ಅಕ್ಷರಗಳನ್ನೂ ಮಾತನಾಡಿಸುವ ಬಾದಲ್ ನಂಜುಂಡಸ್ವಾಮಿ.. ಬೆರಗು ಮೂಡಿಸುವ ಕಲಾವಿದನ ಕೈಚಳಕ!

| Updated By: Lakshmi Hegde

Updated on: Dec 26, 2020 | 2:59 PM

‘ಅ’ ಅಕ್ಷರದೊಳಗೆ ಅಳಿಲನ್ನು ಕೂರಿಸಿ, ‘ಆ’ದಲ್ಲಿ ಆನೆ ಸೊಂಡಿಲು ಮೂಡಿಸಿ, ‘ಇ’ಯಲ್ಲಿ ಇಲಿಯನ್ನಿಟ್ಟು, ‘ಈ’ಯಲ್ಲಿ ಈರುಳಿಯನ್ನೇ ಬೆಳೆಸಿರುವ ಬಾದಲ್​ ನಂಜುಂಡಸ್ವಾಮಿ ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಸರಿಹೊಂದುವ ಚಿತ್ರಗಳನ್ನು ಆಯಾ ಅಕ್ಷರದಲ್ಲೇ ಬಿಡಿಸಿದ್ದಾರೆ.

ಅಕ್ಷರಗಳನ್ನೂ ಮಾತನಾಡಿಸುವ ಬಾದಲ್ ನಂಜುಂಡಸ್ವಾಮಿ.. ಬೆರಗು ಮೂಡಿಸುವ ಕಲಾವಿದನ ಕೈಚಳಕ!
ಬಾದಲ್​ ನಂಜುಂಡಸ್ವಾಮಿ ಅವರ ಕೈಚಳಕದಲ್ಲಿ ಮೂಡಿಬಂದ ಕನ್ನಡ ವರ್ಣಮಾಲೆ
Follow us on

ಮೈಸೂರು: ಒಂದು ಚಿತ್ರ ನೂರು ಪದಗಳಿಗೆ ಸಮಾನ ಎಂಬ ಮಾತಿದೆ. ಮಾತಲ್ಲಿ ಹೇಳಬೇಕಾದ್ದನ್ನು ಚಿತ್ರವೇ ಹೇಳಿದರೆ ಅದು ಅತ್ಯಂತ ಪರಿಣಾಮಕಾರಿ ಸಂವಹನ ಆಗಬಲ್ಲದು. ಗುಂಡಿ ಬಿದ್ದ ರಸ್ತೆ ನರಕಕ್ಕೆ ಹಾದಿಯಾಗಿದೆ ಎಂದು ಹೇಳುವುದಕ್ಕೂ ಆ ರಸ್ತೆಯಲ್ಲೇ ನರಕದ ಚಿತ್ರಣವನ್ನು ಮೂಡಿಸಿ ಅದರ ಗಂಭೀರತೆಯನ್ನು ಅರ್ಥ ಮಾಡಿಸುವುದಕ್ಕೂ ಅಜಗಜಾಂತರವಿದೆ. ಕರ್ನಾಟಕದಲ್ಲಿ ಇಂತಹ ವಿನೂತನ ಪ್ರಯತ್ನಗಳಿಂದ ಸದ್ದು ಮಾಡಿದ ಕಲಾವಿದರಲ್ಲಿ ಬಾದಲ್ ನಂಜುಂಡಸ್ವಾಮಿ ಪ್ರಮುಖರು.

ಗುಂಡಿ ಬಿದ್ದ ರಸ್ತೆಯಲ್ಲಿ ಮೊಸಳೆ, ಬಾಯ್ತೆರೆದ ಮೋರಿಯಲ್ಲಿ ರಕ್ಕಸನ ಚಿತ್ರ, ಮುರಿದು ನಿಂತ ಸೂಚನಾ ಫಲಕಕ್ಕೊಂದು ಬ್ಯಾಂಡೇಜು, ರಸ್ತೆಯ ನಡುವಲ್ಲಿ 3ಡಿ ಕೊರೊನಾ ವೈರಸ್..! ಹೀಗೆ ಸಮಸ್ಯೆ ಯಾವುದೇ ಇದ್ದರೂ ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಕಲೆಯ ಮೂಲಕ ಪ್ರಸ್ತುತ ಪಡಿಸುವುದು ಬಾದಲ್​ ಅವರ ವೈಶಿಷ್ಟ್ಯ.

