ಇಳಕಲ್ ಸೀರೆಗೆ ಭೂಷಣ ಗುಳೇದಗುಡ್ಡ ಖಣ: 200 ವರ್ಷಗಳ ವಸ್ತ್ರ ಪರಂಪರೆ ಜೆನ್ ಜಿಗಳನ್ನೂ ಆಕರ್ಷಿಸಿದ್ಹೇಗೆ ಗೊತ್ತೇ? ಇಲ್ಲಿದೆ ಮಾಹಿತಿ

ಇಳಕಲ್ ಸೀರೆಗೆ ಮೆರುಗು ನೀಡುವ ಗುಳೇದಗುಡ್ಡ ಖಣ ಇದೀಗ ಸೀರೆ, ಶಾಲು, ದುಪ್ಪಟ್ಟಾ ಸೇರಿದಂತೆ ಹೊಸ ಹೊಸ ರೂಪಾಂತರಗಳೊಂದಿಗೆ ಗಮನ ಸೆಳೆಯುತ್ತಿದೆ. ಜೆನ್ ಜಿ ತಲೆಮಾರು ಸಹ ಇದಕ್ಕೆ ಮನಸೋತಿದ್ದು, ವಾರ್ಷಿಕ ವಹಿವಾಟು 120 ಕೋಟಿಯಿಂದ 150 ಕೋಟಿ ರೂ.ಗೆ ಏರಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ನೇಕಾರರಿಗೆ ಲಾಭವಿಲ್ಲದಾಗಿದ್ದು, ಗುಳೆ ಹೋಗುತ್ತಿದ್ದಾರೆ. ಖಣ ವಸ್ತ್ರ ಪರಂಪರೆಯ ಇತಿಹಾಸ, ಮಹತ್ವ, ಉದ್ಯಮ ಬೆಳೆದು ಬಂದ ಬಗೆ, ಪ್ರಸ್ತುತ ಸ್ಥಿತಿಗತಿಯ ಸಮಗ್ರ ಮಾಹಿತಿ ಇಲ್ಲಿದೆ.

ಇಳಕಲ್ ಸೀರೆಗೆ ಭೂಷಣ ಗುಳೇದಗುಡ್ಡ ಖಣ: 200 ವರ್ಷಗಳ ವಸ್ತ್ರ ಪರಂಪರೆ ಜೆನ್ ಜಿಗಳನ್ನೂ ಆಕರ್ಷಿಸಿದ್ಹೇಗೆ ಗೊತ್ತೇ? ಇಲ್ಲಿದೆ ಮಾಹಿತಿ
ಖಣ ಬಟ್ಟೆ ತಯಾರಿ ಹಾಗೂ ಖಣ ಸೀರೆಗಳು
Edited By:

Updated on: Nov 14, 2026 | 10:21 AM

ಮುಖ್ಯಾಂಶಗಳು

  • ಜೆನ್ ಜಿಗಳನ್ನೂ ಸೆಳೆಯುತ್ತಿರುವ ಖಣ ಬಟ್ಟೆಗಳು
  • ಖಣದ ವಾರ್ಷಿಕ ವಹಿವಾಟು ₹150 ಕೋಟಿಗೆ ಏರಿಕೆ
  • ಖಣ ಇತಿಹಾಸ, ಬೆಳವಣಿಗೆ, ವಹಿವಾಟಿನ ಸಮಗ್ರ ಮಾಹಿತಿ

