ದೇವರ ಮೇಲಿನ ನಮ್ಮ ಜನರ ಭಕ್ತಿಯ ರೀತಿ ನೀತಿಗಳು ವಿಭಿನ್ನತೆಯಿಂದ ಕೂಡಿರುತ್ತದೆ. ದೇವರಿಗಾಗಿ ಅನೇಕರು ಹತ್ತು ಹಲವು ಹರಕೆ ಹೊರುತ್ತಾರೆ, ವಿವಿಧ ಆಚರಣೆ ಮಾಡ್ತಾರೆ. ದೇವರ ಸನ್ನಿಧಾನದಲ್ಲಿ ಅನೇಕ ಪವಾಡಗಳು ನಡೆಯುತ್ತವೆ. ಅದೇ ರೀತಿ ಇಲ್ಲೊಂದು ಜಾತ್ರೆಯಲ್ಲಿ ನಡೆದ ತೆಂಗಿನಕಾಯಿ ಒಡೆಯುವ ಪವಾಡ (Coconut Fair or tenginkai jatre) ಎಲ್ಲರನ್ನು ಸೆಳೆಯಿತು. ಡೊಳ್ಳು ವಾದ್ಯಗಳ ಮೇಳದ ಸದ್ದು, ದೀಡ ನಮಸ್ಕಾರ, ದೇವಿಗೆ ಪೂಜೆ ಪುನಸ್ಕಾರ, ಇದಾದ ಮೇಲೆ ನಡೆಯೋದೆ ತೆಂಗಿನಕಾಯಿ ಪವಾಡ. ತಲೆಗೆ ಫಟ್ ಫಟ್ ಅಂತ ತೆಂಗಿನಕಾಯಿ ಒಡೆದುಕೊಳ್ಳುತ್ತಿರುವ ಪೂಜಾರಿ. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನಗರ (Bagalkot) ಹರಣಶಿಕಾರಿ ಕಾಲೋನಿಯ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ (Dandina Durga Devi Fair).
ಹೌದು ಬಾಗಲಕೋಟೆ ನಗರದ ಹರಣಸಿಕಾರಿ ಕಾಲೋನಿಯ ದಂಡಿನ ದುರ್ಗಾದೇವಿ ಜಾತ್ರೆ ಅಂದರೆ ತೆಂಗಿನಕಾಯಿ ಪವಾಡಕ್ಕೆ ಹೆಸರಾದ ಜಾತ್ರೆ. ಇಲ್ಲಿ ಸ್ವತಃ ದುರ್ಗಾದೇವಿ ಪೂಜಾರಿಗಳು ತಲೆಗೆ ತೆಂಗಿನಕಾಯಿ ಒಡೆದುಕೊಂಡು ತೆಂಗಿನಕಾಯಿ ಒಡೆಯುವ ಮೂಲಕ ಪವಾಡ ಮೆರೆಯುತ್ತಾರೆ. ತಲೆಯಿಂದ ತೆಂಗಿನಕಾಯಿ ಒಡೆದು ಬೀಸಾಕಿದ್ರೂ ಆ ಪೂಜಾರಿಗಳಿಗೆ ಮಾತ್ರ ಯಾವುದೇ ಗಾಯ ಆಗಲ್ಲ.
ಹರಶಿಕಾರಿ ಜನಾಂಗದಲ್ಲಿ ತಲೆತಲಾಂತರದಿಂದ ಈ ಪದ್ದತಿ ನಡೆದುಕೊಂಡು ಬಂದಿದ್ದು, ಬಾಗಲಕೋಟೆ ನಗರದಲ್ಲಿ ಕಳೆದ 40 ವರ್ಷಗಳಿಂದ ತೆಂಗಿನಕಾಯಿ ಪವಾಡ ನಡೆಯುತ್ತಿದೆ, ಇಂದಿಗೂ ಮುಂದುವರೆಯುತ್ತಿದೆ. ಅಂದು ಕಾಣಿಸಿಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗ ತಡೆಯೋದಕ್ಕೆ ಅಂತ ಶುರುವಾದ ತೆಂಗಿನಕಾಯಿ ಪವಾಡ ಇಂದಿಗೂ ನಡೆಯುತ್ತಿದೆ.
ಇದೆಲ್ಲ ದೈವಿಶಕ್ತಿ, ದೇವಿ ಪೂಜೆ ಮಾಡಿದ ಕೆಲ ಹೊತ್ತು ದೇವಿ ಮೈಮೇಲೆ ಆವಾಹನೆ ಮಾಡಿರುತ್ತಾಳೆ. ಇದೆಲ್ಲ ಅವಳ ಶಕ್ತಿ, ನಮಗೇನು ಗೊತ್ತಿರೋದಿಲ್ಲ. ಮೊದಲು ನಮ್ಮ ತಂದೆ ಅಜ್ಜಂದಿರು ಈ ಪವಾಡ ಮಾಡುತ್ತಿದ್ದರು. ಈಗ ನಾವು ಮುಂದುವರೆಸಿದ್ದೇವೆ. ಇದರಿಂದಾಗಿಯೇ ನಮಗೆ ಏನೂ ನೋವಾಗೋದಿಲ್ಲ. ಎಲ್ಲ ದೇವಿ ಶಕ್ತಿ, ತನ್ನ ಶಕ್ತಿ ತೋರಿಸೋದಕ್ಕೆ ದೇವಿ ಹೀಗೆ ಮಾಡಿಸುತ್ತಾಳೆ ಅಂತಾರೆ ತೆಂಗಿನಕಾಯಿ ಒಡೆದುಕೊಂಡ ಪೂಜಾರಿಗಳಾದ ಪರಶುರಾಮ ಪೂಜಾರಿ.