ಇದುವರೆಗೆ ಇಂತಹ ಅನೇಕ ಮಾತನಾಡುವ ಚಿತ್ರಗಳನ್ನು ಬಿಡಿಸಿ ಸದ್ದು ಮಾಡುತ್ತಿದ್ದ ಕಲಾವಿದ ಬಾದಲ್​ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್​ ಮತ್ತು ಶ್ರವಣ ಸಂಸ್ಥೆಯ ಮಕ್ಕಳಿಗಾಗಿ ಕ್ಯಾಲಿಗ್ರಫಿ ಮೂಲಕ ಕನ್ನಡ ವರ್ಣಮಾಲೆಯನ್ನು ಕಲಾತ್ಮಕವಾಗಿ ಗೋಡೆಯ ಮೇಲೆ ಮೂಡಿಸಿದ್ದಾರೆ.

‘ಅ’ ಅಕ್ಷರದೊಳಗೆ ಅಳಿಲನ್ನು ಕೂರಿಸಿ, ‘ಆ’ದಲ್ಲಿ ಆನೆ ಸೊಂಡಿಲು ಮೂಡಿಸಿ, ‘ಇ’ಯಲ್ಲಿ ಇಲಿಯನ್ನಿಟ್ಟು, ‘ಈ’ಯಲ್ಲಿ ಈರುಳಿಯನ್ನೇ ಬೆಳೆಸಿರುವ ಬಾದಲ್​ ನಂಜುಂಡಸ್ವಾಮಿ, ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಸರಿಹೊಂದುವ ಚಿತ್ರಗಳನ್ನು ಆಯಾ ಅಕ್ಷರದಲ್ಲಿ  ಕೈಬರಹದಲ್ಲೇ  ಬಿಡಿಸಿದ್ದಾರೆ. ಈ ಮೂಲಕ ಅಕ್ಷರವನ್ನು ನೋಡಿದ ತಕ್ಷಣ ಅದನ್ನು ಗ್ರಹಿಸುವುದಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ.

ಬಾದಲ್​ ಅವರಿಗೆ ಕ್ಯಾಲಿಗ್ರಫಿ ಹೊಸದಲ್ಲದೇ ಇದ್ದರೂ ವರ್ಣಮಾಲೆಯಲ್ಲಿ ಇಂತಹ ಪ್ರಯತ್ನ ಮಾಡಿದ್ದು ಇದೇ ಮೊದಲಾಗಿದೆ. ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಈ ವಾಲ್​ ಪೇಂಯ್ಟಿಂಗ್ ಕೆಲಸ ಮುಗಿಸಿರುವ ಬಾದಲ್​ ನಂಜುಂಡಸ್ವಾಮಿ ಡಿಸೆಂಬರ್ 25ರಂದು ಇದನ್ನು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ. ವರ್ಣಮಾಲೆಯಲ್ಲಿ ಬೆರಗು ಮೂಡಿಸುವಂತೆ ಚಿತ್ರ ಬಿಡಿಸಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಸಾವಿರಾರು ಜನರು ಈಗಾಗಲೇ ಹಂಚಿಕೊಂಡಿದ್ದಾರೆ.

ಅಕ್ಷರ ವಿನ್ಯಾಸದಲ್ಲಿಯೇ ಭಾವನೆ ಬಿಂಬಿಸುವ ಕೈಚಳಕ: ಕನ್ನಡಕ್ಕೂ ಕಾಲಿಟ್ಟ ‘ಕ್ಯಾಲಿಗ್ರಾಮ್’