ನಮ್ಮ ನಾಡಿನಲ್ಲಿ ಒಂದೊಂದು ಹಬ್ಬ, ಆಚರಣೆ, ಪ್ರಾದೇಶಿಕತೆ, ಭಾಷೆ, ವೇಷಭೂಷಣ, ಉಡುಗೆ-ತೊಡುಗೆಗೂ ಒಂದೊಂದು ವಿಶೇಷತೆ ಇದೆ. ಅದಕ್ಕೆ ಒಂದು ಹಿನ್ನೆಲೆಯಿದೆ. ಪ್ರಾಚೀನ ಕಾಲದಿಂದಲೂ ಅವುಗಳಿಗೆ ಮಾನ್ಯತೆ ಇದೆ. ಆಧುನಿಕ ಎಐ ಕಾಲದಲ್ಲೂ ಅವು ತಮ್ಮ ಮಹತ್ವವನ್ನು ಕಾಪಾಡಿಕೊಂಡು ಬಂದಿವೆ. ಸಾಂಪ್ರದಾಯಿಕ ಉಡುಗೆ ಎಂದರೆ ನಮ್ಮ ರಾಜ್ಯದಲ್ಲಿ ಮೊದಲು ನೆನಪಾಗುವುದು ಇಳಕಲ್ ಸೀರೆ. ಅದರ ಜೊತೆಗೆ ಗುಳೇದಗುಡ್ಡ ‘ಖಣ’ವೂ ಜನಪ್ರಿಯ. ಖಣ ಎಂದರೆ ಕುಪ್ಪಸ ಅಥವಾ ರವಿಕೆ (ಈಗ ಬೇರೆ ಬೇರೆ ಬಟ್ಟೆಗಳಿಗೆ ರೂಪಾಂತರವಾಗಿದೆ). ಇಳಕಲ್ ಸೀರೆಗೆ ಗುಳೇದಗುಡ್ಡ ಖಣ ಇದ್ದರೆ ಮಾತ್ರ ಭೂಷಣ. ಆಗಲೇ ಸೀರೆಗೆ ಒಂದು ಕಳೆ ಬರುತ್ತದೆ, ಮೆರುಗು ಬರುತ್ತದೆ. ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣ ಧರಿಸಿದ ನೀರೆಯರ ದೇಸಿ ಸೌಂದರ್ಯ ನೋಡುವುದೇ ಕಣ್ಣಿಗೆ ಹಬ್ಬ!

ಗುಳೇದಗುಡ್ಡ ಖಣಕ್ಕೆ 200 ವರ್ಷಗಳ ಇತಿಹಾಸ: ರಾಣಿಯರ ರವಿಕೆಯಿಂದ ಲಾವಣಿ ಸೀರೆಯವರೆಗೆ

ಗುಳೇದಗುಡ್ಡ ಖಣಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಇದು ಹೆಚ್ಚು ಬೆಳಕಿಗೆ ಬಂತು. ರಾಜಮಹಾರಾಜರ ಕಾಲದಲ್ಲಿ ರಾಣಿಯರು ಇದನ್ನು ಕುಪ್ಪಸವಾಗಿ ಧರಿಸುತ್ತಿದ್ದರು. ಮಹಾರಾಷ್ಟ್ರದ ಲಾವಣಿ ಸೀರೆಯೊಂದಿಗೆ ಗುಳೇದಗುಡ್ಡ ಖಣವನ್ನು ಕುಪ್ಪಸವಾಗಿ ಧರಿಸಿದಾಗ ಮಹಿಳೆಯರ ಅಂದ ಇಮ್ಮಡಿಯಾಗುತ್ತಿತ್ತು. ಹೀಗಾಗಿ ಮಹಾರಾಷ್ಟ್ರದಿಂದ ಖಣಕ್ಕೆ ಭಾರಿ ಬೇಡಿಕೆ ಇತ್ತು. ಅಲ್ಲಿಂದ ಬರುತ್ತಿದ್ದ ವ್ಯಾಪಾರಿಗಳು ಲಾರಿಗಟ್ಟಲೆ ಖಣಗಳನ್ನು ಖರೀದಿಸುತ್ತಿದ್ದರು.

Loading...

‘‘ಒಬ್ಬ ಅಜ್ಜಿ ಸತ್ತರೆ ಒಂದು ಗಿರಾಕಿ ಕಡಿಮೆ’’

ಈಗಲೂ ಖಣ ಮಾರಾಟವಾಗುತ್ತಿದೆ, ಆದರೆ ಹಿಂದಿಗೆ ಹೋಲಿಸಿದರೆ ತೀರಾ ಕಡಿಮೆ. ಒಬ್ಬ ಅಜ್ಜಿ ಸತ್ತರೆ ಒಂದು ಗಿರಾಕಿ ಕಡಿಮೆ ಎನ್ನುವ ಸ್ಥಿತಿ ಇತ್ತು. ಏಕೆಂದರೆ ಖಣ ಧರಿಸುತ್ತಿದ್ದವರಲ್ಲಿ ಹೆಚ್ಚಿನವರು ವಯೋವೃದ್ಧರು. ಈಗ ಅದು ಸ್ವಲ್ಪಮಟ್ಟಿಗೆ ಫ್ಯಾಷನ್ ಆಗಿ ಬದಲಾಗುತ್ತಿದೆ. ಹಬ್ಬ-ಹರಿದಿನ ಮತ್ತು ಈವೆಂಟ್‌ಗಳಲ್ಲಿ ಕೆಲವರು ಇಳಕಲ್ ಸೀರೆಯ ಜೊತೆ ಖಣವನ್ನು ರವಿಕೆಯಾಗಿ ಧರಿಸುತ್ತಿದ್ದಾರೆ. ಇದರಿಂದಲೇ ಖಣ ಜೀವ ಉಳಿಸಿಕೊಂಡಿದೆ. ಅನಿವಾಸಿ ಭಾರತೀಯರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದನ್ನು ಪ್ರಚಾರ ಮಾಡಿದ್ದಾರೆ.

