ಎಲ್ಲ ಕಡೆ ಹೋಳಿ (Holi 2023) ಸಂಭ್ರಮ ಸಡಗರ, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿಯಲ್ಲಿ ಬಣ್ಣದ ಜೊತೆಗೆ ಹಲಗೆ ಬಾರಿಸೋದು (Holi Drums) ಪ್ರಮುಖ ವಿಶೇಷ. ಆದರೆ ಇದೇ ಹಲಗೆ ಜಗಳ ಒಬ್ಬನ ಬಲಿ ಪಡೆದಿದೆ. ಇಲ್ಲಿ ಹಲಗೆ ಬಾರಿಸಬೇಡ ಎಂದು ಹೇಳಿದ್ದಕಗಕೆ ಕಾಮಣ್ಣನ ಗಡಿಗೆ ಒಡೆದರು ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಚಾಕು ಇರಿದು ಓರ್ವನ ಕೊಲೆ ಮಾಡಲಾಗಿದೆ.ಬಣ್ಣದ ಓಕುಳಿ ವೇಳೆ ರಕ್ತದೋಕುಳಿ ಹರಿದಿದೆ. ಒಂದು ಕಡೆ ಕುಣಿದು ಕುಪ್ಪಳಿಸುತ್ತಾ ಬಣ್ಣದೋಕುಳಿ ಆಡುತ್ತಿರುವವರ ಸಂಭ್ರಮ. ಇನ್ನೊಂದು ಕಡೆ ಬಣ್ಣದೋಕುಳಿ ಬದಲು ರಕ್ತದೋಕುಳಿ. ಹದಿಹರೆಯದ ಮಗನ ಕೊಲೆ ಹಿನ್ನೆಲೆಯಲ್ಲಿ ಎದೆ ಹೊಡೆದುಕೊಂಡು ತಾಯಿಯ ಗೋಳಾಟ. ತಾಯಿ ಜೊತೆ ಕಣ್ಣೀರು ಹಾಕಿ ಗೋಳಾಡುತ್ತಿರುವ ಸಂಬಂಧಿಕರು. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ (Bagalkot) ಜಿಲ್ಲೆ ಮುಧೋಳ ನಗರದಲ್ಲಿ (Mudhol).
ಹೌದು, ಈಗ ಎಲ್ಲ ಕಡೆ ಹೋಳಿ ಹಬ್ಬದ ಸಂಭ್ರಮಾಚರಣೆ, ಎಲ್ಲಾ ನಗರ ಹಳ್ಳಿ ಪಟ್ಟಣದಲ್ಲೂ ಕೂಡ ಯುವಕರು ಮಹಿಳೆಯರಾದಿಯಾಗಿ ಕುಣಿದು ಕುಪ್ಪಳಿಸುತ್ತಾ ಬಣ್ಣವನ್ನು ಎರೆಚಿ ರಂಗುರಂಗಿನ ಆಟ ಆಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹೋಳಿಯಲ್ಲಿ ಹಲಗೆ ಬಾರಿಸುವುದೊಂದು ವಿಶೇಷ ಸಡಗರ. ಪ್ರತಿಯೊಂದು ಹಳ್ಳಿ, ಪಟ್ಟಣದ ಗಲ್ಲಿಗಲ್ಲಿಗಳಲ್ಲೂ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಹಲಗೆ ಬಾರಿಸಿ ಯುವಕರು ಖುಷಿ ಪಡ್ತಾರೆ. ಜೊತೆಗೆ ಬಣ್ಣದ ಹೋಳಿಯನ್ನು ಕೂಡ ಆಡುತ್ತಾರೆ.
ಆದರೆ ಹಲಗೆ ಬಾರಿಸುವ ಹಾಗೂ ಗಡಿಗೆ ಒಡೆಯುವ ವಿಚಾರಕ್ಕೆ ನಡೆದಂತಹ ಜಗಳ ವಿಕೋಪಕ್ಕೆ ತಿರುಗಿ ಓರ್ವ ಯುವಕನ ಕೊಲೆ ಮಾಡಲಾಗಿದೆ. ಹೌದು ಮುಧೋಳ ನಗರದ ಟೀಚರ್ಸ್ ಕಾಲೋನಿಯಲ್ಲಿ ಸುಮಾರು 22 ವರ್ಷದ ಯುವಕ ಗಿರೀಶ್ ಪಾಲೋಜಿಯನ್ನು ಕೊಲೆ ಮಾಡಲಾಗಿದೆ.
