ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಮದ್ಯ ಕುಡಿಸಿ ಸ್ನೇಹಿತನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಯುವಕ

ಸ್ನೇಹಿತನ ಪತ್ನಿ ಜತೆ ಅತಿಯಾದ ಸಲುಗೆ, ನಿರಂತರ ಫೋನ್ ಸಂಪರ್ಕದಲ್ಲಿದ್ದುದೇ ವ್ಯಕ್ತಿಯೊಬ್ಬನ ಪಾಲಿಗೆ ಮುಳುವಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖಾನಾಪುರ ಎಸ್‌ಕೆ ಗ್ರಾಮದಲ್ಲಿ ನಡೆದಿದೆ. ಹೆಂಡತಿ ಜತೆಗಿನ ಅನೈತಿಕ ಸಂಬಂಧದ ಬಗ್ಗೆ ವಾರ್ನ್​​ ಮಾಡಿದ್ದಕ್ಕೆ ಗೆಳೆಯನೇ ಆತನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಮದ್ಯ ಕುಡಿಸಿ ಸ್ನೇಹಿತನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಯುವಕ
ಕೊಲೆಯಾದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ, ಒಳಚಿತ್ರದಲ್ಲಿ ಕೊಲೆಯಾದ ಸೋಮಶೇಖರ್ ಕಿಳ್ಳಿಕೇತರ
Image Credit source: tv9
Edited By:

Updated on: Feb 03, 2026 | 6:17 PM

ಬಾಗಲಕೋಟೆ, ಫೆಬ್ರವರಿ 3: ಬಾಗಲಕೋಟೆ (Bagalkot) ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖಾನಾಪುರ ಎಸ್‌ಕೆ ಗ್ರಾಮದ ಸಮೀಪದ ಮಾವಿನ ತೋಟದಲ್ಲಿ ಯುವಕನೊಬ್ಬ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.  ಪತ್ನಿಯೊಂದಿಗೆ ಸ್ನೇಹಿತನಿಗೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯೇ ಈ ಭೀಕರ ಕೊಲೆಗೆ ಕಾರಣ ಎನ್ನಲಾಗಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಖಾನಾಪುರ ಎಸ್‌ಕೆ ಗ್ರಾಮದ ನಿವಾಸಿ ಸೋಮಶೇಖರ್ ಕಿಳ್ಳಿಕೇತರ (45) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಸ್ನೇಹಿತ ಸಂಜೀವ್ ಕಿಳ್ಳಿಕೇತರ (28) ಕೂಡ ಬಾದಾಮಿ ತಾಲ್ಲೂಕಿನ ಕಾಕನೂರು ಗ್ರಾಮದ ನಿವಾಸಿಯಾಗಿದ್ದಾನೆ.

ಸೋಮಶೇಖರ್​​ ಪತ್ನಿಯೊಂದಿಗೆ ಸಂಜೀವ್ ಅತಿಯಾದ ಸಲುಗೆಯಿಂದ ವರ್ತಿಸುತ್ತಿದ್ದು, ಫೋನ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಇದು ಸೋಮಶೇಖರ್​​ಗೆ ಅನುಮಾನ ಹುಟ್ಟಿಸಿತ್ತು. ಈ ವಿಷಯವಾಗಿ ಸ್ನೇಹಿತನಿಗೆ ದೂರ ಇರಲು ಎಚ್ಚರಿಕೆ ನೀಡಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ತಿಳಿದುಬಂದಿದೆ.

ಆದರೂ ಇಬ್ಬರೂ ಮದ್ಯಪಾನಕ್ಕೆ ಜೊತೆಯಾಗಿ ಸೇರುವ ಸ್ನೇಹಿತರಾಗಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಇಬ್ಬರೂ ಖಾನಾಪುರ ಎಸ್‌ಕೆ ಗ್ರಾಮದ ಸಮೀಪದ ಮಾವಿನ ತೋಟದಲ್ಲಿ ಮದ್ಯಪಾನ ಮಾಡಿದ್ದರು. ಆ ಸಂದರ್ಭ ಸೋಮಶೇಖರ್‌ಗೆ ಕಂಠಪೂರ್ತಿ ಮದ್ಯ ಕುಡಿಸಿದ್ದ ಸಂಜೀವ್, ಆತ ಪೂರ್ತಿ ನಶೆಯಲ್ಲಿದ್ದಾಗ ಕಲ್ಲಿನಿಂದ ತಲೆ ಮತ್ತು ಮುಖವನ್ನು ಜಜ್ಜಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರದಿಂದ ಸೋಮಶೇಖರ್ ಕಾಣೆಯಾಗಿದ್ದ ಹಿನ್ನೆಲೆ ಶೋಧ ನಡೆಸಲಾಗಿತ್ತು. ಬಳಿಕ ಮಾವಿನ ತೋಟದಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಪ್ರಕರಣ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ: ಸಿಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ? ಆತ್ಮಹತ್ಯೆಯ ಹಿಂದಿನ ದಿನ ನಡೆದಿದ್ದೇನು?

ಘಟನಾ ಸ್ಥಳಕ್ಕೆ ಬಾದಾಮಿ ಪೊಲೀಸರು ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಪತ್ತೆಯಾದ ಬಳಿಕ ಮೃತನ ಕುಟುಂಬಸ್ಥರು ಎಸ್‌ಪಿ ಎದುರು ಕಣ್ಣೀರಿಟ್ಟಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Tue, 3 February 26

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us