ಖಣ ಉಳಿಸಲು ಹೊಸ ಉತ್ಪನ್ನಗಳ ಪ್ರಯೋಗ

Khana Saree Collection

ಖಣ ಬಟ್ಟೆಯಿಂದ ತಯಾರಿಸಿದ ಸೀರೆ

ಖಣಕ್ಕೆ ಬೇಡಿಕೆ ಕಡಿಮೆಯಾದ ಕಾರಣ, ಕೆಲವು ನೇಕಾರರು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ಅದೇ ಬಟ್ಟೆಯಲ್ಲಿ ಸೀರೆ, ಚೂಡಿದಾರ, ಶಾಲು, ಪೇಟ, ಪುಸ್ತಕದ ಕವರ್, ದೀಪಾವಳಿಗೆ ಶಿವನಬುಟ್ಟಿ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

ಕೋಲಿನ ಲೆಕ್ಕದಲ್ಲಿ ವೈವಿಧ್ಯಮಯ ವಿನ್ಯಾಸಗಳು

ಗುಳೇದಗುಡ್ಡದಲ್ಲಿ ಹಲವು ವಿನ್ಯಾಸಗಳ ಖಣಗಳನ್ನು ನೇಯಲಾಗುತ್ತದೆ. ಅವುಗಳ ವಿವರ ಹೀಗಿದೆ;

  • 10 ಕೋಲು: ತೇರು, ಖಾಂಡಿ, ಸಿದ್ದರ ಮಕ್ಕಳು, ಕವಡೆ, ಕಮದಕಟ್ಟಿ, ಸೂಜಿಮಲ್ಲಿಗೆ, ಕೆರಮುತ್ತಿನ, ರುಂಡಮಾರಿ
  • 9 ಕೋಲು: ನವಪಾಡಿ, ತುಳಸಿಪಾದಿ
  • 8 ಕೋಲು: ಪಟ್ಟೆಬೈರು, ಗೊಂಡೆಹಾಳ್ಳಿ
  • 18 ಕೋಲು: ನುಲಿವಿ, ಆನೆ, ಬಾಹುಕೋಳಿ
  • 36 ಪನ್ನಾ: ಚಿತ್ತರಮಾಲಾಸಾಟಿ, ಸೇವಂತಿ ಸೂಜಿ, ನವಿಲು, ಆನೆ, ಒಂಟೆ, ತೇರು

ಖಣ ತಯಾರಾಗುವುದು ಹೇಗೆ?

ಖಣ ನೇಯಲು ಹತ್ತಿಯ ನೂಲು ಬೇಕು. ಕಚ್ಚಾ ನೂಲನ್ನು ಪಕ್ಕಾ ಮಾಡಿಕೊಂಡು ನೇಯಬೇಕು. ಒಂದು ಖಣ ತಯಾರಾಗಲು ಅರ್ಧ ಮೀಟರ್ ಬಟ್ಟೆ ಬೇಕು.

ದಿನಕ್ಕೆ ಎಷ್ಟು ಖಣ ನೇಯಬಹುದು? ಗಳಿಕೆ ಎಷ್ಟು?

