ಇದೀಗ ಅಯೋಧ್ಯೆಯಲ್ಲಿ (ayodhya) ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಕನ್ನಡಿಗ ಶಿಲ್ಪಿ ಅರುಣ ಯೋಗಿರಾಜ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆಯಾಗಿದೆ. ಅದೆ ರೀತಿ ನಾಡಿನಲ್ಲಿ ಕಲ್ಲಿನಲ್ಲಿ ಕಲೆ ಅರಳಿಸುವ ಅದೆಷ್ಟೊ ಶಿಲ್ಪ ಕಲಾವಿದರಿದ್ದಾರೆ (Artist). ಇವರು ಕೆತ್ತಿದ ವಿಗ್ರಹಕ್ಕೆ (Statue) ಪೂಜೆ ಪುನಸ್ಕಾರ ಭಕ್ತಿ ಭರಪೂರ ಸಿಗುತ್ತದೆ. ಆದರೆ ಕೆತ್ತಿದ ಶಿಲ್ಪಿಗಳ ಬದುಕು ಮಾತ್ರ ಅಷ್ಟಕ್ಕಷ್ಟೆ.ಇದರಿಂದ ಶಿಲ್ಪಿಗಳು ನಮಗೆ ಆಸರೆಯಾಗಿ ಅಂತಿದ್ದಾರೆ.
ಉಳಿ ಏಟು ತಿಂದು ಕಲ್ಲು ಶಿಲ್ಪವಾಯಿತು. ಶಿಲ್ಪಕ್ಕೆ ದೇವರ ಪಟ್ಟ ಸಿಕ್ತು. ದೇವರಿಗೆ ಪೂಜೆ ಪುನಸ್ಕಾರ ಅಭಿಷೇಕವಾಯ್ತು. ಆದರೆ ಉಳಿ ಏಟು ನೀಡಿ ಶಿಲ್ಪ ಮಾಡಿದ ಕಲಾವಿದನ ಬದುಕು ಹೊಟ್ಟೆಗೆ ಬಟ್ಟೆಗೆ ಮಾತ್ರ ಸೀಮಿತವಾಗಿದೆ. ಈ ಮಾತಿಗೆ ಸಾಕ್ಷಿ ಶಿಲ್ಪ ಕಲಾವಿದರ ಬದುಕು. ಇದೀಗ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿರುವ ರಾಮಲಲ್ಲಾ ವಿಗ್ರಹ, ಕನ್ನಡಿಗ ಅರುಣ ಅವರು ಕೆತ್ತಿದ ವಿಗ್ರಹ ಎಂಬುದು ಹೆಮ್ಮೆಯ ಸಂಗತಿ. ಇದು ಅಭಿಮಾನದ ವಿಚಾರ. ಆದರೆ ಇಂತಹ ಅದೆಷ್ಟೋ ಶಿಲ್ಪ ಕಲಾವಿದರು ಮೂರ್ತಿ ಕೆತ್ತನೆ ಮೇಲೆಯೇ ಜೀವನ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ೧೦೦ ಕ್ಕೂ ಅಧಿಕ ಶಿಲ್ಪಕಲಾವಿದರಿದ್ದಾರೆ.
ಎಲ್ಲ ಕಲಾವಿದರು ಸೇರಿ ನಿನ್ನೆ ಸೋಮವಾರ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಕಲ್ಲಿನಲ್ಲಿ ಅರಳಿದ ಸುಂದರ ಮೂರ್ತಿಗಳು ಕಟ್ಟಿಗೆಯಲ್ಲಿ ಕೆತ್ತಿದ ಅನೇಕ ಕಲಾಕೃತಿಗಳ ಪ್ರದರ್ಶನ ನಡೆಯಿತು. ಇದೇ ವೇಳೆ ಶಿಲ್ಪ ಕಲಾವಿದರು ಶಿಲೆಗಳನ್ನು ತರಲು ಎದುರಿಸುತ್ತಿರುವ ಸಮಸ್ಯೆಯನ್ನು ಬಿಚ್ಚಿಟ್ಟರು. ಜಿಲ್ಲೆಯ ಶೆಲ್ಲಿಕೇರಿ ಹಾಗೂ ಕಾಗಲಗೊಂಬ ಗ್ರಾಮದ ಕೃಷ್ಣ ಶಿಲೆ ಕಲ್ಲು ವಿಗ್ರಹ ಕೆತ್ತನೆಗೆ ಇಡೀ ರಾಜ್ಯದಲ್ಲೇ ಫೇಮಸ್ ಆಗಿದೆ.
