ಬಾಗಲಕೋಟೆ, ಅ.08: ಬಾಗಲಕೋಟೆ ಮೂರು ನದಿಗಳು ಹರಿಯುವ ಜಿಲ್ಲೆ. ಈ ವರ್ಷ ಮಳೆ ಕೈಕೊಟ್ಟು ಜಲಮೂಲ ಖಾಲಿಯಾಗಿದೆ. ಇಡೀ ಜಿಲ್ಲೆಯನ್ನು ಸರ್ಕಾರ ಬರ (Drought) ಎಂದು ಘೋಷಣೆ ಮಾಡಿದೆ. ಹೀಗಾಗಿ ನಿನ್ನೆ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿ ರೈತರ ನೋವನ್ನು ಆಲಿಸಿದ್ದರು. ಇನ್ನು ಮತ್ತೊಂದೆಡೆ ಬಾಗಲಕೋಟೆಯಲ್ಲಿ (Bagalkot) ಬರದ ಎಫೆಕ್ಟ್ನಿಂದಾಗಿ ಜೋಳದ ರೇಟ್ ಹಾಗೂ ರೊಟ್ಟಿ ಬೆಲೆ ಗಗನಕ್ಕೆ ಏರಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಜೋಳದ ಬೆಲೆ ದುಪ್ಪಟ್ಟಾಗಿದೆ.
ಕಳೆದ ವರ್ಷ ಕೆಜಿ ಜೋಳಕ್ಕೆ 25-30 ರೂ. ಬೆಲೆ ಇತ್ತು. ಇದೀಗ ಕೆಜಿ ಜೋಳಕ್ಕೆ 60-65 ರೂ. ಬೆಲೆ ಇದೆ. ಬಾಗಲಕೋಟೆಯಲ್ಲಿ ಬೇಡಿಕೆಯಷ್ಟು ಜೋಳ ಸಿಗುತ್ತಿಲ್ಲ. ರೈತರು ಜೋಳವನ್ನೇ ಕೊಡೋಕೆ ಮುಂದೆ ಬರ್ತಿಲ್ಲ. ಹೊಲದಲ್ಲಿ ಜೋಳ ಬೆಳೆದೇ ಇಲ್ಲ, ಅಲ್ಲೊ ಇಲ್ಲೊ ಬೆಳೆದ ಜೋಳವನ್ನು ರೈತರು ಮಾರಾಟ ಮಾಡುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಜೋಳದ ಆವಕ ಬಾರಿ ಕಡಿಮೆಯಾಗಿದೆ. ಬರಗಾಲವಿಲ್ಲದಾಗ ಒಂದು ಅಂಗಡಿಯಿಂದ 2-3 ಕ್ವಿಂಟಲ್ ಮಾರಾಟವಾಗ್ತಿತ್ತು. ಆದರೆ ಈಗ ಅದಕ್ಕಿಂತ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ ಬೇಡಿಕೆಯಷ್ಟು ಮಾರಾಟ ಮಾಡಲು ಜೋಳವೇ ಇಲ್ಲ ಎಂದು ಜೋಳದ ವ್ಯಾಪಾರಸ್ಥರು ಹೇಳಿದರು.
ಇನ್ನು ಜೋಳ ಅಭಾವದಿಂದಾಗಿ ರೊಟ್ಟಿ ಬೆಲೆಯಲ್ಲೂ ಏರಿಕೆಯಾಗಿದೆ. ಒಂದು ರೊಟ್ಟಿ ಬೆಲೆ 10ರೂ.ಗೆ ಏರಿಕೆಯಾಗಿದೆ. ಮೊದಲು 6-7-8 ರೂಗೆ ಒಂದು ರೊಟ್ಟಿ ಸಿಗುತ್ತಿತ್ತು. ಈಗ ಒಂದು ರೊಟ್ಟಿಗೆ 10 ರೂ. ಇದರಿಂದ ಖಾನಾವಳಿಯಲ್ಲಿ ಊಟದ ರೇಟ್ ಏರಿಕೆಯಾಗಿದೆ. ಉತ್ತರ ಕರ್ನಾಟಕದ ಜನರು ರೊಟ್ಟಿ ಪ್ರಿಯರು. ಬರಗಾಲದಿಂದ ರೊಟ್ಟಿ ಊಟಕ್ಕೂ ಕಂಟಕ ಎದುರಾಗಿದೆ.