ಒಂದು ನೇಕಾರ ಕುಟುಂಬ ಪವರ್ ಲೂಮ್‌ನಲ್ಲಿ ದಿನಕ್ಕೆ 12-14 ರೇಷ್ಮೆ ಖಣ ಅಥವಾ 20-22 ಚೀನಾ ಖಣ ನೇಯುತ್ತದೆ. ಕೈಮಗ್ಗದಲ್ಲಿ ದಿನಕ್ಕೆ 10 ರೇಷ್ಮೆ ಖಣ ಅಥವಾ 15-16 ಚೀನಾ ಖಣ ನೇಯಲು ಸಾಧ್ಯ. ಒಂದು ಖಣ ನೇಯ್ದರೆ ಸಿಗುವ ಕೂಲಿ ₹10. ಹೀಗೆ ದುಡಿದರೂ ವಾರಕ್ಕೆ ₹1,000 ಹೆಚ್ಚೆಂದರೆ ₹1,500 ಆದಾಯ ಸಿಗುತ್ತದೆ. ದುಬಾರಿ ಕಾಲದಲ್ಲಿ ಇದು ಯಾವುದಕ್ಕೂ ಸಾಲುವುದಿಲ್ಲ.

‘‘ನೇಕಾರನ ಬದುಕು ಬೆತ್ತಲೆ’’

‘‘ನೇಕಾರನ ಜೀವನ ಬೆತ್ತಲೆ’’ ಎಂಬ ಗಾದೆಯಿದೆ. ಎಲ್ಲರ ಮಾನ ಮುಚ್ಚುವ ನೇಕಾರನ ಬದುಕು ಮಾತ್ರ ಸಂಕಷ್ಟಮಯ ಎಂಬುದು ಇದರ ಅರ್ಥ. ದಿನನಿತ್ಯ ಕೈಮಗ್ಗ, ಪವರ್ ಲೂಮ್‌ನೊಂದಿಗೆ ಯುದ್ಧ ಮಾಡಿ ಬದುಕು ಕಟ್ಟಿಕೊಳ್ಳುವ ನೇಕಾರನ ಬದುಕು ದುಸ್ತರವಾಗಿದೆ. ಇಡೀ ಮನೆಮಂದಿ ಸೇರಿ ದುಡಿದರೂ ವಾರಕ್ಕೆ ₹1,000 ಗಳಿಸುವುದೇ ಹೆಚ್ಚು. ಇದರಿಂದ ಕುಟುಂಬ ನಿರ್ವಹಣೆ ತೀರಾ ಕಷ್ಟ. ಹೀಗಾಗಿ ಹಲವು ನೇಕಾರರು ಈ ವೃತ್ತಿ ಬಿಟ್ಟು ಬೇರೆ ಕೆಲಸ ಆರಂಭಿಸಿದ್ದಾರೆ. ನೇಕಾರರ ಮಕ್ಕಳು ಊರನ್ನೇ ಬಿಟ್ಟು ಗುಳೆ ಹೋಗುತ್ತಿದ್ದಾರೆ.

ನಶಿಸುತ್ತಿವೆ ನೂರಾರು ವರ್ಷಗಳ ಐತಿಹ್ಯವಿರುವ ನೇಕಾರ ಮನೆತನಗಳು

ಗುಳೇದಗುಡ್ಡ ಪಟ್ಟಣದ ಹಿರಿಯ ನೇಕಾರ ಬೊಮ್ಮಣ್ಣ ರೋಜಿ ಅವರು 1978ರಿಂದ ನೇಕಾರಿಕೆ ಮಾಡುತ್ತಿದ್ದಾರೆ. ಅವರ ತಂದೆಯೂ ನೇಕಾರರೇ. ಇವರದು ನೂರು ವರ್ಷಗಳ ನೇಕಾರಿಕೆ ಇತಿಹಾಸದ ಮನೆತನ. ‘‘ನಮ್ಮ ತಂದೆ ನೇಕಾರಿಕೆ ಮಾಡುತ್ತಿದ್ದರು. ನಾವು ಐದು ಜನ ಅಣ್ಣ-ತಮ್ಮಂದಿರೂ ನೇಕಾರಿಕೆಯನ್ನೇ ಮಾಡುತ್ತಿದ್ದೆವು. ಇಬ್ಬರು ಮೃತಪಟ್ಟಿದ್ದಾರೆ. ಈಗ ಮೂರು ಜನ ಸಹೋದರರು ನೇಕಾರಿಕೆ ಮುಂದುವರಿಸಿದ್ದೇವೆ. ಆದರೆ ನಮ್ಮ ಮಕ್ಕಳು ಬೇರೆ ಕೆಲಸ ಮಾಡುತ್ತಿದ್ದಾರೆ. ಏನು ಮಾಡುವುದು, ಆದಾಯವಿಲ್ಲ. ನಮಗೆ ತುತ್ತು ಅನ್ನ ಹಾಕಿದ ನೇಕಾರಿಕೆ ನಮ್ಮ ಕುಟುಂಬದಲ್ಲಿ ನಮ್ಮಿಂದಲೇ ಅಂತ್ಯವಾಗುತ್ತದೆ. ಸರ್ಕಾರ ಸಹಾಯಧನ ನೀಡಬೇಕು. ನೇಕಾರರ ಬಟ್ಟೆಯನ್ನು ನೇರವಾಗಿ ಖರೀದಿಸಬೇಕು. ಕಚ್ಚಾ ಸಾಮಗ್ರಿ ಖರೀದಿಗೆ ಸರಳ ರೀತಿಯಲ್ಲಿ ಸಾಲ ನೀಡಬೇಕು. ಯುವಕ-ಯುವತಿಯರಿಗೆ ನೇಕಾರಿಕೆ ಬಗ್ಗೆ ತರಬೇತಿ ನೀಡಿ, ಅವರು ಬದುಕು ಕಟ್ಟಿಕೊಳ್ಳುವಂತೆ ಯೋಜನೆ ರೂಪಿಸಬೇಕು’’ ಎನ್ನುತ್ತಾರೆ ಬೊಮ್ಮಣ್ಣ ರೋಜಿ.

