ಬಾಯಿ ಚಪಲಕ್ಕೆ ಮಾತನಾಡಬೇಡಿ: ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವ ಮುರುಗೇಶ್ ನಿರಾಣಿ ತಾಕೀತು

’ಒಂದು ವೇಳೆ ಸಾಕ್ಷಿ ನೀಡಲು, ಸಾಬೀತುಪಡಿಸಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ರಾಜಕೀಯಕ್ಕೆ ಬರಬೇಕು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಸವಾಲು ಹಾಕಿದರು.

ಬಾಯಿ ಚಪಲಕ್ಕೆ ಮಾತನಾಡಬೇಡಿ: ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವ ಮುರುಗೇಶ್ ನಿರಾಣಿ ತಾಕೀತು
ಮುರುಗೇಶ ಆರ್ ನಿರಾಣಿ, (ಸಂಗ್ರಹ ಚಿತ್ರ)
Edited By:

Updated on: Dec 24, 2022 | 12:46 PM

ಬಾಗಲಕೋಟೆ: ‘ಜವಾಬ್ದಾರಿ ಸ್ಥಾನದಲ್ಲಿರುವವರು ಯಾರದೋ ಮಾತು ಕೇಳಿ ಬಾಯಿ ಚಪಲಕ್ಕೆ ಮಾತನಾಡಬಾರದು. ಡಿ 29ಕ್ಕೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಸಿಕ್ಕರೆ ನಾವೇ ಸನ್ಮಾನ ಮಾಡುತ್ತೇವೆ’ ಎಂದು ಸಚಿವ ಮುರುಗೇಶ್ ನಿರಾಣಿ ಘೋಷಿಸಿದರು (Murugesh Nirani). ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೈತಪ್ಪಲು ನಿರಾಣಿ ಕಾರಣ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಜಿಲ್ಲೆಯ ನಮ್ಮ ಸಮಾಜದ ಒಬ್ಬ ಸಚಿವರಿಂದ ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ತಪ್ಪಿತು’ ಎಂಬ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ನಾನು ಪಂಚಮಸಾಲಿ ಮೀಸಲಾತಿ ತಪ್ಪಿಸಿದ್ದೇನೆ. ಮೀಸಲಾತಿ ತಪ್ಪಿಸಲೆಂದು ಇಂಥವರ ಜೊತೆಗೆ ಮಾತನಾಡಿದ್ದೇನೆ. ಇಂಥ ಜಾಗದಲ್ಲಿ ಭಾಷಣ ಮಾಡಿದದ್ದೇನೆ ಎಂದು ಸ್ವಾಮೀಜಿ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಕ್ಷಿ ನೀಡಲು, ಸಾಬೀತುಪಡಿಸಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ರಾಜಕೀಯಕ್ಕೆ ಬರಬೇಕು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಸವಾಲು ಹಾಕಿದರು.

ನಿಮ ಪೀಠದಿಂದ ನಿಮ್ಮ ಕ್ಷೇತ್ರದ (ಹುನಗುಂದ) ಪಂಚಮಸಾಲಿ ಸಮಾಜದ ಅಭ್ಯರ್ಥಿಯನ್ನು (ವಿಜಯಾನಂದ ಕಾಶಪ್ಪನವರ) ಗೆಲ್ಲಿಸಲು ಆಗಲಿಲ್ಲ. ಬಾಗಲಕೋಟೆಯಲ್ಲಿ ಎಂಪಿ (ವೀಣಾ ಕಾಶಪ್ಪನವರ) ಸ್ಥಾನಕ್ಕೆ ಪಂಚಮಸಾಲಿ ಅಭ್ಯರ್ಥಿಯನ್ನು ಗೆಲ್ಲಿಸಲು ಆಗಲಿಲ್ಲ. ಧಾರವಾಡದಲ್ಲಿ ವಿನಯ ಕುಲಕರ್ಣಿ ಸಹ ಗೆಲ್ಲಲಿಲ್ಲ. ಅಭ್ಯರ್ಥಿಗಳನ್ನು ಗೆಲ್ಲಿಲುವುದು ಅಥವಾ ಕೆಡವುವುದು ಜನರ ಕೈಲಿರುತ್ತದೆ ಎಂದು ವಿವರಿಸಿದರು.