ಇದರಿಂದ ಮುಧೋಳ ನಗರದಲ್ಲಿ ಬಣ್ಣದ ಜೊತೆಗೆ ರಕ್ತದೋಕುಳಿ ಕೂಡ ಹರಿದಂತಾಗಿದ್ದು, ಯುವಕರನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ತಾಯಿ ಒಂದೇ ಸಮನೆ ಗೋಳಾಡಿ ಕಣ್ಣೀರು ಹಾಕುತ್ತಿರುವುದು ಮನ ಕಲುಕುತ್ತಿದೆ. ಹದಿಹರೆಯದ ಎದೆಯುದ್ದ ಬೆಳೆದಿದ್ದ ಮಗನನ್ನು ಕಳೆದುಕೊಂಡ ತಾಯಿಯ ದುಃಖದ ಕಟ್ಟೆಯೊಡೆದಿದ್ದು ಕೊಲೆಗಡುಕರಿಗೆ ಶಾಪ ಹಾಕುತ್ತಿದ್ದಾರೆ.
ಹೌದು ಇಲ್ಲಿ ಗಿರೀಶ್ ಕೊಲೆ ಮಾಡಿದ್ದು 17 ವರ್ಷದ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕ. ಹಾಗೂ ಆತನ ಸಂಬಂಧಿಕರು ಐದು ಜನ ಸೇರಿಕೊಂಡು ಹತ್ಯೆ ಮಾಡಿಬಿಟ್ಟಿದ್ದಾರೆ. ಇಲ್ಲಿ ಘಟನೆಗೆ ಮೂಲ ಕಾರಣ ಅಂದರೆ ಹಲಗೆ ಬಾರಿಸೋದು ಹಾಗೂ ಗಡಿಗೆ ಒಡೆದ ವಿಚಾರ. ಮೃತ ಗಿರೀಶ್ ಸಂಬಂಧಿ ಹೇಮಂತ್ ಪಾಲೊಜಿ ಹಾಗೂ ಹನುಮಂತ ಕಾಂಬಳೆ ಮಧ್ಯೆ ಮೊದಲು ಹಲಗೆ ಬಾರಿಸುವ ವಿಚಾರಕ್ಕೆ ಜಗಳ ನಡೆದಿದೆ. ಹೇಮಂತ್ ಪಾಲೊಜಿ, ಹನುಮಂತ ಕಾಂಬಳೆಗೆ ಇಲ್ಲಿ ಹಲಗೆ ಬಾರಿಸಬೇಡ ಎಂದು ಹೇಳಿದ್ದಾನೆ… ಅಷ್ಟಕ್ಕೇ ಜಗಳ ಶುರುವಾಗಿದೆ.
ಈ ವೇಳೆ ಹೇಮಂತ್ ಕರೆ ಮಾಡಿ ಗಿರೀಶನನ್ನು ಕರೆದಿದ್ದಾನೆ. ಇನ್ನೊಂದು ಕಡೆ ಹನುಮಂತ ತನ್ನ ಸಂಬಂಧಿಕರನ್ನೂ ಕರೆದುಕೊಂಡು ಬಂದಿದ್ದಾನೆ. ಜೊತೆಗೆ ಕಾಮಣ್ಣನ ಗಡಿಗೆಯನ್ನು ಒಡೆದಿದ್ದಾನೆ. ಇವೆರಡೂ ಕಾರಣಕ್ಕೆ ಜಗಳ ನಡೆದಿದೆ. ಜಗಳದಲ್ಲಿ ಹೇಮಂತ್ ಹಾಗೂ ಇತರರು ಎಸ್ಕೇಪ್ ಆದರೆ, ಸ್ಥಳದಲ್ಲಿ ಗಿರೀಶ್ ಸಿಕ್ಕಿಬಿದ್ದಿದ್ದಾನೆ. ಅವನಿಗೆ ಹೊಟ್ಟೆ ಹಾಗೂ ಎದೆಗೆ ಚಾಕು ಇರಿದು ಕೊಲೆ ಮಾಡಲಾಗಿದೆ.
ಚಾಕು ಬಿದ್ದು ನರಳಾಡುತ್ತಿದ್ದರೂ ಯಾರೊಬ್ಬರೂ ಗಿರೀಶ್ ಹತ್ತಿರ ಸುಳಿದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮುಧೋಳ ಠಾಣೆ ಪೊಲೀಸರು ಹಾಗೂ ಸಂಬಂಧಿಕರು ಗಿರೀಶ್ ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಗಿರೀಶ್ ಕೊಲೆಯಾಗಿದ್ದಾನೆ. ಘಟನೆ ಬಗ್ಗೆ ಅಪ್ರಾಪ್ತ ಸೇರಿ ಆರು ಜನರನ್ನು ಮುಧೋಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಣ್ಣದ ಸಂಭ್ರಮದಲ್ಲಿ ಬಣ್ಣದೋಕುಳಿ ಬದಲು ನೆತ್ತರೋಕುಳಿ ಹರಿದಿದ್ದು ಮಾತ್ರ ವಿಪರ್ಯಾಸವೇ ಸರಿ.
ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