ಗುಳೇದಗುಡ್ಡದಿಂದ ಗುಳೆ ಹೋದ ನೇಕಾರರು

‘‘ಧಾರವಾಡದಲ್ಲಿ ಒಂದು ಕಲ್ಲೆಸೆದರೆ ಸಾಹಿತಿಗಳ ಮನೆ ಮೇಲೆ ಬೀಳುತ್ತದೆ’’ ಎಂಬ ಮಾತಿದೆ. ಅದೇ ರೀತಿ, ‘‘ಗುಳೇದಗುಡ್ಡದಲ್ಲಿ ಕಲ್ಲೆಸೆದರೆ ನೇಕಾರರ ಮನೆ ಮೇಲೆಯೇ ಬೀಳುತ್ತದೆ’’ ಎನ್ನುವ ಮಾತಿತ್ತು. ಈಗ ಹೆಚ್ಚಿನ ನೇಕಾರರು ಬೆಂಗಳೂರಿಗೆ ಗುಳೆ ಹೋಗಿ ಅಲ್ಲೇ ನೆಲೆಸಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ, ಯಲಹಂಕ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಕನಿಷ್ಠ 15-20 ಸಾವಿರ ಗುಳೇದಗುಡ್ಡ ನೇಕಾರರಿದ್ದಾರೆ.

ಗುಳೇದಗುಡ್ಡದಲ್ಲೆಷ್ಟಿವೆ ಕೈಮಗ್ಗಗಳು?

Khana Making

ಖಣ ಬಟ್ಟೆ ತಯಾರಿ

ಮೊದಲು ಗುಳೇದಗುಡ್ಡ ಪಟ್ಟಣದಲ್ಲಿ 10-15 ಸಾವಿರ ಕೈಮಗ್ಗಗಳಿದ್ದವು. ಈಗ ಉಳಿದಿರುವುದು 100-150 ಮಾತ್ರ. 6-7 ಸಾವಿರ ಇದ್ದ ಪವರ್ ಲೂಮ್‌ಗಳ ಸಂಖ್ಯೆ 2-3 ಸಾವಿರಕ್ಕೆ ಇಳಿದಿದೆ.

ಖಣಕ್ಕೆ ಈಗ ಆಧುನಿಕ ಫ್ಯಾಷನ್ ಸ್ಪರ್ಶ: ವಾರ್ಷಿಕ ವಹಿವಾಟು 150 ಕೋಟಿ ರೂ.