ಮೀಸಲಾತಿ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡುತ್ತಿರುವ ಹೇಳಿಕೆಗಳ ಬಗ್ಗೆಯೂ ಅವರು ಕಿಡಿಕಾರಿದರು. ‘ಎಲ್ಲ ಸಮಾಜದವರಿಗೂ ಮೀಸಲಾತಿ ಸಿಗಬೇಕು ಎಂದು ಇವರು ಹೇಳುತ್ತಿದ್ದಾರೆ. ಎಲ್ಲಾ ಸಮಾಜಗಳನ್ನು ಇವರು ಗುತ್ತಿಗೆಗೆ ಪಡೆದಿದ್ದಾರೆಯೇ? ನಿಮ್ಮ ಮಾತುಗಳನ್ನು ಜನರು ಗಮನಿಸುತ್ತಿದ್ದಾರೆ. ನಾನು ಬಿಜೆಪಿಯಲ್ಲಿಯೇ ಇರುವುದು. ಇಲ್ಲಿಯೇ ಸಾಯುವುದು. ನಿಮ್ಮಂತೆ ಬಿಜೆಪಿಗೆ ಬಂದಾಗ ಹಿಂದುತ್ವ. ಜೆಡಿಎಸ್​ಗೆ ಹೋದಾಗ ಟೋಪಿ ಹಾಕುವವ ನಾನಲ್ಲ’ ಎಂದು ಹೇಳಿದರು.

ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪ್ರಕಟಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ: ಬಸನಗೌಡ ಯತ್ನಾಳ್

‘ಸರಕಾರ ತರುತ್ತೇವೆ, ಸರಕಾರ ಕೆಡವುತ್ತೇವೆ ಎಂದೆಲ್ಲಾ ಹೇಳುತ್ತೀರಿ. ಈ ರೀತಿ ಉದ್ಧಟತನದ ಮಾತು ಸಲ್ಲದು. ಒಂದು ಕಡೆ ಇದ್ದಾಗ ಇನ್ನೊಂದು ಪಕ್ಷಕ್ಕೆ ಬೈಯುವುದು, ಹೊತ್ತು ಬಂದಾಗ ಛತ್ರಿ ಹಿಡಿಯೋದು ನಿರಾಣಿ ಜಾಯಮಾನವಲ್ಲ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಸಮಾಜಕ್ಕೆ ನಿಷ್ಠನಾಗಿರುತ್ತೇನೆ’ ಎಂದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗದಿದ್ದರೆ ಬಾರುಕೋಲು ಚಳವಳಿ ಮಾಡುವ ಕಾಶಪ್ಪನವರ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, ಹೆಸರು ಹೇಳದೇ ಕಾಶಪ್ಪನವರ ವಿರುದ್ದ ಹರಿಹಾಯ್ದರು. ನಿಮ್ಮ ತಂದೆಯವರೇ ಮಂತ್ರಿ ಆಗಿದ್ದರು. ಸಮಾಜದ ರಾಜ್ಯಾಧ್ಯಕ್ಷರೂ ಆಗಿದ್ದರು. ಆ ಸಮಯದಲ್ಲಿ ಏಕೆ ಮೀಸಲಾತಿ ಜಾರಿ ಮಾಡಲಿಲ್ಲ? ಆಗ ಸರ್ಕಾರ ಇತ್ತು. ಮಂತ್ರಿಯೂ ಇದ್ದರು. ಆದರೂ ಏಕೆ 3ಬಿ, 2ಎಗೆ ಸೇರಿಸಲು ಆಗಲಿಲ್ಲ. ಅಗ ಎಲ್ಲಿತ್ತು ನಿನ್ನ ಬಾರುಕೋಲು ಎಂದು ಪ್ರಶ್ನಿಸಿದರು.

‘ಯಾರೇ ಆಗಲಿ ಆತ್ಮಾವಲೋಕನ‌ ಮಾಡಕೊಂಡು ಮಾತಾಡಬೇಕು. ನನ್ನನ್ನು ಸೋಲಿಸಿಯೇ ತೀರ್ತೀನಿ ಎಂದು ಕೆಲವರು ಸವಾಲು ಹಾಕಿದ್ದಾರೆ. ನನ್ನನ್ನು ಸೋಲಿಸುವುದು, ಗೆಲ್ಲಿಸುವುದು ನನ್ನ ಬೀಳಗಿ ವಿಧಾನಸಭಾ ಕ್ಷೇತ್ರದ ಜನರು. ಅವರ ಆಶೀರ್ವಾದದಿಂದ ನಾನು ಗೆದ್ದಿದ್ದೀನಿ. ನಾನು ಮಂತ್ರಿ ಆಗಿದ್ದು ಪಕ್ಷದ ಹಿರಿಯರಿಂದ. ನೀನು ಕಾಂಗ್ರೆಸ್​ನಲ್ಲಿದಿಯಾ, ನಾನು ಬಿಜೆಪಿಯಲ್ಲಿದೀನಿ. ಪಕ್ಷ ಅಂತಾ ಬಂದಾಗ ನೀನು ನನಗೆ ವಿರೋಧಿನೆ. ನೀನು ನನ್ನ ಸೋಲಿಸಬಹುದು, ನಾನು ನಿನ್ನ ಸೋಲಿಸಬಹುದು. ಅದನ್ನ ನಾನು ಚಾಲೆಂಜ್ ಅಗಿ ತಗೊಳ್ತೀನಿ ಅದನ್ನು ನೀನು ಮುಂದುವರೆಸಬಹುದು’ ಎಂದರು.

ಬಾಗಲಕೋಟೆ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Sat, 24 December 22