ಬಾಗಲಕೋಟೆ: ಅವು ಹೆಸರಿಗೆ ಪಾನ್, ಬೀಡಾ ಅಂಗಡಿಗಳು. ಆದ್ರೆ ಅಲ್ಲಿ ಮಾರಾಟ ಆಗೋದೇ ಬೇರೆ. ಅಕ್ರಮ ಮದ್ಯ ಮಾರಾಟದಿಂದ ಸುತ್ತಮುತ್ತಲಿನ ಊರಿನ ಯುವಕರು ಹಾದಿ ತಪ್ಪುತ್ತಿದ್ದಾರೆ. ಹೀಗಾಗಿ ಆ ಯುವಕರ ಪೋಷಕರು ಇಂದು ಅಕ್ರಮ ಮದ್ಯ ಮಾರಾಟ ಅಂಗಡಿಗಳಿಗೆ ಮುತ್ತಿಗೆ ಹಾಕಿ ಬಂದ್ ಮಾಡುವಂತೆ ಆಗ್ರಹ ಮಾಡಿದ್ರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಕ್ರಾಸ್ ಹಾಗೂ ಕುಲಹಳ್ಳಿಯ ಘಟಪ್ರಭಾ ಎಡದಂಡೆ ಕಾಲುವೆಯ ಬಳಿ ಹೆಸರಿಗೆ ಹಾಗೂ ನೋಡೋಕೆ ಪಾನ್ ಶಾಪ್ ಹಾಗೂ ಕಿರಾಣಿ ಅಂಗಡಿಗಳಂತೆ ಕಾಣುವ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬಂಡಿಗಣಿ ಕ್ರಾಸ್ ಹಾಗೂ ಕುಲಹಳ್ಳಿಯ ಘಟಪ್ರಭಾ ಎಡದಂಡೆ ಕಾಲುವೆ ಬಳಿ ಸುಮಾರು 6 ಅಂಗಡಿಗಳಿದ್ದು, ಅವುಗಳಲ್ಲಿ ಹೀಗೆ ಮದ್ಯ ಮಾರಾಟ ಮಾಡಲಾಗುತ್ತಿದೆಯಂತೆ. ಹೀಗಾಗಿ ಅಕ್ಕಪಕ್ಕದ ಗ್ರಾಮಗಳ ಯುವಕರು ಮದ್ಯದ ದಾಸರಾಗುತ್ತಿದ್ದಾರೆ. ಹೀಗಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಮುಂದೆ ಬಂದ ಬಂಡಿಗಣಿ ಗ್ರಾಮದ ಮಹಿಳೆಯರು ಗುಂಪು ಹಿಡಿಶಾಪ ಹಾಕಿದ್ರು. ಅಲ್ಲದೇ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ಬಂದ್ ಮಾಡುವಂತೆ ಮಹಿಳೆಯರು ಆಗ್ರಹ ಮಾಡಿದರು
“ಇಲ್ಲಿ ಪಾನ್ ಅಂಗಡಿಗಳಲ್ಲಿ ಬೇಕಾಬಿಟ್ಟಿಯಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹಾಡಹಗಲೇ ಇಂತಹ ದಂಧೆ ನಡೆದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಊರಲೇ ಆಕ್ರಮವಾಗಿ ಸಿಗುವ ಸಾರಾಯಿ ಹಿನ್ನೆಲೆ ನಮ್ಮ ಮಕ್ಕಳು ಚಿಕ್ಕ ವಯಸ್ಸಲ್ಲೇ ಕುಡಿತದ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳೋದರ ಜೊತೆಗೆ ನಮ್ಮ ಮನೆತನ ಹಾಳಾಗುತ್ತಿವೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು” ಎಂದು ಗ್ರಾಮದ ಬೋರವ್ವ ಬೆಳಗಲಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಎಸ್.ಸಿ, ಎಸ್.ಟಿ ಮನೆಗಳ ನಿರ್ಮಾಣಕ್ಕೆ 2 ಲಕ್ಷ ನೀಡಲು ತೀರ್ಮಾನಿಸಿದ ಸರ್ಕಾರ : ಸಿಎಂ ಬೊಮ್ಮಾಯಿ
ಪಕ್ಕದಲ್ಲಿ ಶಾಲೆ ಇದ್ದರೂ ಎಗ್ಗಿಲ್ಲದೇ ಸಾಗುತ್ತಿದೆ ಸಾರಾಯಿ ದಂಧೆ
ಇನ್ನು ಅಕ್ರಮ ಮದ್ಯ ಮಾರಾಟ ಮಾಡುವುದು ಯಾರಿಗೂ ಗೊತ್ತಾಗಬಾರದು ಅನ್ನೋ ಉದ್ದೇಶಕ್ಕೆ ಅಂಗಡಿಕಾರರು ಈ ರೀತಿ ಪಾನ್ ಶಾಪ್ ಹಾಗೂ ಕಿರಾಣಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ ಎನ್ನಲಾಗ್ತಿದೆ. ಇನ್ನು ಈ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳ ಪಕ್ಕದಲ್ಲಿಯೇ ಶಾಲೆ ಇದ್ರೂ ಕೂಡಾ ಯಾವುದಕ್ಕೂ ಡೋಂಟ್ ಕೇರ್ ಅನ್ನುವಂತಿದೆ. ಪುರುಷರು ಅಷ್ಟೇ ಅಲ್ಲದೇ ಕಾಲೇಜು ಯುವಕರು ಅಲ್ದೇ ಬಾಲಕರು ಕೂಡಾ ಮದ್ಯದ ದಾಸರಾಗಿದ್ದಾರೆ ಅನ್ನೋದು ಮಹಿಳೆಯರ ಗಂಭೀರ ಆರೋಪವಾಗಿದೆ. ಇನ್ನು ಮದ್ಯ ಸೇವಿಸುವವರು ದಾರಿ ಹೋಕರಿಗೆ ಇನ್ನಿಲ್ಲದ ಕಿರಿಕಿರಿ ಮಾಡ್ತಿದಾರಂತೆ. ಈ ಬಗ್ಗೆ ಎರಡು ಸಾರಿ ಪಕ್ಕದ ಪೊಲೀಸ್ ಠಾಣೆಗೆ ದೂರು ಕೊಡಲಾಗಿತ್ತು. ಆಗ ಒಂದೆರಡು ದಿನ ಅಂಗಡಿಗಳು ಬಂದ್ ಆಗಿದ್ದವು. ಪುನಃ ಮತ್ತೆ ಆರಂಭಗೊಂಡವು. ಮದ್ಯದ ಅಂಗಡಿಗಳಿಂದ ಊರಲ್ಲಿನ ಯುವಕರು ಹಾಳಾಗಿ ಹೋಗ್ತಿದಾರೆ. ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯುವಕರು ಕೆಲಸಕ್ಕೆ ಹೋಗದೆ ಮದ್ಯದ ದಾಸರಾಗುತ್ತಿದ್ದಾರೆ.
ಒಟ್ಟಾರೆ ಕಿರಾಣಿ, ಪಾನ್ ಶಾಪ್ ಅಂಗಡಿಗಳಲ್ಲಿ ಬೇಕಾಬಿಟ್ಟಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆದಿದೆ. ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟದ ಅಂಗಡಿಗಳನ್ನು ಬಂದ್ ಮಾಡಿಸುವ ಅಗತ್ಯವಿದೆ.
ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:16 pm, Sun, 12 June 22