ಇಷ್ಟೆಲ್ಲ ಸಂಕಷ್ಟದ ನಡುವೆಯೂ ಖಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ನ್ಯೂ ಫ್ಯಾಷನ್ ಸ್ಪರ್ಶದೊಂದಿಗೆ ಚೂಡಿದಾರ, ಶಾಲು, ಪೇಟ, ಸೀರೆ ಸೇರಿದಂತೆ ವಿವಿಧ ಬಟ್ಟೆಗಳು ತಯಾರಾಗುತ್ತಿವೆ. ಸುಶಿಕ್ಷಿತರು ಇದನ್ನು ಫ್ಯಾಷನ್ ಆಗಿ ಧರಿಸುತ್ತಿದ್ದಾರೆ. ಹಳೆಯ ಟ್ರೆಂಡ್‌ಗೆ ಜೆನ್ ಜಿ ಮನಸೋತಿದ್ದು, ಖಣದ ವಸ್ತ್ರಗಳಿಗೆ ಆಕರ್ಷಿತರಾಗಿ ಬೇಡಿಕೆ ಹೆಚ್ಚಿಸಿದ್ದಾರೆ. ಮಹಾರಾಷ್ಟ್ರದಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಆದರೆ ತಯಾರಿಸಲು ನೇಕಾರರೇ ಇಲ್ಲದಂತಾಗಿದೆ. ವಾರ್ಷಿಕ ವಹಿವಾಟು ಮೊದಲು 120 ಕೋಟಿ ರೂ. ಇತ್ತು. ಈ ವರ್ಷ ಅದು 150 ಕೋಟಿ ರೂ. ತಲುಪಿದೆ.

ಖಣ ಸೀರೆ ಸಿದ್ಧವಾಗುವ ವಿಡಿಯೋ

‘ಖಣ’ಕ್ಕಾಗಿ ಜವಳಿ ಪಾರ್ಕ್: ಈಡೇರದ ಬಹುದಿನದ ಕನಸು

ನೇಕಾರರು ಹೆಚ್ಚಿರುವ ಈ ಪಟ್ಟಣದಲ್ಲಿ ಇದುವರೆಗೂ ಜವಳಿ ಪಾರ್ಕ್ ಇಲ್ಲ. ಇದರಿಂದ ಖಣ ತಯಾರಿಕೆಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿಂದೆ ಸರ್ಕಾರ ಪಾರ್ಕ್ ಸ್ಥಾಪಿಸುವ ಯೋಜನೆ ರೂಪಿಸಿತ್ತು. ಆದರೆ ಅದು ಕೈಗೂಡಲಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದು ಸ್ಥಳೀಯ ನೇಕಾರರು ಆರೋಪಿಸಿದ್ದಾರೆ. ಮೂರ್ನಾಲ್ಕು ಜನ ಸೇರಿ ನೇಕಾರಿಕೆ ಮಾಡಿದರೂ ಕೂಲಿ ಕಡಿಮೆ. ಕುಟುಂಬ ನಿರ್ವಹಣೆ ಅಸಾಧ್ಯವಾಗುತ್ತಿರುವುದರಿಂದ ನೇಕಾರರು ಬೇರೆ ಉದ್ಯೋಗದತ್ತ ಮುಖ ಮಾಡುತ್ತಿದ್ದಾರೆ.

Khana Making (1)

ಖಣ ನೇಕಾರಿಕೆ

‘‘ಹಳೆಯ ಕೈಮಗ್ಗಗಳನ್ನು ಆಧುನಿಕ ರೀತಿಯಲ್ಲಿ ಪರಿವರ್ತಿಸಲು ತಾಂತ್ರಿಕ ನೆರವು ಮತ್ತು ತರಬೇತಿ ಅಗತ್ಯ. ಉತ್ಪಾದನೆಯಾದ ಬಟ್ಟೆಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರನ್ನು ಒದಗಿಸುವಲ್ಲಿ ಸರ್ಕಾರ ಮಹತ್ವದ ಪಾತ್ರ ವಹಿಸಬೇಕು. ಇಲ್ಲದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಈ ಕೈಮಗ್ಗಗಳು ಮೂಲೆಗುಂಪಾಗುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ಖಣ ಉತ್ಪಾದಕ ಸಂಪತ್ ರಾಠಿ.

ಒಟ್ಟಿನಲ್ಲಿ, ಸಂಕಷ್ಟದ ನಡುವೆಯೂ ಉಸಿರಾಡುತ್ತಿರುವ ಖಣಕ್ಕೆ ಸರ್ಕಾರದ ಆಮ್ಲಜನಕ ಬೇಕಾಗಿದೆ. ಖಣವನ್ನು ವಿನಾಶದತ್ತ ತಳ್ಳದೆ ಕಾಪಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Loading...
Unable to load recommendations.
Follow Us