ಈ ಹಿಂದೆ ಮೂರು ವರ್ಷ ಕೋವಿಡ್ ನಿಂದ ಜಾತ್ರೆಗೆ ಕಂಟಕ ಎದುರಾಗಿತ್ತು. ಆದರೆ ಕಳೆದ ವರ್ಷ ಹಾಗೂ ಈ ವರ್ಷ ಪುನಃ ಅದ್ದೂರಿಯಾಗಿ ದಂಡಿನ ದುರ್ಗಾದೇವಿ ಜಾತ್ರೆ ನಡೆದಿದೆ. ಜಾತ್ರೆಯಲ್ಲಿ ತೆಂಗಿನಕಾಯಿ ತಲೆಗೆ ಒಡೆದುಕೊಳ್ಳೋದನ್ನು ನೋಡೋದೆ ಭಯಾನಕ. ತಲೆಗೆ ಫಟ್ ಫಟ್ ಅಂತ ಕಾಯಿ ಒಡೆದುಕೊಳ್ಳುತ್ತಿದ್ದು, ತೆಂಗಿನ ಕಾಯಿಯ ಹಾಲು ಸುತ್ತಲೂ ಚಿಮ್ಮುತ್ತಿತ್ತು. ಅದರೆ ನೋಡೋರು ಭಯದಿಂದ ಕಣ್ಮುಚ್ಚಿಕೊಳ್ಳುವಂತಾಗ್ತಿತ್ತು.
ದೇವಿಯ ಇಬ್ಬರು ಪೂಜಾರಿಗಳು ಎರಡು ಪ್ರತ್ಯೇಕ ಸ್ಥಳದಲ್ಲಿ ತೆಂಗಿನಕಾಯಿಗಳನ್ನು ತಲೆಗೆ ಒಡೆಯುವ ಪವಾಡ ಮಾಡುತ್ತಾರೆ. ಇನ್ನು ಇದರ ಜೊತೆಗೆ ಭಕ್ತರು ತಮ್ಮ ವಿವಿಧ ಹರಕೆ ತೀರಿಸೋದಕ್ಕೆ ದೀಡ ನಮಸ್ಕಾರ ವಿಶೇಷ ಪೂಜೆ ಪುನಸ್ಕಾರ ಮಾಡುತ್ತಾರೆ. ಇಲ್ಲಿ ದಂಡಿನ ದುರ್ಗಾದೇವಿ ಜಾತ್ರೆ ಹರಣಶಿಕಾರಿ ಜನರೆಲ್ಲರನ್ನು ಒಗ್ಗೂಡಿಸುವ ಜಾತ್ರೆ.
ಈ ಜಾತ್ರೆಗೆ ಅವರ ಮನೆ ಮಂದಿ ಎಲ್ಲೇ ಇದ್ದರೂ ಸ್ಥಳಕ್ಕೆ ಬಂದು ಜಾತ್ರೆಯಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಾರೆ. ರಾಜ್ಯ ಪರರಾಜ್ಯದಿಂದಲೂ ತೆಂಗಿನಕಾಯಿ ಪವಾಡ ನೋಡೋದಕ್ಕೆ ಭಕ್ತರು ಆಗಮಿಸ್ತಾರೆ. ಇಲ್ಲಿ ದೇವಿಗೆ ವಿವಿಧ ಹರಕೆ ಹೊತ್ತವರು ತಮ್ಮ ತಮ್ಮ ಹರಕೆ ಪ್ರಕಾರ ಬೇಡಿಕೊಂಡು ದೇವರಿಗೆ ತೆಂಗಿನಕಾಯಿಯನ್ನು ನೀಡುತ್ತಾರೆ. ಅದೇ ತೆಂಗಿನಕಾಯಿಯನ್ನು ಪೂಜಾರಿಗಳು ತಲೆಗೆ ಒಡೆದುಕೊಂಡು ಪವಾಡ ಮಾಡುತ್ತಾರೆ. ದುರ್ಗಾದೇವಿ ಜಾತ್ರೆಯ ಪ್ರಮುಖ ಆಕರ್ಷಣೆಯಾದ ತೆಂಗಿನಕಾಯಿ ಪವಾಡ ನೋಡಿ ಮನೆ ಮಂದಿಯೆಲ್ಲ ಸಂಭ್ರಮಿಸುತ್ತಾರೆ.
ಒಟ್ಟಿನಲ್ಲಿ ಹಡಣಶಿಕಾರಿ ಕಾಲೋನಿಯಲ್ಲಿ ಜಾತ್ರೆ ಸಂಭ್ರಮ ಕಳೆಗಟ್ಟಿ ಎಲ್ಲ ಸಂಬಂಧಿಕರು, ಆಪ್ತರು ಒಂದಾಗಿದ್ದರು. ಇನ್ನು ತಲೆಗೆ ತೆಂಗಿನಕಾಯಿ ಒಡೆಯುವ ಪವಾಡದ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರೆ ಭಕ್ತರು ಮಾತ್ರ ಎಲ್ಲ ದೇವಿಶಕ್ತಿ ಅಂತಿದ್ದಾರೆ.
ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