಟ್ರೋದವರು ಕೂಡ ಸಹಕಾರ ನೀಡಿದ್ದಾರೆ ಎಂದರು.
ನಾಳೆ (ಆಗಸ್ಟ್ 15ರಂದು) ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಈ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕಾಂಗ್ರೆಸ್ ಕಡೆಯಿಂದ ಉಚಿತ ಪ್ರಯಾಣ ಕಲ್ಪಿಸಲಾಗುತ್ತಿದೆ. ಸ್ವಾತಂತ್ರ್ಯ ನಡಿಗೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವೂ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಮುಕ್ತಾಯದ ಬಳಿಕವೂ ಉಚಿತವಾಗಿ ಮೆಟ್ರೋದಲ್ಲಿ ತೆರಳಬಹುದು. ಇದನ್ನು ಸಾರ್ವಜನಿಕರು ತಪ್ಪದೇ ಉಪಯೋಗಿಸುವ ಮೂಲಕ ಸಹಾರ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ನಗರದ ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಆಯೋಜಿಸಿದೆ. ಈ ಬಾರಿ ಅಮೃತ ಮಹೋತ್ಸವದ ವಿಶೇಷತೆ ಹಿನ್ನೆಲೆ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಪ್ರವೇಶ ನೀಡಲಾಗುತ್ತಿದ್ದು, ಇದಕ್ಕಾಗಿ ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗುತ್ತಿದೆ. ಅಷ್ಟೇ ಅಲ್ಲದೆ ನಾಳೆ ವಿವಿಧ ಕಡೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದೆ.
Published On - 7:21 am, Sun, 14 August 22