ಆದರೆ ಆ ಕಲ್ಲನ್ನು ತಂದು ಶಿಲ್ಪ ಮಾಡಲು ಶಿಲ್ಪಿಗಳಿಗೆ ಗಣಿ ಇಲಾಖೆ ನಿಯಮ ಅಡ್ಡಿಯಾಗುತ್ತಿದೆ. ನಮ್ಮದು ಶಿಲ್ಪಕಲೆ ನಂಬಿ ಬದುಕು. ಇದು ಯಾವುದೇ ವಾಣಿಜ್ಯೋದ್ಯಮವಲ್ಲ ಭಕ್ತಿ ದೈವತ್ವದ ಕಾಯಕ. ಆದರೆ ಕಲ್ಲು ತರಲು ಕಲ್ಲು ಹೊಂದಿದ ಮಾಲೀಕರಿಗೆ ಗಣಿ ಇಲಾಖೆಯವರು ಹತ್ತಾರು ನಿಯಮ ಹೇರುತ್ತಿದ್ದಾರೆ. ಇದರಿಂದ ನಮಗೆ ಕಲ್ಲು ಪಡೆಯೋದೆ ದೊಡ್ಡ ಸವಾಲಾಗಿದ್ದು ಸರಕಾರ ಶಿಲ್ಪಿಗಳಿಗೆ ವಿಗ್ರಹ ಕಲ್ಲು ನೀಡಲು ನಿಯಮ ಸಡಿಲಿಕೆ ಮಾಡಬೇಕೆನ್ನುತ್ತಿದ್ದಾರೆ ಮೌನೇಶ್ ಕಮ್ಮಾರ, ಶಿಲ್ಪ ಕಲಾವಿದರ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷರು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಸ್ಥಾಪನೆಯಾಗಲಿದೆ ಜಮಾಲುದ್ದೀನ್ ನಿರ್ಮಿಸಿದ ರಾಮನ ವಿಗ್ರಹ
ಬಾಗಲಕೋಟೆಯ ಶೆಲ್ಲಿಕೇರಿ ಕಾಗಲಗೊಂಬ ಗ್ರಾಮ (Shellikeri Kagalagomba village of Bagalkote) ಕೃಷ್ಣಶಿಲೆ ವಿಗ್ರಹ ದೇವಸ್ಥಾನದ ಕಂಬಗಳ ಕೆತ್ತನೆಗೆ ಹೇಳಿ ಮಾಡಿಸಿದ ಶಿಲೆ. ಕಲ್ಲನ್ನು ಬಳಸಿ ಜಿಲ್ಲೆಯ ಕಲಾವಿದರು ರಾಜ್ಯ ಪರರಾಜ್ಯಗಳಿಗೆ ಯಾವುದೇ ದೇವಸ್ಥಾನವಿರಲಿ, ಯಾವುದೇ ಮೂರ್ತಿ ಇರಲಿ ಸುಂದರವಾಗಿ ವಿಗ್ರಹ ಕೆತ್ತನೆ ಮಾಡಿ ಕಳಿಸ್ತಾರೆ. ಪರದೇಶಕ್ಕೂ ಇಲ್ಲಿನ ಶಿಲ್ಪಿಗಳು ವಿಗ್ರಹಗಳನ್ನು ರವಾನಿಸಿದ್ದಾರೆ. ಕಲ್ಲಿಗೆ ಜೀವ ತುಂಬಿದ ರೀತಿ ಇರುವ ಶಿಲ್ಪಿಗಳ ಕೈ ಚಳಕದಲ್ಲಿ ದೇವರು ಜನ್ಮ ತಾಳಿ ನಿಂತಂತಿರುತ್ತದೆ.
ಆದರೆ ಇಂತಹ ಕಲಾವಿದರ ಬದುಕು ಮಾತ್ರ ಅಷ್ಟಕ್ಕಷ್ಟೆ. ಯಾವುದೇ ಆರ್ಥಿಕ ಬಲವಿಲ್ಲದೆ ವಿಗ್ರಹ ಕೆತ್ತನೆ ಮೇಲೆ ಬದುಕು ಸಾಗಿಸುವ ಕಲಾವಿದರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಕಣ್ಣು ಕೈ ಕಾಲು ದೇಹದ ಮೇಲೆ ಸಿಡಿಯುವ ಶಿಲೆಯ ತುಕಡಿಗಳ ನೋವನ್ನು ಸಹಿಸಿಕೊಂಡು ಕಲ್ಲಿನಲ್ಲಿ ಶಿಲ್ಪ ಅರಳಿಸುತ್ತಾರೆ. ಒಂದು ಮೂರ್ತಿಗೆ ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ. ಕಾರ್ಮಿಕರ ಖರ್ಚು, ಪಾಲಿಶ್ ಮಾಡೋದಕ್ಕೆ ಮಷಿನ್ ಬಳಿಕಗೆ ವಿದ್ಯುತ್ ಬಿಲ್ ಎಲ್ಲ ಹಿಡಿದರೆ ಇವರ ಕೈಗೆ ಬರುವ ಹಣ ತುಂಬಾನೆ ಕಡಿಮೆ. ಇದು ಒಂದು ಕಲೆಯಾಗಿದ್ದು ಇದನ್ನು ಉಳಿಸಿ ಬೆಳೆಸೋದು ಮುಖ್ಯವಾಗಿದೆ. ಈ ಹಿನ್ನೆಲೆ ಯುವ ಶಿಲ್ಪ ಕಲಾವಿದರಿಗೆ ಪ್ರೋತ್ಸಾಹ ಧನ, ಮಾಶಾಸನ ಕೊಡಬೇಕು. ನಮಗೆ ಸೂಕ್ತವಾದ ವಸತಿ ಸೌಲಭ್ಯವನ್ನು ಸಲ್ಲಿಸಬೇಕೆಂದು ಶಿಲ್ಪ ಕಲಾವಿದರು ಆಗ್ರಹ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