ಇದನ್ನೂ ಓದಿ: ಬರಗಾಲದಿಂದ ತತ್ತರಿಸಿದ್ದ ಅನ್ನದಾತನಿಗೆ ಬೆಲೆ ಕುಸಿತದ ಶಾಕ್; ಸರ್ಕಾರದ ನೆರವಿಗೆ ಆಗ್ರಹ
ನಿನ್ನೆ ಕೇಂದ್ರ ಬರ ಅಧ್ಯಾಯನ ಕೇಂದ್ರ ಬಾಗಲಕೋಟೆಗೆ ಭೇಟಿ ನೀಡಿ ಅಧ್ಯಾಯನ ಮಾಡಿದೆ. ಕೇಂದ್ರ ತಂಡ ಒಣಗಿದ ಕಬ್ಬಿನ ಬೆಳೆ, ಮೆಣಸಿನಕಾಯಿ, ತೊಗರಿ, ಗೋವಿನಜೋಳ ಹೊಲಗಳಿಗೆ ತೆರಳಿ ರೈತರಿಂದ ಮಾಹಿತಿ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತಕುಮಾರ ಸಾಹು ಅವರ ನೇತೃತ್ವದ ಬರ ಅಧ್ಯಯನ ತಂಡ ಭೇಟಿ ನೀಡಿತ್ತು. ಮೊದಲು ಬಾಗಲಕೋಟೆ ತಾಲ್ಲೂಕಿನ ಹೊಸೂರು ಗ್ರಾಮದ ದಾವಲಸಾಬ ಅವರ ಕಬ್ಬಿನ ಹೊಲಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ರೈತರು ತಮಗಾದ ನಷ್ಟದ ಬಗ್ಗೆ ಅಧಿಕಾರಿಗಳ ಮುಂದೆ ಗೋಳು ತೋಡಿಕೊಂಡರು. ನಂತರ ಚಿಟಗಿನಕೊಪ್ಪ ಗ್ರಾಮದಲ್ಲಿ ತೊಗರಿ ಬೆಳೆ,ಕಬ್ಬಿನ ಬೆಳೆ ವೀಕ್ಷಣೆ ಮಾಡಿದರು. ಇದೇ ವೇಳೆ ಒಂದು ಕಡೆ ಸಮೃದ್ದವಾಗಿ ಬೆಳೆದ ಕಬ್ಬು ಇನ್ನೊಂದು ಕಡೆ ಕುಂಠಿತವಾದ ತೊಗರಿ ಕಂಡು ಅಚ್ಚರಿಯಾದ ಅಧಿಕಾರಿಗಳು, ಇದು ಏಕೆ ಹೀಗೆ ಕಬ್ಬಿಗೆ ಕಾಲುವೆ ಮೂಲಕ ಹರಿಸುವ ನೀರನ್ನು ತೊಗರಿಗೂ ಹರಿಸಬಹುದಿತ್ತಲ್ಲ ಎಂದು ಪ್ರಶ್ನೆ ಮಾಡಿದರು. ಆಗ ಉತ್ತರ ಕೊಡಲು ಅಧಿಕಾರಿಗಳು ತಬ್ಬಿಬ್ಬಾದರು. ನಂತರ ಕೆಂಗಲ್ ಗ್ರಾಮದಲ್ಲಿ ಮನರೆಗಾ ಕಾಮಗಾರಿ ವೀಕ್ಷಣೆ ಮಾಡಿದರು. ಅದು ಕೆರೆ ಕಾಮಗಾರಿ ಒಳಗೆ ಹೋಗಿ ನೋಡದೆ ದಂಡೆ ಮೇಲೆ ನಿಂತು ಹೊರಟರು.ಪಕ್ಕದ ಹೊಲದ ರೈತರನ್ನು ಮಾತಾಡಿಸಲಿಲ್ಲ ಇದರಿಂದ ರೈತ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದಳು.ಈ ರೀತಿ ತರಾತುರಿಯಲ್ಲಿ ಬರ ಅಧ್ಯಯನ ಮಾಡಿದರೆ ಏನು ಪ್ರಯೋಜನ ಮನರೆಗಾ ಕಾಮಗಾರಿಯನ್ನು ಸರಿಯಾಗಿ ನೋಡಲಿಲ್ಲ.ನಮ್ಮ ಹೊಲದ ಮೂಲಕವೇ ಹೋದರೂ ನಮ್ಮನ್ನು ಏನು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