ಬಾಗಲಕೋಟೆ: ಪಿಂಚಣಿಗಾಗಿ (Pension Scheme) ಆಗ್ರಹಿಸಿ ಪ್ರತಿಭಟನಾನಿರತ ನಿವೃತ್ತ ಶಿಕ್ಷಕ (Retired Teacher) ಸಿದ್ದಯ್ಯ ಹಿರೆಮಠ (Siddaiah Hiremath) ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನ ಮನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿದ್ದಾರೆ. ಬಾಗಲಕೋಟೆ (Bagalkote) ಜಿಲ್ಲೆಯ ಬಾದಾಮಿ (Badami) ತಾಲೂಕಿನ ಪಟ್ಟದಕಲ್ಲಿನಲ್ಲಿರುವ ಶಿಕ್ಷಕನ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯನವರು, ಕುಟುಂಬಕ್ಕೆ ಸಾಂತ್ವಾನ ಹೇಳಿ 2 ಲಕ್ಷ ರೂ. ನೆರವು ನೀಡಿದ್ದಾರೆ.
ಈ ವೇಳೆ ಕುಟುಂಬಸ್ಥರೊಂದಿಗೆ ಮಾತನಾಡಿದ ಸಿದ್ದರಾಮಯ್ಯ 2006ನೇ ಇಸ್ವಿಯಲ್ಲಿ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂತು. ಇದನ್ನು ಕೇಂದ್ರ ಸರಕಾರ ತೀರ್ಮಾನ ಮಾಡುತ್ತೆ. ಅವರು ಮಾಡಿದ್ದನ್ನು ರಾಜ್ಯ ಸರಕಾರ ಮಾಡುತ್ತದೆ. ನಾವು ಈ ಬಗ್ಗೆ ಪರಿಶೀಲು ಹೇಳಿದ್ದೇವೆ. ಈಗ ನಾವು ಸರಕಾರದಲ್ಲಿ ಇಲ್ಲ. ಸರಕಾರದಲ್ಲಿ ಇರುವವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರು ತೀರ್ಮಾನವನ್ನು ಮಾಡಬೇಕು ಎಂದು ಹೇಳಿದರು
ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ಸಂಘದಿಂದ ಮುಷ್ಕರದಲ್ಲಿ ಭಾಗಿಯಾಗಿದ್ದ ನಿವೃತ್ತ ಶಿಕ್ಷಕರಿಬ್ಬರು ಫೆ.23 ರಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದರು. ಆ ಪೈಕಿ ಒಬ್ಬ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ (65) ಚಿಕಿತ್ಸೆ ಫಲಿಸದೆ ಫೆ. 24 ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮೃತ ನಿವೃತ್ತ ಶಿಕ್ಷಕ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ನಿವಾಸಿ. ಆಮರಣ, ಅರೆಬೆತ್ತಲೆ, ಭಿಕ್ಷಾಟನೆ ಎಲ್ಲ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
1990 ರಿಂದ ಅನುದಾನರಹಿತ ಶಾಲೆಯಲ್ಲಿ ಶಿಕ್ಷಕರಾಗಿದ್ದು, 2008ರಲ್ಲಿ ಸೇವೆ ಸಲ್ಲಿಸುತ್ತಿದ್ದ ಶಾಲೆ ಅನುದಾನಕ್ಕೆ ಒಳಪಟ್ಟಿತ್ತು. ಬಳಿಕ 2012ರಲ್ಲಿ ನಿವೃತ್ತಿ ಹೊಂದಿದ್ದರು. 9 ವರ್ಷ ಮಾತ್ರ ಸರಕಾರಿ ವೇತನ ಪಡೆದಿದ್ದರು. ನಿವೃತ್ತಿ ನಂತರ ಯಾವುದೇ ಪಿಂಚಣಿಗೆ ಅರ್ಹತೆಯಾಗಲಿಲ್ಲ. ಸದ್ಯ ಪತ್ನಿ, ನಾಲ್ಕು ಜನ ಹೆಣ್ಣುಮಕ್ಕಳು ಒಬ್ಬ ಮಗನನ್ನು ಅಗಲಿದ್ದಾರೆ.
ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ಸಂಘದಿಂದ ಪಿಂಚಣಿಗಾಗಿ 141 ದಿನಗಳಿಂದ ಶಿಕ್ಷಕರು ಮುಷ್ಕರ ನಡೆಸುತ್ತಿದ್ದಾರೆ. ಸಿದ್ದಯ್ಯ ಜೊತೆಗೆ ನಿವೃತ್ತ ಶಿಕ್ಷಕ ವೆಂಕಟರಾಜು ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